ADVERTISEMENT

ಅನಂತಕುಮಾರ್‌ ನೆನೆದು ಕಣ್ಣೀರಿಟ್ಟ ಸಂಸದ ಪ್ರತಾಪ್‌ ಸಿಂಹ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 9:54 IST
Last Updated 12 ನವೆಂಬರ್ 2018, 9:54 IST
ಪ್ರತಾಪ್‌ ಸಿಂಹ
ಪ್ರತಾಪ್‌ ಸಿಂಹ   

ಮಂಡ್ಯ: ಕೇಂದ್ರ ಸಚಿವ ಅನಂತಕುಮಾರ್‌ ಅವರ ಒಡನಾಟ ನೆನದು ಸಂಸದ ಪ್ರತಾಪ್‌ ಸಿಂಹ ಸೋಮವಾರ ಕಣ್ಣೀರಿಟ್ಟರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಅಳುತ್ತಲೇ ಹೊರನಡೆದರು.

‘ಕೊಡಗಿನಲ್ಲಿ ಸಂಭವಿಸಿದ ಪ್ರವಾಹದ ಕುರಿತು ಸಂಸತ್‌ನಲ್ಲಿ ಮಾತನಾಡಲು ಅನಂತಕುಮಾರ್‌ ಅವರು ನನ್ನ ಬೆನ್ನ ಹಿಂದಿದ್ದರು. ಅವರ ಸಲಹೆಯ ಮೇರೆಗೆ ಭಾಷಣ ತಯಾರುಮಾಡಿಕೊಂಡಿದ್ದೆ. ನಾಲ್ಕು ನಿಮಿಷವಾದ ಕೂಡಲೇ ನನ್ನ ಭಾಷಣವನ್ನು ಸ್ಪೀಕರ್‌ ತಡೆದರು. ಆದರೆ ಅನಂತಕುಮಾರ್‌ ಎದ್ದು ನಿಂತು, ಮೊದಲ ಬಾರಿಯ ಸಂಸದ, ಅವರಿಗೆ ಅವಕಾಶ ಕೊಡಿ ಎಂದು ಕೇಳಿಕೊಂಡರು. ನಂತರ ನಾನು 13 ನಿಮಿಷ ಮಾತನಾಡಿದೆ. ನನ್ನನ್ನು ಅಪ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಅಧಿವೇಶನದಲ್ಲಿ ಜೊತೆಗಿದ್ದ ಅವರು ಮುಂದಿನ ಅಧಿವೇಶನ ಬರುವಷ್ಟರಲ್ಲಿ ಇಲ್ಲ ಎಂಬುದುನ್ನು ನಂಬಲಾಗುತ್ತಿಲ್ಲ’ ಎಂದು ಭಾವುಕರಾದರು.

‘ನನ್ನ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಅವರ ಬಳಿ ಹೇಳುತ್ತಿದ್ದೆ. ಸಂಬಂಧಿಸಿದ ಸಚಿವರ ಬಳಿ ನೇರವಾಗಿ ಮಾತನಾಡಿ ಕೆಲಸ ಮಾಡಿಸಿಕೊಡುತ್ತಿದ್ದರು. ಮೈಸೂರಿಗೆ ಪಾಸ್‌ಪೋರ್ಟ್‌ ಸೇವಾಕೇಂದ್ರ, ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಕಾಮಗಾರಿಗಳು ಅವರಿಂದಲೇ ಸಾಕಾರಗೊಂಡವು. ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಸಮಸ್ಯೆ ಬಗೆಹರಿಸಿದರು. ಎಲ್ಲಾ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದ ಅವರು ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ನಡುವೆ ಸೇತುವೆಯಂತಿದ್ದರು’ ಎಂದು ಹೇಳಿದರು.

ADVERTISEMENT

‘ವಿಮಾನಯಾನ ಖಾತೆ ಸಚಿವರಾಗಿದ್ದ ಅವರು ಬೆಂಗಳೂರಿಗೆ ಅಂತರರಾಷ್ಟ್ರೀಯ ವಿಮಾನನಿಲ್ದಾಣ ತರಲು ಪ್ರಮುಖ ಪಾತ್ರ ವಹಿಸಿದ್ದಾರೆ. ₹ 17 ಸಾವಿರ ಕೋಟಿ ವೆಚ್ಚದ ಉಪ ನಗರ (ಸಬರ್ಬನ್‌) ರೈಲ್ವೆ ಯೋಜನೆಯ ಮಾಹಿತಿ ಮುಂದಿನ ತಿಂಗಳು ಘೋಷಣೆಯಾಗಲಿದೆ. ಈ ಯೋಜನೆ ವೇಗ ಪಡೆದುಕೊಳ್ಳಲು ಅನಂತಕುಮಾರ್‌ ಶ್ರಮಿಸಿದ್ದಾರೆ. ಅವರು ಸದಾ ಜನರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು, ಆದರೆ ದೇವರು ಅವರ ಯೋಗಕ್ಷೇಮ ನೋಡಿಕೊಳ್ಳಲಿಲ್ಲ’ ಎಂದು ಕಣ್ಣೀರಾದರು.

‘ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ಪ್ರಮಾಣ ಪತ್ರ ವಿತರಣೆ ಮಾಡುವಲ್ಲಿ ಅನಂತಕುಮಾರ್‌ ಹಿಂದೆ ನಿಂತಿದ್ದರು’ ಎಂದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.