ಮೇಕೆದಾಟು ಪ್ರದೇಶದ ಸೊಬಗು
ಕೇಂದ್ರದ ಪಟ್ಟಿಯಿಂದ 5,077 ಹೆಕ್ಟೇರ್ ಅರಣ್ಯ ಬಳಕೆಯ ಪ್ರಸ್ತಾವ ‘ಹೊರಕ್ಕೆ’ l ಆರಂಭಿಕ ಹಂತದಲ್ಲೇ ಹಿನ್ನಡೆ
ನವದೆಹಲಿ: ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ಯೋಜನೆಗೆ 5,200 ಹೆಕ್ಟೇರ್ (12,692 ಎಕರೆ) ಅರಣ್ಯ ಬಳಕೆಗೆ ಅನುಮೋದನೆ ಪಡೆಯಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ಪಟ್ಟಿಯಿಂದ ‘ತೆಗೆದು ಹಾಕಿದೆ’ (ಡಿ–ಲಿಸ್ಟ್). ಇದರಿಂದಾಗಿ, ಅರಣ್ಯ ಬಳಕೆಗೆ ಇರುವ ಮೂರು ಕಗ್ಗಂಟುಗಳನ್ನು ಬಿಡಿಸಲು ಹೆಜ್ಜೆ ಇಟ್ಟಿದ್ದ ರಾಜ್ಯ ಸರ್ಕಾರಕ್ಕೆ ಆರಂಭಿಕ ಹಂತದಲ್ಲೇ ಹಿನ್ನಡೆಯಾಗಿದೆ.
ಯಾವುದೇ ಯೋಜನೆಗೆ ಅನುಮೋದನೆ ಪಡೆಯುವ ಮುನ್ನ ಯೋಜನೆಯ ಉದ್ದೇಶ, ವ್ಯಾಪ್ತಿ ಹಾಗೂ ಪಾಲಿಸಬೇಕಾದ ನಿಯಮಗಳನ್ನು (ಟಿಒಆರ್) ದಾಖಲಿಸಿ ಒಪ್ಪಿಗೆ ಪಡೆಯುವುದು ಅತ್ಯಗತ್ಯ ಪ್ರಕ್ರಿಯೆ. ಟಿಒಆರ್‌ಗೆ ಒಪ್ಪಿಗೆ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸಚಿವಾಲಯಕ್ಕೆ 2019ರ ಜೂನ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವಾಲಯವು 2022ರ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆಯನ್ನು ‘ಡಿ ಲಿಸ್ಟ್’ ಮಾಡಿತ್ತು. ‘ಈ ಯೋಜನೆಯು ಅಂತರ್ ರಾಜ್ಯ ಜಲ ವಿವಾದವನ್ನು ಒಳಗೊಂಡಿದೆ. ಹೀಗಾಗಿ, ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕ ಬಳಿಕ ಹಾಗೂ ಜಲಶಕ್ತಿ ಸಚಿವಾಲಯವು ಡಿಪಿಆರ್‌ಗೆ ಒಪ್ಪಿಗೆ ನೀಡಿದ ನಂತರವಷ್ಟೇ ಟಿಒಆರ್‌ಗೆ ಒಪ್ಪಿಗೆ ನೀಡಲಾಗುವುದು’ ಎಂದು ಪರಿಸರ ಸಚಿವಾಲಯ ಸ್ಪಷ್ಟಪಡಿಸಿತ್ತು.
ರಾಜ್ಯ ಸರ್ಕಾರವು 2024ರ ಮೇ 29ರಂದು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿತ್ತು. ಅಂತರ್ ರಾಜ್ಯ ಜಲವಿವಾದ, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣಗಳ ಬಗ್ಗೆ ಸಚಿವಾಲಯವು ವಿವರಣೆ ಕೇಳಿತ್ತು. ಈ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು. ಈ ಉತ್ತರದಿಂದ ಸಮಾಧಾನಗೊಳ್ಳದ ಸಚಿವಾಲಯವು ಜುಲೈ 25ರಂದು ಇನ್ನಷ್ಟು ಸ್ಪಷ್ಟನೆಗಳನ್ನು ಕೇಳಿತ್ತು. ಆದರೆ, ರಾಜ್ಯ ಸರ್ಕಾರವು ಪ್ರತಿಕ್ರಿಯೆ ನೀಡಿರಲಿಲ್ಲ. ಆ ಬಳಿಕ, ಸಚಿವಾಲಯವು ಡಿ–ಲಿಸ್ಟ್ ಮಾಡಿದೆ.
ಕೇಂದ್ರ ಕೇಳಿದ್ದೇನು, ರಾಜ್ಯ ಹೇಳಿದ್ದೇನು?
*ಕೇಂದ್ರ ಅರಣ್ಯ ಸಚಿವಾಲಯ: ಯೋಜನೆಯ ಡಿಪಿಆರ್ ಸ್ಥಿತಿಗತಿ ಕುರಿತು ವಿವರ ಒದಗಿಸಿ.
ರಾಜ್ಯ ಸರ್ಕಾರ: ಕೇಂದ್ರ ಜಲ ಆಯೋಗವು ಡಿಪಿಆರ್ ಅನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಪರಿಶೀಲನೆಗೆ ಕಳುಹಿಸಿತ್ತು. ಆದರೆ, ಪ್ರಾಧಿಕಾರವು 2024ರ ಫೆ.1ರಂದು ಡಿಪಿಆರ್ ಅನ್ನು ಜಲ ಆಯೋಗಕ್ಕೆ ವಾಪಸ್ ಕಳುಹಿಸಿದೆ.
*ಕೇಂದ್ರ: ಯೋಜನೆಯಲ್ಲಿ ಒಳಗೊಂಡಿರುವ ನ್ಯಾಯಾಲಯದ ಪ್ರಕರಣಗಳ ವಿವರಗಳು ಮತ್ತು ಅದರ ಆದೇಶಗಳ ಬಗ್ಗೆ ವಿವರ ನೀಡಿ.
ರಾಜ್ಯ: ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿನ ಪ್ರಕರಣ ಇತ್ಯರ್ಥವಾಗಿದೆ. ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.
*ಕೇಂದ್ರ: ಅಂತರ್ ರಾಜ್ಯ ವಿವಾದದ ಕುರಿತು ಸ್ಪಷ್ಟನೆ ನೀಡಿ.
ರಾಜ್ಯ: ಜಲ ಆಯೋಗಕ್ಕೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಯನ್ನು ಅಂತರ್ ರಾಜ್ಯ ನಿರ್ದೇಶನಾಲಯ ಸೇರಿದಂತೆ ವಿವಿಧ ನಿರ್ದೇಶನಾಲಯಗಳು ಪರಿಶೀಲನೆ ನಡೆಸುತ್ತಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಕಾವೇರಿ ನೀರು ನ್ಯಾಯಮಂಡಳಿ ಆದೇಶ ನಿರ್ಬಂಧ ವಿಧಿಸಿಲ್ಲ. ಹೀಗಾಗಿ, ಕಾವೇರಿ ನೀರು ಬಳಕೆಗೆ ರಾಜ್ಯದೊಳಗೆ ಯಾವುದೇ ಯೋಜನೆ ಕೈಗೆತ್ತಿಕೊಳ್ಳಬಹುದು. ಟಿಒಆರ್‌ಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರ ನಿರಂತರವಾಗಿ ಅರ್ಜಿ ಸಲ್ಲಿಸುತ್ತಿದೆ. ಆದರೆ, ಆರು ವರ್ಷಗಳಿಂದ ಬಾಕಿ ಉಳಿದಿದೆ. ಪರಿಸರ ಪರಿಣಾಮಗಳ ಅಧ್ಯಯನ ಹಾಗೂ ಪರಿಸರ ನಿರ್ವಹಣೆ ಯೋಜನೆ ರೂಪಿಸಲು ಟಿಒಆರ್ ಅನುಮೋದನೆ ಅಗತ್ಯ. ಹಾಗಾಗಿ, ಪರಿಸರ ಸಚಿವಾಲಯ ತುರ್ತಾಗಿ ಈ ಬಗ್ಗೆ ಕ್ರಮ ವಹಿಸಬೇಕು.
ರಾಜ್ಯ ಸರ್ಕಾರದ ಮುಂದಿರುವ ಸವಾಲುಗಳು
*ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ವಿಸ್ತೃತ ಯೋಜನಾ ವರದಿಗೆ ಒಪ್ಪಿಗೆ ಪಡೆಯುವುದು
*ಈ ಯೋಜನೆಯು ಕಾವೇರಿ ವನ್ಯಜೀವಿಧಾಮದಲ್ಲಿ ಅನುಷ್ಠಾನಗೊಳ್ಳಲಿದೆ. ಜತೆಗೆ, ಆನೆ ಕಾರಿಡಾರ್ ಹಾಗೂ ಹುಲಿ ಕಾರಿಡಾರ್ ವ್ಯಾಪ್ತಿಗೆ ಬರಲಿದೆ. ಹೀಗಾಗಿ, ಪ್ರತ್ಯೇಕವಾಗಿ ಅರಣ್ಯ, ಪರಿಸರ ಹಾಗೂ ವನ್ಯಜೀವಿ ಅನುಮೋದನೆ ಪಡೆಯಬೇಕಿದೆ
*ಡಿಪಿಆರ್ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ 2021ರಲ್ಲಿ ದಾವೆ ಹೂಡಿತ್ತು. ಈ ಪ್ರಕರಣವು 2022 ಹಾಗೂ 2023ರಲ್ಲಿ ವಿಚಾರಣೆಗೆ ಬಂದಿತ್ತು. 2023ರ ಸೆಪ್ಟೆಂಬರ್ 21ರಂದು ನ್ಯಾಯಪೀಠವು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತ್ತು. ಆ ಬಳಿಕ ಪ್ರಕರಣವು ವಿಚಾರಣೆಗೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.