ADVERTISEMENT

ಸೋಮಣ್ಣ ವಿರುದ್ಧ ದೂರು ನೀಡಲು ₹15 ಲಕ್ಷ ಆಮಿಷ,‌ ಮಾನಸಿಕ ಹಿಂಸೆ: ಮಹಿಳೆ ದೂರು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2022, 3:46 IST
Last Updated 26 ಅಕ್ಟೋಬರ್ 2022, 3:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುಂಡ್ಲುಪೇಟೆ (ಚಾಮರಾಜನಗರ): ‘ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ನಡೆದ ನಿವೇಶನ ಹಂಚಿಕೆ ಕಾರ್ಯಕ್ರಮ ದಲ್ಲಿ ಸಚಿವ ವಿ.ಸೋಮಣ್ಣ ನನಗೆ ಕೆನ್ನೆಗೆ ಹೊಡೆದಿದ್ದಾರೆ ಎಂಬ ವಿಚಾರ ವನ್ನಿರಿಸಿಕೊಂಡು ವಿವಿಧ ಸಂಘಟನೆ ಮುಖಂಡರು, ರಾಜಕೀಯ ನಾಯಕರು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ’ ಎಂದು ಸಂತ್ರಸ್ತೆ ಕೆಂಪಮ್ಮ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ನಾನು ಕೂಲಿ ಮಾಡಿ ಬದುಕು ನಡೆಸುತ್ತಿದ್ದೇನೆ. ನನ್ನನ್ನು ಮಕ್ಕಳೊಡನೆ ಬದುಕಲು ಬಿಡಿ’ ಎಂದು ಹಂಗಳ ಗ್ರಾಮದ ಕೆಂಪಮ್ಮ ಕೋರಿದ್ದು, ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದಾರೆ.

‘ಸಚಿವರು ನನಗೆ ಹೊಡೆದಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದು. ನನ್ನ ಸಮಸ್ಯೆ ಆಲಿಸಿ ನಿವೇಶನ ನೀಡುತ್ತೇನೆ, ಕಾಲಿಗೆ ಬೀಳಬೇಡ ಸುಮ್ಮನಿರು ಎಂದು ನನ್ನ ಕೈಹಿಡಿದು ಮೇಲೆತ್ತಿದ್ದರು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಹಿಂಸೆ ನೀಡುತ್ತಿದ್ದಾರೆ. ಮನೆ ಬಳಿ ಬಂದು ನಿನಗೆ ₹ 15 ಲಕ್ಷ ಕೊಡುತ್ತೇವೆ, ಸೋಮಣ್ಣ ಕಪಾಳಕ್ಕೆ ಹೊಡೆದರು ಎಂದು ಪೊಲೀಸ್ ಠಾಣೆಗೆ ದೂರು ನೀಡು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಕೆಲ ಸಂಘಟನೆ ಮತ್ತು ರಾಜ ಕೀಯ ನಾಯಕರಿಂದ ಹಿಂಸೆಯಾಗಿದೆ’ ಎಂದು ಕೆಂಪಮ್ಮ ತಿಳಿಸಿದರು.

ADVERTISEMENT

‘ಹಣದ ಆಮಿಷವೊಡ್ಡಿ ಹೇಳಿಕೆ ಕೊಡುವಂತೆ ಪೀಡಿಸಲಾಗುತ್ತಿದೆ. ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಸೂಕ್ತ ರಕ್ಷಣೆ ನೀಡಬೇಕು. ಮಾನಸಿಕವಾಗಿ ಹಿಂಸೆ ನೀಡಿದರೆ ನಾನು ಮತ್ತು ನನ್ನ ಮಕ್ಕಳ ಸಾವಿಗೆ ಸಂಘ–ಸಂಸ್ಥೆಯವರೇ ನೇರ ಹೊಣೆ ಹೊರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ ‘ಹಕ್ಕುಪತ್ರ ವಿತರಣೆ ವೇಳೆ ಅಹಿತಕರ ಘಟನೆ ನಡೆದಿಲ್ಲ. ಆದರೂ ಮಾಧ್ಯಮದಲ್ಲಿ ಸಚಿವರ ವಿರುದ್ಧ ಆರೋಪ ಮಾಡುವ ರೀತಿಯಲ್ಲಿ ಬಿಂಬಿಸಲಾಗಿದೆ. ನಮ್ಮ ಸಮುದಾಯದ ಜನರ ಮೇಲೆ ಹಲ್ಲೆ ನಡೆಸಿದ್ದರೆ ನಾವು ಸುಮ್ಮನಿರುತ್ತಿದ್ದೇವಾ? ನಮಗೆ ನಮ್ಮ ಜನಾಂಗದ ಶ್ರೇಯ ಬಹಳ ಮುಖ್ಯ. ಸೋಮಣ್ಣ ಅವರನ್ನ ರಾಜಕೀಯವಾಗಿ ಮುಗಿಸಲು ರೂಪಿಸಿರುವ ವ್ಯವಸ್ಥಿತ ಪಿತೂರಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.