
ಮೇಕೆದಾಟು ಪ್ರದೇಶ
ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ 12,692 ಎಕರೆ ಕಾಡು ಬಳಕೆಗೆ ಅನುಮೋದನೆ ಪಡೆಯಲು ಕಾವೇರಿ ನೀರಾವರಿ ನಿಗಮವು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯಕ್ಕೆ ಸೋಮವಾರ ಮತ್ತೆ ಪ್ರಸ್ತಾವ ಸಲ್ಲಿಸಿದೆ.
ಮೇಕೆದಾಟು ಯೋಜನೆ ಆಕ್ಷೇಪಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನವೆಂಬರ್‌ನಲ್ಲಿ ವಜಾಗೊಳಿಸಿತ್ತು. ಕೇಂದ್ರ ಜಲ ಆಯೋಗಕ್ಕೆ ಎರಡು ತಿಂಗಳೊಳಗೆ ಎಲ್ಲ ದಾಖಲೆಗಳನ್ನು ಸಲ್ಲಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ತಿಳಿಸಿದ್ದರು.
ಯೋಜನೆಗೆ ಅರಣ್ಯ ಬಳಕೆಗೆ ಅನುಮೋದನೆ ಕೋರಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಗಳನ್ನು ಕೇಂದ್ರ ಪರಿಸರ ಸಚಿವಾಲಯವು 2024ರ ಅಕ್ಟೋಬರ್‌ನಲ್ಲಿ ಡಿ ಲಿಸ್ಟ್ (ಪಟ್ಟಿಯಿಂದ ತೆಗೆದು ಹಾಕು) ಮಾಡಿತ್ತು. ‘ಯೋಜನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಯೋಜನೆಗೆ ಈವರೆಗೆ ಯಾವುದೇ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ‘ ಎಂದು ನಿಗಮದ ಮುಖ್ಯ ಎಂಜಿನಿಯರ್ ಅವರು ಪ್ರಸ್ತಾವದಲ್ಲಿ ತಿಳಿಸಿದ್ದಾರೆ. ಅದರ ಬೆನ್ನಲ್ಲೇ, ಸಚಿವಾಲಯವು ಪರಿಶೀಲನಾ ಪ್ರಕ್ರಿಯೆ ಆರಂಭಿಸಿದೆ. ಯೋಜನೆ ಕಾರ್ಯಗತಗೊಳಿಸಲು ರಾಜ್ಯ ಸರ್ಕಾರವು ಅರಣ್ಯ ಹಾಗೂ ವನ್ಯಜೀವಿ ಅನುಮೋದನೆಗಳನ್ನು ಪಡೆಯಬೇಕಿದೆ.
ಯಾವುದೇ ಯೋಜನೆಗೆ ಅನುಮೋದನೆ ಪಡೆಯುವ ಮುನ್ನ ಯೋಜನೆಯ ಉದ್ದೇಶ, ವ್ಯಾಪ್ತಿ ಹಾಗೂ ಪಾಲಿಸಬೇಕಾದ ನಿಯಮಗಳನ್ನು (ಟಿಒಆರ್) ದಾಖಲಿಸಿ ಒಪ್ಪಿಗೆ ಪಡೆಯುವುದು ಅತ್ಯಗತ್ಯ ಪ್ರಕ್ರಿಯೆ. ಟಿಒಆರ್‌ಗೆ ಒಪ್ಪಿಗೆ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸಚಿವಾಲಯಕ್ಕೆ 2019ರ ಜೂನ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವಾಲಯವು 2022ರ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆಯನ್ನು ‘ಡಿ ಲಿಸ್ಟ್’ ಮಾಡಿತ್ತು. ‘ಈ ಯೋಜನೆಯು ಅಂತರ್ ರಾಜ್ಯ ಜಲ ವಿವಾದವನ್ನು ಒಳಗೊಂಡಿದೆ. ಹೀಗಾಗಿ, ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕ ಬಳಿಕ ಹಾಗೂ ಜಲಶಕ್ತಿ ಸಚಿವಾಲಯವು ಡಿಪಿಆರ್‌ಗೆ ಒಪ್ಪಿಗೆ ನೀಡಿದ ನಂತರವಷ್ಟೇ ಟಿಒಆರ್‌ಗೆ ಒಪ್ಪಿಗೆ ನೀಡಲಾಗುವುದು’ ಎಂದು ಪರಿಸರ ಸಚಿವಾಲಯ ಸ್ಪಷ್ಟಪಡಿಸಿತ್ತು.
ರಾಜ್ಯ ಸರ್ಕಾರವು 2024ರ ಮೇ 29ರಂದು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿತ್ತು. ಅಂತರ್ ರಾಜ್ಯ ಜಲವಿವಾದ, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣಗಳ ಬಗ್ಗೆ ಸಚಿವಾಲಯವು ವಿವರಣೆ ಕೇಳಿತ್ತು. ಈ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು. ಈ ಉತ್ತರದಿಂದ ಸಮಾಧಾನಗೊಳ್ಳದ ಸಚಿವಾಲಯವು ಜುಲೈ 25ರಂದು ಇನ್ನಷ್ಟು ಸ್ಪಷ್ಟನೆಗಳನ್ನು ಕೇಳಿತ್ತು. ಆದರೆ, ರಾಜ್ಯ ಸರ್ಕಾರವು ಪ್ರತಿಕ್ರಿಯೆ ನೀಡಿರಲಿಲ್ಲ. ಆ ಬಳಿಕ, ಸಚಿವಾಲಯವು ಡಿ–ಲಿಸ್ಟ್ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.