ಬೆಂಗಳೂರು: ‘ಲೋಕಸಭೆ ಚುನಾವಣೆ ತಯಾರಿಗೆ ಜ.10ರಂದು ಕೇಂದ್ರ ನಾಯಕರು ಹಾಗೂ ಎಲ್ಲ ಶಾಸಕರ ಸಭೆ ನಡೆಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ 139ನೇ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದರ ಬಗ್ಗೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಗುವುದು. ಮನೆ, ಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಮಾಡುವಂತೆಯೂ ಕಾರ್ಯಕರ್ತರಿಗೆ ತಿಳಿಸಲಾಗುವುದು’ ಎಂದರು.
‘ಆರೆಸ್ಸೆಸ್‌ಗೂ ರಾಮಮಂದಿರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಬಿಜೆಪಿ, ಆರೆಸ್ಸೆಸ್‌ನವರು ಮನೆ, ಮನೆಗೆ ತೆರಳಿ, ಅಕ್ಷತೆ ಕೊಟ್ಟು ಇಲ್ಲಿಂದಲೇ ರಾಮಮಂದಿರಕ್ಕೆ ನಮನ ಸಲ್ಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಪ್ರತಿಯೊಂದು ವಾರ್ಡ್, ಪಂಚಾಯಿತಿಯಲ್ಲಿ ಆಶ್ರಯ ಸಮಿತಿ ಸೇರಿದಂತೆ ಅನೇಕ ಸಮಿತಿಗಳಿವೆ. ಆ ಸಮಿತಿಗಳಲ್ಲಿ ಕಾರ್ಯಕರ್ತರಿಗೆ ಶೀಘ್ರ ಸ್ಥಾನಗಳನ್ನು ಕಲ್ಪಿಸಲಾಗುವುದು. ಎರಡು ವರ್ಷಗಳಿಗೆ ಒಮ್ಮೆ ಬದಲಾವಣೆ ಮಾಡಬೇಕೆಂಬ ಚಿಂತನೆಯಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.