
ಬೆಂಗಳೂರು: ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಕಾಯ್ದೆ ಮರು ಜಾರಿ ಆಗುವವರೆಗೆ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ ರಾಜ್ಯ ಕಾಂಗ್ರೆಸ್ ನಾಯಕರು, ‘ನರೇಗಾ ಉಳಿಸಿ ಅಭಿಯಾನವನ್ನು ಜನಾಂದೋಲನವಾಗಿ ಪರಿವರ್ತಿಸುತ್ತೇವೆ’ ಎಂದು ಘೋಷಿಸಿದರು.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕೆಪಿಸಿಸಿ ವತಿಯಿಂದ ಮಂಗಳವಾರ ನಡೆದ ‘ನರೇಗಾ ಬಚಾವೊ ಸಂಗ್ರಾಮ’ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವಿಬಿ ಜಿ ರಾಮ್ ಜಿ ಕಾಯ್ದೆ ರದ್ದಾಗಿ ನರೇಗಾ ಕಾಯ್ದೆ ಪುನರ್‌ಸ್ಥಾಪನೆ ಆಗುವವರೆಗೆ ಹೋರಾಟವನ್ನು ಮುಂದುವರಿಸಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
‘ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯಲಿರುವ ಈ ಆಂದೋಲನ ಜನಾಂದೋಲನವಾಗಿ ಪರಿವರ್ತನೆ ಆಗಬೇಕು. ಉತ್ತರ ಭಾರತದಲ್ಲಿ ಕೃಷಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆ ನಾವೂ ಹೋರಾಟ ಮಾಡಬೇಕು’ ಎಂದರು.
‘ನರೇಗಾ ಕಾಯ್ದೆ ರದ್ದು ಮಾಡಿರುವುದನ್ನು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರ ನರೇಗಾ ರದ್ದು ಮಾಡಿ, ವಿಬಿ ಜಿ ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ರೂಪಿಸಿದೆ. ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಯವರಿಗೆ ಅಲರ್ಜಿ’ ಎಂದರು.
‘ಹಳೆ ಕಾಯ್ದೆ ಪ್ರಕಾರ ಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿ 365 ದಿನ ಕೆಲಸ ಕೇಳಬಹುದಾಗಿತ್ತು. ತಮ್ಮ ಊರಿನಲ್ಲಿ, ಜಮೀನಿನಲ್ಲಿಯೇ ಕೆಲಸ ಮಾಡಬಹುದಾಗಿತ್ತು. ಮೋದಿ ಸರ್ಕಾರ ಅದನ್ನು ಬದಲಾಯಿಸಿ ಹೊಸ ಕಾಯ್ದೆ ಜಾರಿಗೆ ತಂದಿದೆ. ಹೊಸ ಕಾಯ್ದೆಯಲ್ಲಿರುವ ರಾಮ, ದಶರಥ ರಾಮ, ಸೀತಾ ರಾಮ ಅಥವಾ ಕೌಶಲ ರಾಮನಲ್ಲ. ಅದು ಮಹಾತ್ಮಾ ಗಾಂಧಿ ಕೊಂದ ನಾಥೂರಾಮ’ ಎಂದರು.
ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಗೋಪಿನಾಥ್ ಪಳನಿಯಪ್ಪನ್, ಮಯೂರ್ ಜೈಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಸಚಿವರಾದ ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಎಂ.ಸಿ.ಸುಧಾಕರ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಎನ್. ಚಲುವರಾಯಸ್ವಾಮಿ, ಶಿವರಾಜ್ ತಂಗಡಗಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮತ್ತಿತರರು ಇದ್ದರು.
ಕೈಜೋಡಿಸದಿದ್ದರೆ ಹುದ್ದೆಗೆ ಕುತ್ತು– ಡಿಕೆಶಿ
‘ನರೇಗಾ ಬಚಾವೊ ಹೋರಾಟದಲ್ಲಿ ಆಸಕ್ತಿ ತೋರಿಸದ ಪಕ್ಷದ ವೀಕ್ಷಕರು ಪದಾಧಿಕಾರಿಗಳನ್ನು ಹುದ್ದೆಯಿಂದ ಕಿತ್ತುಹಾಕಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು. ‘ಸಂಸದರು ಶಾಸಕರು ಪರಿಷತ್ ಸದಸ್ಯರು ಇಲ್ಲದ ಕ್ಷೇತ್ರಗಳಲ್ಲಿ ಹೋರಾಟಕ್ಕೆ ಬಲ ನೀಡಲು ವೀಕ್ಷಕರನ್ನು ನೇಮಿಸಲಾಗಿದೆ. ಎಐಸಿಸಿ ನಿರ್ದೇಶನ ನೀಡಿರುವ ಎಲ್ಲ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಸೂಚನೆಯನ್ನು ಪಾಲಿಸದವರ ಬಗ್ಗೆ ವರದಿ ನೀಡುವಂತೆ ಎಐಸಿಸಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. ಪಕ್ಷದಲ್ಲಿ ಸ್ಥಾನಮಾನ ಸಿಗಬೇಕೆಂದರೆ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು’ ಎಂದು ಪಕ್ಷದ ಪ್ರಮುಖರಿಗೆ ಸೂಚಿಸಿದರು. ‘ನರೇಗಾ ಉಳಿಸಿ ಹೋರಾಟದ ಭಾಗವಾಗಿ ನಡೆಯಲಿರುವ ಪಾದಯಾತ್ರೆಯ ನೇತೃತ್ವವನ್ನು ಸಚಿವರು ಶಾಸಕರು ಪಕ್ಷದ ನಾಯಕರು ವಹಿಸಬೇಕು. ಎಲ್ಲಿ ಶಾಸಕರಿಲ್ಲವೊ ಆ ಕ್ಷೇತ್ರಗಳಲ್ಲಿ ನಾನು ಪಾದಯಾತ್ರೆ ಮಾಡುತ್ತೇನೆ. ವಿಶೇಷವಾಗಿ ಶಿಕಾರಿಪುರದಲ್ಲಿ ನಡೆಯುವ ಪಾದಯಾತ್ರೆಗೆ ನಾನು ಹೋಗುತ್ತೇನೆ’ ಎಂದರು.
‘ಕೈ’ ಹೋರಾಟದ ಹಾದಿ
* ಬುಧವಾರ (ಜ.14) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಎರಡು ದಿನಗಳ ವಿಶೇಷ ಅಧಿವೇಶನ ಕರೆಯುವ ಬಗ್ಗೆ ತೀರ್ಮಾನ
* ನರೇಗಾ ಮರು ಜಾರಿ ಮತ್ತು ಹೊಸ ಕಾಯ್ದೆಯ ಅನಾನುಕೂಲಗಳ ಕುರಿತು ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ
* ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಿಂದ ತಾಲ್ಲೂಕು ಮಟ್ಟಗಳಲ್ಲಿ ಮುಖಂಡರಿಂದ ಮಾಧ್ಯಮಗೋಷ್ಠಿ
* ಇದೇ 26ರಿಂದ ಫೆ.7ರವರೆಗೆ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 5ರಿಂದ 10 ಕಿ.ಮೀ ಪಾದಯಾತ್ರೆ
* ಸ್ಥಳೀಯ ಮಟ್ಟದ ಕಾರ್ಯಕ್ರಮದಲ್ಲಿ ಎಲ್ಇಡಿ ಪರದೆಯಲ್ಲಿ ಸೋನಿಯಾ ಗಾಂಧಿಯ ಸಂದೇಶದ ಪ್ರಸಾರ
* ನರೇಗಾ ಮರು ಜಾರಿ ಆಗ್ರಹಿಸಿ ತಾಲ್ಲೂಕು ಕಚೇರಿಗೆ ಮನವಿ
* ಜಿಲ್ಲಾ ರಾಜ್ಯಮಟ್ಟದಲ್ಲಿ ಬೃಹತ್ ಸಮಾವೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.