ADVERTISEMENT

ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿಗೆ ಭರ್ಜರಿ ಜಯ: ಜಗದೀಶ್‌ ಶೆಟ್ಟರ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 30 ಮೇ 2022, 13:53 IST
Last Updated 30 ಮೇ 2022, 13:53 IST
ಜಗದೀಶ್‌ ಶೆಟ್ಟರ್‌ (ಸಂಗ್ರಹ ಚಿತ್ರ)
ಜಗದೀಶ್‌ ಶೆಟ್ಟರ್‌ (ಸಂಗ್ರಹ ಚಿತ್ರ)   

ಗದಗ: ‘ರಾಜ್ಯದಲ್ಲಿ ಪ್ರಸ್ತುತ ಪಶ್ಚಿಮ ಶಿಕ್ಷಕರ ಕ್ಷೇತ್ರ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಎಲ್ಲೆಡೆ ಭರ್ಜರಿ ಜಯ ಸಾಧಿಸಲಿದೆ’ ಎಂದು ಶಾಸಕ ಜಗದೀಶ್‌ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪ್ರಧಾನಿ ಮೋದಿ ಅವರು ಜಾರಿಗೆ ತಂದ ಕಿಸಾನ್ ಸಮ್ಮಾನ್‌, ಉಜ್ವಲ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಎಲ್ಲ ವರ್ಗದ ಜನರನ್ನು ತಲುಪಿವೆ. ಎಂಟು ವರ್ಷಗಳ ಕಾಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳು ಹಾಗೂ ಬಸವರಾಜ ಹೊರಟ್ಟಿ ಅವರು ತಮ್ಮ ಏಳು ಅವಧಿಯಲ್ಲಿ ಶಿಕ್ಷಕರಿಗಾಗಿ ಮಾಡಿರುವ ಕಾರ್ಯಗಳು ಗೆಲುವಿಗೆ ಪೂರಕವಾಗಲಿವೆ’ ಎಂದು ಹೇಳಿದರು.

‘ನರೇಂದ್ರ ಮೋದಿ ನಾಯಕತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇದರಿಂದಾಗಿ ಪ್ರತಿಯೊಬ್ಬ ನಾಗರಿಕನಲ್ಲೂ ಸುರಕ್ಷಿತ ಭಾವನೆ ಮೂಡಿದೆ. ಪ್ರಧಾನಿಯಾಗಿ ಎಂಟು ವರ್ಷ ಪೂರೈಸಿರುವ ಮೋದಿಯವರು ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದಾರೆ. ಪ್ರತಿ ಮನೆಗೂ ಸರ್ಕಾರದ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಸಾಧನೆ, ಯೋಜನೆಯ ಫಲಾನುಭವಿಗಳ ಸಮಾವೇಶವನ್ನು ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ‘ಕ್ಷೇತ್ರ ವ್ಯಾಪ್ತಿಯ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದು, ಎಲ್ಲೂ ಅಪಸ್ವರ ಕೇಳಿಬಂದಿಲ್ಲ. ಚುನಾವಣಾ ಕಣದಲ್ಲಿರುವ ಎದುರಾಳಿಗಳಾರೂ ಹೋರಾಟಗಾರರೇ ಅಲ್ಲ’ ಎಂದು ಟೀಕಿಸಿದರು.

ಸಚಿವ ಸಿ.ಸಿ. ಪಾಟೀಲ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ. ಡಿ.ಕೆ.ಶಿವಕುಮಾರ್‌ ನಂ.10, ಜನಪಥಕ್ಕೆ ಹತ್ತಿರವಿದ್ದಾರೆ. ಆರ್‌ಎಸ್‌ಎಸ್‌ ಟೀಕಿಸುವ ಮೂಲಕ ಸಿದ್ದರಾಮಯ್ಯನವರೂ ಅವರ ಸಮೀಪ ತೆರಳಲು ಯತ್ನಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ರಾಷ್ಟ್ರಭಕ್ತಿ ಬಿತ್ತುವ ರಾಷ್ಟ್ರೀಯ ಸ್ವಯಂ ಸೇವಕರ ಸಂಘವನ್ನು ಟೀಕಿಸುವಷ್ಟರ ಮಟ್ಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡವರಲ್ಲ. ದೊಡ್ಡ ನಾಯಕರ ಬಾಯಲ್ಲಿ ಕ್ಷುಲ್ಲಕ ಹೇಳಿಕೆ ಬಂದಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.

ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಎಸ್.ವಿ.ಸಂಕನೂರ, ಮುಖಂಡರಾದ ಅನಿಲ್‌ ಮೆಣಸಿನಕಾಯಿ, ಕಾಂತಿಲಾಲ ಬನ್ಸಾಲಿ, ಮುತ್ತಣ್ಣ ಲಿಂಗನಗೌಡ್ರ, ಉಷಾ ಮಹೇಶ ದಾಸರ, ಎಂ.ಎಸ್. ಕರಿಗೌಡ್ರ, ಮಹೇಶ ಟೆಂಗಿನಕಾಯಿ, ರವಿ ದಂಡಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.