ಸಾಂದರ್ಭಿಕ ಚಿತ್ರ
ಬೆಂಗಳೂರು: ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡದೇ ಕಾರ್ಯಕಾರಿ ಆದೇಶದ ಮೂಲಕವೇ ಗ್ರೂಪ್ ‘ಬಿ’ ವೃಂದದ ತಾಲ್ಲೂಕು ವಿಸ್ತರಣಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರಡಿಸಿರುವ ಆದೇಶಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿದ್ದ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯವನ್ನು 1999–2000ನೇ ಸಾಲಿನಲ್ಲಿ ಬೇರ್ಪಡಿಸಿ, ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗಿತ್ತು. ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು 2010ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಲಾಗಿತ್ತು. ನಂತರ ಇಲ್ಲಿಯವರೆಗೂ ನಿಯಮಗಳಿಗೆ ತಿದ್ದುಪಡಿಯನ್ನೇ ಮಾಡಿಲ್ಲ. ಕಳೆದ 15 ವರ್ಷಗಳಿಂದಲೂ ಕಾರ್ಯಕಾರಿ ಆದೇಶದ ಮೇಲೆ ಹೊಸದಾಗಿ ಸೃಜಿಸಿದ ಹಾಗೂ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಬರಲಾಗಿದೆ. ಈಗ ಹೊಸದಾಗಿ ಸೃಜಿಸಲಾದ ತಾಲ್ಲೂಕು ವಿಸ್ತರಣಾಧಿಕಾರಿಗಳ 71 ಹುದ್ದೆಗಳನ್ನು ಕಾರ್ಯಕಾರಿ ಆದೇಶದಂತೆ ಶೇ 50ರಷ್ಟು ಬಡ್ತಿ ಹಾಗೂ ಶೇ 50ರಷ್ಟು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
‘ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿಗಳೂ ಸೇರಿದಂತೆ ಅಲ್ಪಸಂಖ್ಯಾತರನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರ್ಕಾರ ಹಲವು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದ್ದು, ತಾಲ್ಲೂಕು ಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಾಲ್ಲೂಕು ವಿಸ್ತರಣಾಧಿಕಾರಿಗಳ ಕಾಯಂ ನೇಮಕ ಮಾಡಿಕೊಳ್ಳುವ ಅಗತ್ಯ ಇರುವ ಕಾರಣ ಕಾರ್ಯಕಾರಿ ಆದೇಶದ ಮೂಲಕ ತುರ್ತಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೊಸದಾಗಿ ಸೃಜಿಸಲಾದ ಹಾಗೂ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಿದ ಹುದ್ದೆಗಳಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ. ಅಲ್ಲದೇ, ಭರ್ತಿ ಮಾಡಿಕೊಂಡ ವಿವರವನ್ನು ಆರು ತಿಂಗಳ ಒಳಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮೂಲಕ ಸೇರ್ಪಡೆ ಮಾಡಬೇಕು’ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸೂಚಿಸಿದೆ.
ದಲಿತ ಪದವೀಧರರ ಸಂಘ ಆಕ್ಷೇಪ: ಅಲ್ಪಸಂಖ್ಯಾತರ ಇಲಾಖೆಯ ಕಾರ್ಯಕಾರಿ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘ, ಆದೇಶವನ್ನು ತಕ್ಷಣ ತಡೆಹಿಡಿಯುವಂತೆ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
‘ಒಳ ಮೀಸಲಾತಿ ಅಂತಿಮವಾಗಿ ಜಾರಿಯಾಗುವವರೆಗೂ ಯಾವುದೇ ವೃಂದದ ಹುದ್ದೆಗಳಿಗೆ ಬಡ್ತಿ, ನೇಮಕಾತಿ ಆದೇಶ ಹೊರಡಿಸದಂತೆ ಸರ್ಕಾರವೇ ಸೂಚಿಸಿದೆ. ಆದರೂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹುದ್ದೆಗಳ ಭರ್ತಿಗೆ ಕಾರ್ಯಕಾರಿ ಆದೇಶ ಹೊರಡಿಸಿದೆ. ಇದರಿಂದ ದಲಿತ ಸಮುದಾಯದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ನಿಯಮಗಳಿಗೆ ತಿದ್ದುಪಡಿ ಮಾಡದೆ ನೇಮಕಾತಿ, ಬಡ್ತಿ ನೀಡಬಾರದು’ ಎಂದು ಸಂಘದ ಅಧ್ಯಕ್ಷ ವಿ. ಲೋಕೇಶ್ ಒತ್ತಾಯಿಸಿದ್ದಾರೆ.
ಪ್ರಾಂಶುಪಾಲರ ಹುದ್ದೆಗೆ ಮುಖ್ಯಶಿಕ್ಷಕರು?
ಮೊರಾರ್ಜಿ ವಸತಿ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗೆ ಉಪನ್ಯಾಸಕರ ಬದಲು ಮುಖ್ಯಶಿಕ್ಷಕರನ್ನು ಬಡ್ತಿ ಮೂಲಕ ನೇಮಿಸಿಕೊಳ್ಳುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಸ್ತಾವವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿರಸ್ಕರಿಸಿದೆ.
2024–25ನೇ ಬಜೆಟ್‌ನಲ್ಲಿ 62 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಕಾಲೇಜುಗಳಾಗಿ ಉನ್ನತೀಕರಿಸಲಾಗಿತ್ತು. ಅಲ್ಲಿನ ಪ್ರಾಂಶುಪಾಲರ ಹುದ್ದೆಗಳಿಗೆ ಮುಖ್ಯ ಶಿಕ್ಷಕರನ್ನು ಬಡ್ತಿ ಮೂಲಕ ನೇಮಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಭಿಪ್ರಾಯ ಕೋರಿ ಪ್ರಸ್ತಾವ ಸಲ್ಲಿಸಲಾಗಿತ್ತು.
‘ಇಲಾಖೆಯು ನೇಮಕಾತಿಗಳಿಗೆ 2010ರಲ್ಲಿ ರೂಪಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕನಿಷ್ಠ ವಿದ್ಯಾರ್ಹತೆ ಸೇರಿದಂತೆ ಹಲವು ವಿಷಯಗಳಿಗೆ ತಿದ್ದುಪಡಿ ಮಾಡದೆ ಮುಖ್ಯ ಶಿಕ್ಷಕರನ್ನು ಪರಿಗಣಿಸಲು ಸಾಧ್ಯವಿಲ್ಲ. ಕಾರ್ಯಕಾರಿ ಆದೇಶ ಅನ್ವಯಿಸಲು ಆಗದು’ ಎಂದು ಪ್ರಸ್ತಾವವನ್ನು ವಾಪಸ್ ಕಳುಹಿಸಲಾಗಿದೆ.
ಡಿ.ಒಗಳಿಗೆ ಮೂರೇ ವರ್ಷಕ್ಕೆ ಬಡ್ತಿ
ಅಲ್ಪಸಂಖ್ಯಾತರ ಇಲಾಖೆ ಅಧೀನದಲ್ಲಿರುವ ಶಾಲೆಗಳ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಒಂದೂವರೆ ದಶಕದಿಂದ ಬಡ್ತಿ ನೀಡಿಲ್ಲ. ಆದರೆ, 15 ಜಿಲ್ಲೆಗಳ ಜಿಲ್ಲಾ ಅಧಿಕಾರಿಗಳಿಗೆ (ಡಿ.ಒ) ಮೂರೇ ವರ್ಷಕ್ಕೆ ಬಡ್ತಿ ನೀಡಲಾಗುತ್ತಿದೆ.
ವಿವಿಧ ವೃಂದಗಳ ಅಧಿಕಾರಿಗಳು, ಸಿಬ್ಬಂದಿಯ ಬಡ್ತಿ ಕುರಿತು ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಾರದೆ ವಸತಿನಿಲಯ ಮೇಲ್ವಿಚಾರಕರು, ವಸತಿನಿಲಯ ಪಾಲಕರು, ಪ್ರಥಮ ದರ್ಜೆ ಸಹಾಯಕರು, ಗಣಕ ಯಂತ್ರ ಸಹಾಯಕರಿಗೆ ಬಡ್ತಿ ನೀಡಲು ಆದೇಶ ಹೊರಡಿಸಿದೆ. ಒಂದಕ್ಕಿಂತ ಹೆಚ್ಚು ವೃಂದಗಳಿಗೆ ಬಡ್ತಿ ಅವಕಾಶ ಕಲ್ಪಿಸಿದಲ್ಲಿ ಅವರ ಇಚ್ಛೆಯಂತೆ ನಂತರ ವೃಂದ ಬದಲಾವಣೆ ಮಾಡಿಕೊಳ್ಳಲೂ ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.