
ಗಣಿಗಾರಿಕೆ
ಸುವರ್ಣ ವಿಧಾನಸೌಧ (ಬೆಳಗಾವಿ): ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಜನರು ಮತ್ತು ಪರಿಸರದ ಪುನಶ್ಚೇತನಕ್ಕಾಗಿ ರೂಪಿಸಿದ ‘ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್-ಡಿಎಂಎಫ್‌ಟಿ’ ಯೋಜನೆಯ ಅಡಿ 2016ರಿಂದ 2023ರ ಅವಧಿಯಲ್ಲಿ ₹770 ಕೋಟಿಯಷ್ಟು ನಿಧಿಯನ್ನು ನಿಯಮಬಾಹಿರವಾಗಿ ವೆಚ್ಚ ಮಾಡಲಾಗಿದೆ. ರಾಜ್ಯವು ಈ ಯೋಜನೆ ಅನುಷ್ಠಾನದಲ್ಲಿ ಸಂಪೂರ್ಣ ಹಾದಿ ತಪ್ಪಿದೆ ಎಂದು ಮಹಾಲೇಖಪಾಲರ ವರದಿ (ಸಿಎಜಿ) ಹೇಳಿದೆ.
ಇಲ್ಲಿ ಅಧಿವೇಶನದಲ್ಲಿ ಬುಧವಾರ ಮಂಡಿಸಲಾದ, ‘ಪ್ರಧಾನ ಮಂತ್ರಿ ಖನಿಜ ಕ್ಷೇತ್ರಕಲ್ಯಾಣ ಯೋಜನೆಯ ಮೇಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ವರದಿ: 2018-23’ರಲ್ಲಿ ಈ ಮಾಹಿತಿ ಇದೆ.
ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಪ್ರದೇಶದಲ್ಲಿನ ಜನರ ಸಮಗ್ರ ಅಭಿವೃದ್ಧಿ ಮತ್ತು ಪರಿಸರದ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರವು 2015ರಲ್ಲಿ ಈ ಯೋಜನೆ ರೂಪಿಸಿತ್ತು. ರಾಜ್ಯದಲ್ಲಿ ಈ ಯೋಜನೆ 2016ರಿಂದ ಆರಂಭವಾಗಿದ್ದು, 2018-23ರ ಮಧ್ಯೆ ಹೆಚ್ಚು ಅಕ್ರಮಗಳು ನಡೆದಿವೆ ಎಂಬುದ ರತ್ತ ಸಿಎಜಿಯ ಲೆಕ್ಕಪರಿಶೋಧನೆಯು ಬೊಟ್ಟು ಮಾಡುತ್ತದೆ. 2016-18ರಲ್ಲಿ ಕಾಂಗ್ರೆಸ್, 2018-19ರಲ್ಲಿ ಜೆಡಿಎಸ್-ಕಾಂಗ್ರೆಸ್ ಮತ್ತು 2019-23ರ ಅವಧಿಯಲ್ಲಿ ಬಿಜೆಪಿ ಸರ್ಕಾರವಿತ್ತು.
ಬಳ್ಳಾರಿ, ಚಿತ್ರದುರ್ಗ, ಗದಗ, ಬೆಂಗಳೂರು ನಗರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇಂತಹ ಟ್ರಸ್ಟ್‌ಗಳಿದ್ದು, ಎಲ್ಲೆಡೆಯೂ ನಿಯಮಬಾಹಿರವಾಗಿ ನಿಧಿಯನ್ನು ಬಳಕೆ ಮಾಡಲಾಗಿದೆ ಎಂಬುದನ್ನು ಲೆಕ್ಕಪರಿಶೋಧನೆ ವರದಿಯು ವಿವರಿಸಿದೆ.
ಈ ಯೋಜನೆ ಪ್ರಕಾರ, ರಾಜ್ಯದಲ್ಲಿ ತೆಗೆಯಲಾಗುವ ಖನಿಜ ಸಂಪತ್ತಿನ ಮೇಲೆ ಸಂಗ್ರಹಿಸಲಾಗುವ ರಾಜಧನಕ್ಕೆ ಖನಿಜ ಪ್ರತಿಷ್ಠಾನ ನಿಧಿಯನ್ನು (ಡಿಎಂಎಫ್) ವಿಧಿಸಬೇಕು. ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಜನರ ದೈನಂದಿನ ಜೀವನ, ಆರೋಗ್ಯ, ಜೀವನೋಪಾಯ, ಪುನರ್ವಸತಿ, ಆರ್ಥಿಕ ನೆರವು ಒದಗಿಸಲು ಈ ನಿಧಿಯನ್ನು ಬಳಸಬೇಕು. ಜತೆಗೆ ಹಸಿರು-ಅರಣ್ಯ ಪುನಶ್ಚೇತನಕ್ಕೆ ಈ ನಿಧಿಯನ್ನು ಬಳಸಬೇಕು. ಇಂತಹ ಕಾಮಗಾರಿ ಮತ್ತು ಕಾರ್ಯಕ್ರಮಗಳನ್ನು ಮಾತ್ರ ಆದ್ಯತಾ ಪಟ್ಟಿಯಲ್ಲಿ ಸೇರಿಸಬೇಕು ಎಂಬುದು ನಿಯಮ. ಆದರೆ ಐದೂ ಜಿಲ್ಲಾ ಟ್ರಸ್ಟ್‌ಗಳು ಆದ್ಯತಾ ಪಟ್ಟಿಯಲ್ಲಿ ಇಲ್ಲದ ಕಾಮಗಾರಿಗಳಿಗೆ ₹300.44 ಕೋಟಿ ವೆಚ್ಚ ಮಾಡಿವೆ. ಇದರಿಂದ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ ಎನ್ನುತ್ತದೆ ಸಿಎಜಿ ವರದಿ.
ಚಿತ್ರದುರ್ಗದಲ್ಲಿ ನೀರು ಸಂಸ್ಕರಣಾ ಘಟಕ, ಅಂತರ್ಜಲವೃದ್ಧಿ, ಜಲ ಮೂಲಗಳ ಸಂರಕ್ಷಣೆಯಂತಹ ಕಾರ್ಯಕ್ರಮಗಳು ಆದ್ಯತಾ ಪಟ್ಟಿಯಲ್ಲಿ ಇದ್ದವು. ಅವನ್ನು ಕಡೆಗಣಿಸಿ, ಜೋಗಿಮಟ್ಟಿ ಉದ್ಯಾನವನದಲ್ಲಿ ಚಿರತೆ ಮನೆ, ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಐದೂ ಜಿಲ್ಲೆಗಳಲ್ಲಿ ಶಾಲಾ ಕಟ್ಟಡ ನಿರ್ಮಾಣ, ಪ್ರಯೋಗಾಲಯ, ಶೌಚಾಲಯಗಳು, ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಬೇಕಿತ್ತು. ಬದಲಿಗೆ ಮುಖ್ಯೋಪಾಧ್ಯಯರು ಮತ್ತು ಶಿಕ್ಷಕರಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು, ವಿಶ್ವವಿದ್ಯಾಲಯ ಗಳ ಕಟ್ಟಡ ನವೀಕರಣಕ್ಕೆ ₹119.78 ಕೋಟಿಯನ್ನು ನಿಯಮಬಾಹಿರವಾಗಿ ಬಳಕೆ ಮಾಡಲಾಗಿದೆ ಎಂದಿದೆ ವರದಿ.
ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಪ್ರದೇಶದಲ್ಲಿ ರಸ್ತೆ, ರೈಲು ಸಂಪರ್ಕದಂತಹ ಮೂಲ ಸೌಕರ್ಯ ಗಳನ್ನು ಒದಗಿಸಬೇಕಿತ್ತು. ಅದಕ್ಕೆ ಸಂಬಂಧಿಸಿದ ನಿಧಿಯನ್ನು ಬಳಸಿಕೊಂಡು ಸಭಾಂಗಣ, ಸಭಾ ಭವನ, ನಾಡಕಚೇರಿ ಕಟ್ಟಡ, ಜಿಲ್ಲಾಧಿಕಾರಿ ಕಚೇರಿಗೆ ಹೊಸ ಕಟ್ಟಡ, ಪೀಠೋಪಕರಣ, ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಐದೂ ಟ್ರಸ್ಟ್‌ಗಳು ಈ ವಿಚಾರದಲ್ಲಿ ನಿಧಿಯ ಸದ್ಭಳಕೆಯಲ್ಲಿ ವಿಫಲವಾಗಿವೆ ಎಂಬ ಮಾಹಿತಿ ವರದಿಯಲ್ಲಿದೆ.
ಕಂಪ್ಯೂಟರ್ ಖರೀದಿ, ಅನರ್ಹರಿಗೆ ಸಹಾಯಧನ ಮತ್ತು ಆರ್ಥಿಕ ನೆರವು ಹಂಚಿಕೆ, ದಂಡದ ಮೇಲೆ ಡಿಎಂಎಫ್ ಸಂಗ್ರಹಿಸದೇ ಇರುವುದು ಮತ್ತು ಈ ಕಾರ್ಯಕ್ರಮಗಳ ಅಡಿಯಲ್ಲಿ ಖರೀದಿಸಲಾದ ಸಾಮಗ್ರಿ ಹಾಗೂ ನಿರ್ಮಿಸಲಾದ ಸವಲತ್ತುಗಳನ್ನು ಬಳಸದೇ ಇರುವುದರಿಂದ ನೂರಾರು ಕೋಟಿ ನಷ್ಟವಾಗಿದೆ. ಇಂತಹ ಸಣ್ಣ-ಸಣ್ಣ ನಿಯಮಬಾಹಿರ ಬಳಕೆ ಮತ್ತು ಕಾರ್ಯಕ್ರಮಗಳ ಒಟ್ಟು ಮೊತ್ತವು ₹770 ಕೋಟಿಯಷ್ಟಾಗುತ್ತದೆ. ಸರ್ಕಾರವು ಈ ಬಗ್ಗೆ ಗಮನ ಹರಿಸಿ, ಯೋಜನೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಿಎಜಿ ಹೇಳಿದೆ.
ಟೆಂಡರ್ ಕರೆಯದೇ ಗುತ್ತಿಗೆ
ವಿವಿಧ ಕಾಮಗಾರಿಗಳನ್ನು ಗುತ್ತಿಗೆ ನೀಡುವಾಗ ಕರ್ನಾಟಕ ಸಾರ್ವಜನಿಕ ಸಂಗ್ರ ಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಹತ್ತಾರು ಕೋಟಿ ಮೊತ್ತದ ಕಾಮಗಾರಿಯನ್ನು ₹1 ಕೋಟಿಗಿಂತ ಕಡಿಮೆಯ ಪ್ಯಾಕೇಜ್‌ಗಳಾಗಿ ವಿಭಜಿಸಿ, ಟೆಂಡರ್ ಕರೆಯದೆಯೇ ಗುತ್ತಿಗೆ ನೀಡಲಾಗಿದೆ. ಟೆಂಡರ್ ಕರೆಯುವುದನ್ನು ತಪ್ಪಿಸುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ. ಐದೂ ಟ್ರಸ್ಟ್‌ಗಳಿಂದ ಟೆಂಡರ್ ಇಲ್ಲದೆಯೇ ₹395.20 ಕೋಟಿ ಮೊತ್ತದ 373 ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗಿದೆ. ಟ್ರಸ್ಟ್‌ಗಳ ಈ ನಡೆಯನ್ನು ಮತ್ತು ಇದಕ್ಕೆ ಸರ್ಕಾರ ನೀಡಿರುವ ಸಮರ್ಥನೆಯನ್ನು ಒಪ್ಪಲಾಗದು ಎಂದು ಸಿಎಜಿ ಹೇಳಿದೆ.
ಡಿಎಂಎಫ್ ಕಂಪ್ಯೂಟರ್‌ಗೆ ಶಾಸಕರ ಚಿತ್ರ
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಡಿಎಂಎಫ್‌ನ ₹4 ಕೋಟಿ ವೆಚ್ಚದಲ್ಲಿ ಕಂಪ್ಯೂಟರ್‌ಗಳನ್ನು ಖರೀದಿಸಲಾಗಿದೆ. ಈ ಎಲ್ಲ ಕಂಪ್ಯೂಟರ್‌ಗಳನ್ನು ಕಿಯೋನಿಕ್ಸ್ ಪೂರೈಕೆ ಮಾಡಿದೆ. ಆದರೆ ಈ ಕಂಪ್ಯೂಟರ್‌ಗಳನ್ನು ಅಳವಡಿಸಿರುವ ಶಾಲೆಗಳಲ್ಲಿ, ಸ್ಥಳೀಯ ಶಾಸಕ ಬಿಜೆಪಿಯ ‘ಎಂ.ಚಂದ್ರಪ್ಪ ಅವರ ವಿಧಾನಸಭಾ ಅನುದಾನದಲ್ಲಿ ಕೈಗೊಳ್ಳಲಾದ ಕಾಮಗಾರಿ’ ಎಂದು ಫಲಕ ಹಾಕಲಾಗಿದೆ ಎಂದು ಸಿಎಜಿ ಹೇಳಿದೆ.
ಚಿತ್ರದುರ್ಗ, ವಿಜಯನಗರದ ಹಲವು ಶಾಲಾ ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳಿಗೆ ನೀಡಿರುವ ಕಂಪ್ಯೂಟರ್‌ಗಳನ್ನು ಬಳಕೆ ಮಾಡುತ್ತಿಲ್ಲ. ಕೆಲವನ್ನು ಈವರೆಗೆ ತೆರೆದೇ ಇಲ್ಲ. ಇನ್ನೂ ಕೆಲವನ್ನು ಮೂಲೆಗಳಲ್ಲಿ ಇಡಲಾಗಿದೆ. ಇವುಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಮೇಲ್ವಿಚಾರಣೆ ನಡೆಸುವ ಹೊಣೆಗಾರಿಕೆ ಡಿಎಂಎಫ್ ಟ್ರಸ್ಟ್‌ಗಳದ್ದು. ಆದರೆ ಟ್ರಸ್ಟ್‌ಗಳು ಈ ಕೆಲಸವನ್ನು ಮಾಡದೇ ಇರುವ ಕಾರಣಕ್ಕೆ, ಇದಕ್ಕಾಗಿ ಮಾಡಿದ ವೆಚ್ಚವೆಲ್ಲವೂ ವ್ಯರ್ಥವಾಗಿದೆ. ಟ್ರಸ್ಟ್‌ಗಳು ತಮ್ಮ ಎಲ್ಲ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಯಾವುದೇ ಮಾನದಂಡಗಳನ್ನು ರೂಪಿಸಿಕೊಂಡಿಲ್ಲ. ಈ ಕಾರಣದಿಂದ ಅನರ್ಹರಿಗೆ ನಿಧಿಯ ಹಣ ಹಂಚಿಕೆಯಾಗಿದೆ. ಕೆಲವೆಡೆ ತೀರಾ ವೈಯಕ್ತಿಕ ಕೆಲಸಗಳಿಗೆ ಈ ನಿಧಿಯನ್ನು ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.
ಎಲ್ಲ ಟ್ರಸ್ಟ್‌ಗಳು ನಿಯಮಬಾಹಿರವಾಗಿ ಅಧಿಕಾರಿಗಳ ಓಡಾಟಕ್ಕೆ ವಾಹನಗಳನ್ನು ಖರೀದಿಸಿವೆ. ಹೀಗೆ ಅನಗತ್ಯ ವೆಚ್ಚ, ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ, ನಿಧಿ ಸಂಗ್ರಹ ಕಡೆಗಣನೆಯಂತಹ ನಡೆಗಳಿಂದಾಗಿ ಈ ಯೋಜನೆಯ ಮೂಲ ಉದ್ದೇಶವೇ ಈಡೇರದಂತಾಗಿದೆ ಎಂಬುದರತ್ತ ಸಿಎಜಿ ವರದಿ ಬೊಟ್ಟು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.