ADVERTISEMENT

ಬೇರೆ ಊರುಗಳಿಗೆ ಹೋಗುವವರು ಸೋಮವಾರವೇ ಹೊರಟು ಬಿಡಿ: ಸಚಿವ ಆರ್‌. ಅಶೋಕ

‘ಲಾಕ್‌ಡೌನ್‌ ಮಾರ್ಗಸೂಚಿ ನಾಳೆ ಪ್ರಕಟ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 11:50 IST
Last Updated 12 ಜುಲೈ 2020, 11:50 IST
ಸಚಿವ ಆರ್.ಅಶೋಕ್
ಸಚಿವ ಆರ್.ಅಶೋಕ್    

ಬೆಂಗಳೂರು: ‘ಲಾಕ್ ಡೌನ್ ಮಾರ್ಗಸೂಚಿ ಬಗ್ಗೆ ಮುಖ್ಯ ಕಾರ್ಯದರ್ಶಿ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ಸೋಮವಾರ (ಜುಲೈ 13) ಮಾರ್ಗಸೂಚಿ ಬಿಡುಗಡೆ ಆಗಲಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಅಧಿಕಾರಿಗಳ ಜೊತೆ ಭಾನುವಾರ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ‘ಲಾಕ್‌ಡೌನ್‌ ಅವಧಿಯಲ್ಲಿ ವೈದ್ಯಕೀಯ ಸಂಬಂಧಿತ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶ ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ’ ಎಂದರು.

‘ಕೊರೊನಾ ಸೋಂಕು ಹರಡುವಿಕೆ ತಡೆಯಲು ಚೈನ್ ಬ್ರೇಕ್ ಮಾಡಬೇಕಾಗಿದೆ. ಈ ಕಾರಣಕ್ಕೆ ಬುಧವಾರದಿಂದ ಒಂದು ವಾರ ಲಾಕ್ ಡೌನ್ ಘೋಷಿಸಲಾಗಿದೆ. ಜನಸಾಮಾನ್ಯರಿಗೆ ತೊಂದರೆ ಆಗದಿರಲಿ, ಅಗತ್ಯ ವಸ್ತುಗಳನ್ನು ಖರೀದಿಸಿಕೊಳ್ಳಲಿ, ಊರುಗಳಿಗೆ ಹೋಗುವವರು ಹೋಗುವುದಕ್ಕೂ ಅನುಕೂಲ ಆಗಲಿ ಎಂದು ಸೋಮವಾರ ಬಿಡುವು ನೀಡಲಾಗಿದೆ‘ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಲಾಕ್ ಡೌನ್ ಸದ್ಯಕ್ಕೆ ಏಳು ದಿನ ಮಾತ್ರ. ಸೋಂಕು ಹರಡುವಿಕೆಯ ವೇಗ ಯಾವ ರೀತಿ ಕಡಿಮೆ ಆಗುತ್ತದೆ ಎಂಬುದನ್ನು ನೋಡುತ್ತೇವೆ. ವಿಸ್ತರಣೆ ಮಾಡಬೇಕೊ ಅಥವಾ ಬೇಡವೊ ಎಂದು ನಂತರ ನಿರ್ಧರಿಸುತ್ತೇವೆ. ತಜ್ಞರ ವರದಿ ಕೂಡಾ ಪಡೆದು ಎರಡು ದಿನ ಮೊದಲೇ ತಿಳಿಸುತ್ತೇವೆ’ ಎಂದರು.

‘ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸಮಸ್ಯೆ ಇದೆ. ಆದರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಹಾಸಿಗೆ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಗಳ ಹಾಸಿಗೆ ವ್ಯವಸ್ಥೆಯನ್ನು ಸರಿಪಡಿಸಿದರೆ ಬೆಂಗಳೂರಿನಲ್ಲಿ ಹಾಸಿಗೆ ಸಮಸ್ಯೆ ನಿವಾರಣೆ ಆಗಲಿದೆ. ಮಾನವೀಯತೆಯಿಂದ ಸಹಾಯ ಮಾಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದೇವೆ’ ಎಂದರು.

ಎರಡು ಹಂತಗಳಲ್ಲಿ ವಿಡಿಯೊ ಸಂವಾದ: ‘ಸೋಮವಾರ ಎರಡು ಹಂತದಲ್ಲಿ ಜಿಲ್ಲಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸುತ್ತೇವೆ. ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಬೆಳಿಗ್ಗೆ, ಕಡಿಮೆ ಪ್ರಕರಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಂಜೆ ಚರ್ಚೆ ಮಾಡುತ್ತೇವೆ. ಜಿಲ್ಲಾಧಿಕಾರಿಗಳಿಂದ ಅಭಿಪ್ರಾಯ ಪಡೆದ ಬಳಿಕ ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ಸೂಚನೆ ನೀಡಲಿದ್ದಾರೆ’ ಎಂದೂ ಅಶೋಕ ತಿಳಿಸಿದರು.

‘ಸೋಂಕು ದೃಢಪಟ್ಟ ಜಿಲ್ಲೆಗಳಲ್ಲಿ ಸೀಲ್ ಡೌನ್ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳಿಗೆ, ಕಡಿಮೆ ಪ್ರಕರಣ ಇರುವ ಜಿಲ್ಲೆಗೆಳಿಗೆ ಪ್ರತ್ಯೇಕ ಪ್ರತ್ಯೇಕ ಆದೇಶ ನೀಡಲಾಗುವುದು’ ಎಂದೂ ಅವರು ಹೇಳಿದರು.

‘ಅಗತ್ಯ ಸೇವೆ ಹೊರತುಪಡಿಸಿ ಉಳಿದವರು ಮನೆಯಲ್ಲೇ ಇರಿ ಎಂದು ಸರ್ಕಾರದ ಪರವಾಗಿ ಜನರಲ್ಲಿ ನಾನು ಕೈ ಮುಗಿದು ವಿನಂತಿ ಮಾಡುತ್ತೇನೆ. ಬೆಂಗಳೂರು ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣ ಬೇರೆ ಬೇರೆ ಸ್ಥಳಗಳಿಗೆ ಹೋಗಬೇಕಾದವರು ಸೋಮವಾರವೇ ಹೊರಟುಬಿಡಿ’ ಎಂದೂ ಅಶೋಕ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.