ADVERTISEMENT

ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ಋತುಚಕ್ರ ರಜೆ ಮಂಜೂರು: ಆರ್ಥಿಕ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 16:08 IST
Last Updated 2 ಡಿಸೆಂಬರ್ 2025, 16:08 IST
   

ಬೆಂಗಳೂರು: ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ತಕ್ಷಣದಿಂದಲೇ ಜಾರಿಯಾಗುವಂತೆ ತಿಂಗಳಿಗೆ ಒಂದು ಋತುಚಕ್ರ ರಜೆಯನ್ನು ಮಂಜೂರು ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.

ಋತುಚಕ್ರ ಹೊಂದಿರುವ 18 ವರ್ಷದಿಂದ 52 ವರ್ಷ ವಯಸ್ಸಿನ ಮಹಿಳಾ ಸರ್ಕಾರಿ ನೌಕರರಿಗೆ ಈ ರಜೆ ಅನ್ವಯವಾಗಲಿದೆ. ತಿಂಗಳಿಗೆ ಒಂದರಂತೆ ವರ್ಷಕ್ಕೆ ಒಟ್ಟು 12 ಋತುಚಕ್ರ ರಜೆ ಪಡೆಯಬಹುದು.

ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವೇ ಈ ರಜೆಯನ್ನೂ ಮಂಜೂರು ಮಾಡಬಹುದಾಗಿದೆ. ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕಿಲ್ಲ. ಜತೆಗೆ ಈ ರಜೆಯನ್ನು ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ADVERTISEMENT

ಮಾತೃತ್ವ ರಜೆ ಹೆಚ್ಚಳಕ್ಕೆ ಆಗ್ರಹ

ಬೆಂಗಳೂರು: ‘8ನೇ ವೇತನ ಆಯೋಗ ಜಾರಿ, ಹೊಸ ಪಿಂಚಣಿ ವ್ಯವಸ್ಥೆ
(ಎನ್‌ಪಿಎಸ್) ರದ್ದತಿ, ಮಾತೃತ್ವರಜೆ ಒಂದು ವರ್ಷಕ್ಕೆ ವಿಸ್ತರಣೆ ಸೇರಿ ವಿವಿಧ ಈಡೇರಿಕೆಗಳನ್ನು ಈಡೇರಿಸುವಂತೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಆಗ್ರಹಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ರೋಶನಿಗೌಡ, ‘ಇದೇ 4ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಮಹಿಳಾ ನೌಕರರ ಸಮ್ಮೇಳನ ಹಮ್ಮಿಕೊಂಡಿದ್ದು ಅಲ್ಲಿ ಈ ಬಗ್ಗೆ ಒತ್ತಾಯಿಸಲಾಗುವುದು’ ಎಂದರು.  

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಋತುಚಕ್ರ ರಜೆ ಘೋಷಿಸಿರುವ ಮುಖ್ಯಮಂತ್ರಿ ಅವರಿಗೆ ಇದೇ ವೇಳೆ ಅಭಿನಂದನೆ
ಸಲ್ಲಿಸಲಾಗುತ್ತದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.