ADVERTISEMENT

ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರ: ಚಿತ್ರಣ ಬದಲಿಸಿದ ‘ಹೊರಟ್ಟಿ ಸಮೀಕರಣ’

ಬಿಜೆಪಿ – ಕಾಂಗ್ರೆಸ್‌ ನೇರ ಪೈಪೋಟಿ

ಶ್ರೀಕಾಂತ ಕಲ್ಲಮ್ಮನವರ
Published 10 ಜೂನ್ 2022, 19:32 IST
Last Updated 10 ಜೂನ್ 2022, 19:32 IST
   

ಹುಬ್ಬಳ್ಳಿ: ‘ಶತ್ರುವಿನ ಶತ್ರು ಮಿತ್ರ’ ಎನ್ನುವುದು ನಾಣ್ಣುಡಿ. ಶತ್ರುವೇ ನೇರವಾಗಿ ಮಿತ್ರನಾದರೆ? ಇಂತಹದೊಂದು ಸಮೀಕರಣವನ್ನು ವಿಧಾನ ಪರಿ ಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ರೂಪಿಸಿದ್ದಾರೆ. ಕಳೆದ ಸಲ ಚುನಾವಣೆಯಲ್ಲಿ ತೀವ್ರ ಸ್ಪರ್ಧೆಯೊಡ್ಡಿದ್ದ ಬಿಜೆಪಿಯ ಕೈ ಹಿಡಿದು ವೈರಿಯನ್ನೇ ಗೆಳೆಯನನ್ನಾಗಿಸಿಕೊಂಡು ಅಖಾಡಾಕ್ಕೆ ಇಳಿದಿದ್ದಾರೆ.

ಈ ಸೂತ್ರದಿಂದ ಕಳೆದ ಚುನಾವಣೆಗಳಲ್ಲಿದ್ದ ಹೊರಟ್ಟಿ ವಿರುದ್ಧ ಬಿಜೆಪಿ ಇದ್ದದ್ದು ಈಗ, ಹೊರಟ್ಟಿ ಪ್ಲಸ್‌ ಬಿಜೆಪಿಯಾಗಿದೆ. ಹೊರಟ್ಟಿ ಪ್ಲಸ್‌ ಜೆಡಿಎಸ್‌ ಈಗ, ಹೊರಟ್ಟಿ ವಿರುದ್ಧ ಜೆಡಿಎಸ್‌ ಆಗಿದೆ. ಹೇಗಾದರೂ ಸರಿ, ಹೊರಟ್ಟಿ ನಾಗಾಲೋಟಕ್ಕೆ ಕಡಿವಾಣ ಹಾಕಲೇಬೇಕೆಂದು ಆರು ತಿಂಗಳ ಹಿಂದೆಯೇ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸಿದ್ದು, ಬಸವರಾಜ ಗುರಿಕಾರ ತೀವ್ರ ಸ್ಪರ್ಧೆಯೊಡ್ಡಿದ್ದಾರೆ.

ಆಗಷ್ಟೇ 7ನೇ ಬಾರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಆಯ್ಕೆ ಯಾಗಿದ್ದ ಹೊರಟ್ಟಿ ಅವರು, ಬಿಜೆಪಿಯಿಂದ ಎದುರಿಸಿದ್ದ ತೀವ್ರ ಪೈಪೋಟಿಯನ್ನು ಸುದ್ದಿಗಾರರ ಜೊತೆ ಹಂಚಿಕೊಂಡಿದ್ದರು. ಬಿಜೆಪಿ ಸಂಘಟನೆ ಹಾಗೂ ಯುವ ಮತದಾರರ ಬಗೆಗಿನ ತಮ್ಮ ಅಳಕು ಹೊರಹಾಕಿದ್ದರು. ಅಂದಿನ ಅಳಕಿಗೆ ಈಗ ಹೊರಟ್ಟಿ ಉತ್ತರ ಕಂಡುಕೊಂಡಿದ್ದಾರೆ.

ADVERTISEMENT

ಹೊರಟ್ಟಿಯವರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳ, ಕ್ರೈಸ್ತರ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಬೆಂಬಲ ಕೋರುತ್ತಿದ್ದಾರೆ. ಶಿಕ್ಷಕರ ಹಿತರಕ್ಷಣೆಗಾಗಿ ಯಾವ ತ್ಯಾಗಕ್ಕೂಸಿದ್ಧ,ಪಕ್ಷಮೀರಿಹೋರಾಟಕ್ಕೂ ಸಿದ್ಧ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ.

ಬಣಜಿಗ ಲಿಂಗಾಯತ ಸಮು ದಾಯದ ಬಸವರಾಜ ಹೊರಟ್ಟಿ ಅವರುಪಕ್ಷೇತರರಾಗಿ, ಜನತಾ ಪಕ್ಷ, ಲೋಕಶಕ್ತಿ ಹಾಗೂ ಜನತಾ ದಳದಿಂದ ತಲಾ ಒಂದು ಬಾರಿ ಹಾಗೂ ಜೆಡಿಎಸ್‌ನಿಂದ ಮೂರು ಸಲ ಗೆದ್ದು ಬಂದಿದ್ದಾರೆ. 1980ರಿಂದ ಸತತ ಏಳು ಬಾರಿ ಜಯಗಳಿಸಿದ್ದಾರೆ. ಎಂಟನೇ ಬಾರಿ ಗೆದ್ದು ದಾಖಲೆ ಬರೆಯುವ ಹುಮಸ್ಸಿನಲ್ಲಿದೆ. ವೈಯಕ್ತಿಕ ವರ್ಚಸ್ಸು ಹಾಗೂ ಶಿಕ್ಷಕರ ಸಂಘಟನೆಗಳನ್ನು ನೆಚ್ಚಿಕೊಂಡಿದ್ದಾರೆ. ಈ ಸಲ ಬಿಜೆಪಿಯ ಸಂಘಟನಾ ಶಕ್ತಿಯು ಜೊತೆಗಿರುವುದು ಅವರಿಗೆ ಪ್ಲಸ್‌ ಪಾಯಿಂಟ್‌. ಆಡಳಿತ ಪಕ್ಷದ ಅಭ್ಯರ್ಥಿಯಾಗಿರುವುದು ಇನ್ನೊಂದಿಷ್ಟು ಬಲತಂದಿದೆ.

ಕೊನೆಯ ಕ್ಷಣದಲ್ಲಿ ಪಕ್ಷ ಬದಲಾಯಿಸಿರುವುದು, ತಮ್ಮೊಂದಿಗೆ ಹಲವು ಚುನಾವಣೆಯಲ್ಲಿ ಓಡಾಡಿದ್ದ ಶಿಷ್ಯ ಶ್ರೀಶೈಲ ಗಡದಿನ್ನಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು, ಪಠ್ಯಪುಸ್ತಕ ವಿವಾದ, ಪಕ್ಷದ ಪ್ರಮುಖ ನಾಯಕರು ಪ್ರಚಾರದಿಂದ ದೂರ ಉಳಿದಿರುವುದು ಒಳಹೊಡೆತ ಕೊಡುವ ಸಾಧ್ಯತೆ ಇದೆ.

ಕಾಂಗ್ರೆಸ್‌ ತೀವ್ರ ಪೈಪೋಟಿ: 2020ರಲ್ಲಿ ನಡೆದ ಪಶ್ಚಿಮ ಪದವೀಧರ ಚುನಾ ವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕುರುಬ ಸಮಾಜದ ಬಸವರಾಜ ಗುರಿಕಾರ, ಈಗ ಕಾಂಗ್ರೆಸ್‌ ಅಭ್ಯರ್ಥಿ.

ಗುರಿಕಾರ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು. ಈ ಶಿಕ್ಷಕರಿಗೆ ಪ್ರಸಕ್ತ ಚುನಾವಣೆಯಲ್ಲಿ ಮತದಾನದ ಹಕ್ಕು ಇಲ್ಲದಿರುವುದು ಇವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಆಡಳಿತ ವಿರೋಧಿ ಅಲೆಯ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಹೊರಟ್ಟಿ ಅವರು ಕೇವಲ ದಾಖಲೆಗಾಗಿ ಸ್ಪರ್ಧಿಸುತ್ತಿದ್ದಾರೆ. ಅವರಿಂದ ಶಿಕ್ಷಕರಿಗೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಾಗಿಲ್ಲವೆಂದು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಗುರುವಿಗೆ ಸವಾಲು: ಹೊರಟ್ಟಿ ಅವರು ಪಕ್ಷ ತೊರೆದ ನಂತರ ಎಚ್‌.ಡಿ. ಕುಮಾರಸ್ವಾಮಿ ಅವರು ಹೊರಟ್ಟಿ ಅವರ ಶಿಷ್ಯ ಶ್ರೀಶೈಲ ಅವರಿಗೆ ಟಿಕೆಟ್‌ ನೀಡಿ, ಗುರುವಿನ ವಿರುದ್ಧ ಕಣಕ್ಕಿಳಿಸಿದ್ದಾರೆ. ಲಿಂಗಾಯತ ಗಾಣಿಗ ಸಮುದಾಯದ ಶ್ರೀಶೈಲ ಅವರು ಹಲವು ಸಂಘಟನೆಗಳಲ್ಲಿ ತೊಡಗಿಕೊಂಡಿದ್ದಾರೆ.

ಹಲವಾರು ವರ್ಷಗಳಿಂದ ಹೊರಟ್ಟಿಯವರ ಜೊತೆಗೂಡಿ ಓಡಾಡಿದ ಅನುಭವ ಇರುವ ಶ್ರೀಶೈಲ ಅವರು ಹೊರಟ್ಟಿಯವರ ಮತ ಬ್ಯಾಂಕ್‌ ಮೇಲೆ ಕಣ್ಣುಹಾಕಿದ್ದು, ತಿರುಗೇಟು ನೀಡಲು ಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಸಾಧನೆಗಳನ್ನೇ ನೆಚ್ಚಿಕೊಂಡು ಮತಯಾಚಿಸುತ್ತಿದ್ದಾರೆ. ಕೊನೆಯ ಹಂತದಲ್ಲಿ ಕಣಕ್ಕಿಳಿದಿರುವುದರಿಂದ ಎಲ್ಲ ಮತದಾರರನ್ನು ತಲುಪಲು ಸಾಧ್ಯವಾಗಿಲ್ಲ.

ಪಕ್ಷೇತರರಾಗಿ ಕರಬಸಪ್ಪ ಮಧ್ಯಾನ್ನದ, ಕೃಷ್ಣವಾಣಿ ಶ್ರೀನಿವಾಸ ಗೌಡ, ಫಕೀರಗೌಡ ಕಲ್ಲನಗೌಡರ, ವೆಂಕನಗೌಡ ಗೋವಿಂದಗೌಡರ (ಎಎಪಿ ಬೆಂಬಲ) ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.