ADVERTISEMENT

ಜಾತಿ ನಿಂದನೆ ಆರೋಪ: ಪ್ರಕರಣ ಕೈಬಿಡಲು ಕೋರಿದ ಮುನಿರತ್ನ ಅರ್ಜಿ

ತಕರಾರು ಸಲ್ಲಿಕೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 0:18 IST
Last Updated 17 ಜನವರಿ 2025, 0:18 IST
<div class="paragraphs"><p>ಮುನಿರತ್ನ</p></div>

ಮುನಿರತ್ನ

   

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ–ಎಸ್‌ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ನನ್ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನಾನು ನಿರ್ದೋಷಿ. ಆದ್ದರಿಂದ, ಆರೋಪಿ ಸ್ಥಾನದಿಂದ ಬಿಡುಗಡೆ ನೀಡಬೇಕು’ ಎಂದು ಕೋರಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ತಕರಾರು ಸಲ್ಲಿಸಲು ದೂರುದಾರ ವೇಲು ನಾಯ್ಕರ್‌ಗೆ ಜನಪ್ರತಿನಿಧಿಗಳ ಸೆಷನ್ಸ್ ಕೋರ್ಟ್ ಆದೇಶಿಸಿದೆ.

ಈ ಕುರಿತು ಮುನಿರತ್ನ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪ್ರಕರಣದ ದೂರುದಾರ ವೇಲು ನಾಯ್ಕರ್‌ಗೆ ಈ ಮೊದಲು ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವೇಲು ನಾಯ್ಕರ್‌ ಪರ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಅವರು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ಮುಂದೆ ಗುರುವಾರ ಖುದ್ದು ಹಾಜರಾಗಿ ವಕಾಲತ್ತು ಸಲ್ಲಿಸಿದರು.

ADVERTISEMENT

ವಕಾಲತ್ತು ಸ್ವೀಕರಿಸಿದ ನ್ಯಾಯಾಧೀಶರು, ‘ಪ್ರಕರಣದಿಂದ ನನ್ನನ್ನು ಕೈಬಿಡಬೇಕು ಎಂದು ಕೋರಿ ಆರೋಪಿ ಮುನಿರತ್ನ, ಅಪರಾಧ ದಂಡ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 227ರ ಅಡಿಯಲ್ಲಿ ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ದೂರುದಾರರು ತಕರಾರು ಸಲ್ಲಿಸಬೇಕು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿದರು. ವಿಚಾರಣೆ ವೇಳೆ ಆರೋಪಿ ಮುನಿರತ್ನ ಖುದ್ದು ಹಾಜರಿದ್ದರು.

ಪ್ರಕರಣವೇನು?: 

ಘನತ್ಯಾಜ್ಯ ಸಂಗ್ರಹದ ಕಸ ವಿಲೇವಾರಿ ಮಾಡುವ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುವ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಮುನಿರತ್ನ ಅವರು ವೈಯಾಲಿ ಕಾವಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ 2024ರ ಮೇ 18ರಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಆರೋಪಿಸಿ ವೇಲು ನಾಯ್ಕರ್‌ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಮುನಿರತ್ನ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ.

ತನಿಖೆ ನಡೆಸಿರುವ, ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಿ ಮುನಿರತ್ನ ವಿರುದ್ಧ, ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ–1989ರ ಕಲಂ 3(1)(ಆರ್‌), 3(1)(ಎಸ್‌), 31(ಯು), 3(2)(ವಿಎ), ಭಾರತೀಯ ದಂಡ ಸಂಹಿತೆ–1860ರ ಕಲಂ 153 ಎ(1)(ಎ)(ಬಿ), 504 ಮತ್ತು 506ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಏತನ್ಮಧ್ಯೆ, ದೋಷಾರೋಪ ಪೂರ್ವದಲ್ಲಿ ತಾನು ನಿರ್ದೋಷಿ ಎಂದು ವಾದಿಸಲು ಮುನಿರತ್ನ ಈ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.