ADVERTISEMENT

ಕಿಡಿಗೇಡಿಗಳು ಯಾರಾಗಿದ್ದರೂ ಸರಿ ಶಿಕ್ಷೆಯಾಗಬೇಕು: ಅಖಂಡ ಶ್ರೀನಿವಾಸಮೂರ್ತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 10:16 IST
Last Updated 12 ಆಗಸ್ಟ್ 2020, 10:16 IST
ಅಖಂಡ ಶ್ರೀನಿವಾಸಮೂರ್ತಿ
ಅಖಂಡ ಶ್ರೀನಿವಾಸಮೂರ್ತಿ   

ಬೆಂಗಳೂರು: ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 3 ರಿಂದ 4 ಸಾವಿರ ಜನ ಏಕಾಏಕಿ ಮನೆಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಲಾಂಗ್, ಮಚ್ಚು, ದೊಣ್ಣೆ ತಂದಿದ್ದರು. ಪೆಟ್ರೋಲ್ ಬಾಂಬ್ ಹಾಕಿದರು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು.

ಸಚಿವ ಆರ್.ಅಶೋಕ್ ಅವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ನಮ್ಮ ಕ್ಷೇತ್ರದಲ್ಲಿ ಎಂದೂ ಹೀಗೆ ಆಗಿರಲಿಲ್ಲ. ವಿವಿಧ ಜನಾಂಗಗಳಿಗೆ ಸೇರಿದವರು ಅಣ್ಣತಮ್ಮಂದಿರಂತೆ ಬಾಳುತ್ತಿದ್ದೆವು.ಕಿಡಿಗೇಡಿಗಳು ಯಾರೇ ಆಗಿದ್ದರೂ ಸರಿ, ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು. ಒಬ್ಬ ಜನಪ್ರತಿನಿಧಿಗೆ ಹೀಗಾದ್ರೆ ಜನರಿಗೆ ನಾವು ಏನು ರಕ್ಷಣೆ ಕೊಡೋಕೆ ಆಗುತ್ತೆ ಎಂದು ಪ್ರಶ್ನಿಸಿದರು.

50 ವರ್ಷಗಳಿಂದ ಇದ್ದ ಮನೆ ಅದು. ನಮ್ಮ ತಂದೆ-ತಾಯಿ, ನಾವು ವಾಸ ಮಾಡಿದ್ದ ಮನೆ. 9 ಮಕ್ಕಳಿರುವ ಅವಿಭಕ್ತ ಕುಟುಂಬ ಅದು. ನನ್ನ ಮತ್ತು ತಮ್ಮನ ಮನೆ ಸುಟ್ಟು ಹಾಕಿದ್ದಾರೆ. ನಾವು ಎಲ್ಲಿಗೆ ಹೋಗಬೇಕು. ಆತ್ಮರಕ್ಷಣೆಯ ಆತಂಕವಿದೆ. ನಮ್ಮ ಜೀವ ರಕ್ಷಣೆಗೆ ಭದ್ರತೆ ಕೊಡಬೇಕು ಅಂತ ಸರ್ಕಾರವನ್ನು ಕೋರುತ್ತೇನೆ ಎಂದು ಹೇಳಿದರು. ಮನೆ ಸುಟ್ಟುಹೋದ ವಿಚಾರವನ್ನು ಪ್ರಸ್ತಾಪಿಸುವಾಗ ಕಣ್ಣೀರಿಟ್ಟರು.

ADVERTISEMENT

ನಮ್ಮ ಕ್ಷೇತ್ರದ ಜನರು ಸಮಾಧಾನವಾಗಿರಬೇಕು. 25 ವರ್ಷಗಳಿಂದ ಏನೂ ಆಗಿರಲಿಲ್ಲ. ಈಗ ಆಗಿದೆ. ಗುಪ್ತಚರ ಮಾಹಿತಿ ಪಡೆದು ಘಟನೆಗೆ ಕಾರಣರಾದವರನ್ನುಬಂಧಿಸಬೇಕು. ನಿನ್ನೆರಾತ್ರಿ 3 ಗಂಟೆಗೆ ಸಚಿವ ಅಶೋಕ್ ಬಂದಿದ್ದರು. ನಮ್ಮ ಪರಿಸ್ಥಿತಿ ಯಾವ ರೀತಿ ಇದೆ ಎಂದು ನೋಡಿದ್ದಾರೆ. ನಮ್ಮ ಮನೆ ಲೂಟಿ ಆಗಿದೆ. ಸೀರೆ, ಒಡವೆ ತೆಗೆದುಕೊಂಡಿದ್ದಾರೆ. ಗ್ಯಾಸ್ ಸಿಲಿಂಡರ್‌ಸಿಡಿಸಲು ಪುಂಡರು ಯೋಚನೆ ಮಾಡಿದ್ದರು. ಅಷ್ಟರಲ್ಲಿ ಪೊಲೀಸರು ಬಂದು ಕಾಪಾಡಿದರುಗಲಭೆ ಸಂದರ್ಭ ಏನೆಲ್ಲಾ ಆಯಿತು ಎಂಬುದನ್ನುವಿವರಿಸಿದರು.

ಜಮೀರ್ ಅಹಮದ್ ಮತ್ತು ರಿಜ್ವಾನ್ ಅರ್ಷದ್ ರಾತ್ರಿಯೇಬಂದು ಕ್ಷೇತ್ರದ ಜನರನ್ನು ಸಮಾಧಾನ ಮಾಡಿದರು. ನಮ್ಮ ಕ್ಷೇತ್ರದ ಜನರು ಎಂದಿಗೂಹೀಗೆ ಇರಲಿಲ್ಲ, ವರ್ತಿಸಿರಲಿಲ್ಲ. ಸಿಸಿಬಿ, ಸಿಐಡಿ ಅಥವಾ ಸಿಬಿಐ ಯಾವುದಾದ್ರೂ ಸರಿ, ಸರಿಯಾಗಿ ತನಿಖೆ ಮಾಡಿಸಿ. ಅತಿ ಹೆಚ್ಚು ಮತ ಪಡೆದ ಶಾಸಕ ನಾನು. ನನ್ನ ಪರಿಸ್ಥಿತಿಯೇ ಹೀಗಾದ್ರೆ ಹೇಗೆ? ಶಾಂತಿ ಕಾಪಾಡುವುದು ನಮ್ಮ ಮೊದಲ ಅದ್ಯತೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಿ ಎಂದು ಮನವಿ ಮಾಡಿದರು.

(ಗಲಭೆಗೆ ಕಾರಣ ಎಂದು ಹೇಳುತ್ತಿರುವ ಫೇಸ್‌ಬುಕ್ ಪೋಸ್ಟ್‌ ಮಾಡಿದ)ನವೀನ್ ಎಂಬಾತ ನನ್ನ ಅಕ್ಕನ ಮಗ. 10 ವರ್ಷಗಳಿಂದ ಅವನನ್ನು ನಾನು ಹತ್ತಿರ ಸೇರಿಸುತ್ತಿರಲಿಲ್ಲ.ನನಗೂ ಅವನಿಗೂ ಸಂಬಂಧವೇ ಇಲ್ಲ. ಎಸ್‌ಡಿಪಿಐ ಅಥವಾ ಯಾರೊಬ್ಬರ ಬಗ್ಗೆಯೂ ನನಗೆ ಸಂಶಯವಿದೆ ಎಂದು ನಾನು ಹೇಳಲಾರೆ. ತಪ್ಪು ಮಾಡಿದವರ ಮೇಲೆ ಸರ್ಕಾರ ಕ್ರಮಕೈಗೊಳ್ಳಬೇಕು. ನಾನು ಎಲ್ಲರ ಜೊತೆಗೆ ಒಂದಾಗಿ ಹೋಗುತ್ತಿದ್ದೇನೆ. ರಾಜಕೀಯ ಪ್ರಭಾವದಿಂದ ಹೀಗೆ ಆಗಿದೆ ಎಂದು ನಾನು ಆರೋಪ ಮಾಡಲ್ಲ. ಇತರ ಪಕ್ಷಗಳ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು.

ಕೇವಲ 10 ನಿಮಿಷಗಳಲ್ಲಿ ನನ್ನ ಜೀವ ಉಳಿಯಿತು. ಮನೆ ಹತ್ತಿರ ಬರುವಾಗ ಪೊಲೀಸರು ನನಗೆ ಸೂಚನೆ ಕೊಟ್ಟು ಬೇರೆ ಕಡೆಗೆ ಕಳಿಸಿದರು. ನನಗೆ ರಕ್ಷಣೆ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.