ADVERTISEMENT

ಮೊಬೈಲ್‌ ತಯಾರಿಕೆ ₹13.50 ಲಕ್ಷ ಕೋಟಿ ಆಕರ್ಷಣೆಗೆ ರೂಪುರೇಷೆ: ಎಂ.ಬಿ.ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 15:54 IST
Last Updated 4 ಡಿಸೆಂಬರ್ 2025, 15:54 IST
ಐಸಿಇಎ ಪ್ರತಿನಿಧಿಗಳ ಜತೆಗೆ ಎಂ.ಬಿ.ಪಾಟೀಲ ಅವರು ಸಭೆ ನಡೆಸಿದರು
ಐಸಿಇಎ ಪ್ರತಿನಿಧಿಗಳ ಜತೆಗೆ ಎಂ.ಬಿ.ಪಾಟೀಲ ಅವರು ಸಭೆ ನಡೆಸಿದರು   

ಬೆಂಗಳೂರು: ‘ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ವಿನ್ಯಾಸ ಹಾಗೂ ತಯಾರಿಕಾ ಕ್ಷೇತ್ರಕ್ಕೆ 15,000 ಕೋಟಿ ಡಾಲರ್‌ (ಸುಮಾರು ₹13.50 ಲಕ್ಷ ಕೋಟಿ) ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಮುನ್ನೋಟ ದಾಖಲೆ (ವಿಷನ್‌ ಡಾಕ್ಯುಮೆಂಟ್‌) ಸಿದ್ಧಪಡಿಸಿ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಂಡಿಯನ್‌ ಸೆಲ್ಯುಲಾರ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಅಸೋಸಿಯೇಷನ್‌ (ಐಸಿಇಎ) ಅಧ್ಯಕ್ಷ ಪಂಕ್‌ ಮಹೀಂದ್ರೂ ನೇತೃತ್ವದ ಉದ್ಯಮಿಗಳ ನಿಯೋಗವು ಸಚಿವ ಎಂ.ಬಿ.ಪಾಟೀಲ ಅವರನ್ನು ಗುರುವಾರ ಭೇಟಿಯಾಗಿತ್ತು. ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ತಯಾರಿಕೆಗೆ ಇರುವ ಅವಕಾಶಗಳು ಹಾಗೂ ಅಗತ್ಯವಿರುವ ಸವಲತ್ತುಗಳ ಬಗ್ಗೆ ನಿಯೋಗವು ಸಚಿವರಿಗೆ ವಿವರಣೆ ನೀಡಿತ್ತು.

ಪಂಕಜ್ ಮಹೀಂದ್ರೂ, ‘ಮೊಬೈಲ್‌ ಫೋನ್‌ ಡಿಸ್‌ಪ್ಲೇ, ಕ್ಯಾಮೆರಾ ಮಾಡ್ಯೂಲ್‌ ನಂತಹ ಬಿಡಿಭಾಗಗಳ ತಯಾರಿಕೆಗೆ ಒತ್ತು ನೀಡಿರುವ ಕೇಂದ್ರ ಸರ್ಕಾರ, ಅದಕ್ಕಾಗಿ ನೀತಿ ರೂಪಿಸಿದೆ. ಅದರ ಅಡಿಯಲ್ಲಿ ವಹಿವಾಟು ಆಧಾರಿತ ಪ್ರೋತ್ಸಾಹಧನ, ಶೇ 25ರವರೆಗೆ ಹೂಡಿಕೆ ಸಹಾಯಧನ ನೀಡುತ್ತಿದೆ. ಇದಕ್ಕಾಗಿ ₹22,900 ಕೋಟಿ ತೆಗೆದಿರಿಸಿದೆ. ಈಗಾಗಲೇ ₹7,172 ಕೋಟಿ ಮೊತ್ತದ 17 ಹೂಡಿಕೆ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ’ ಎಂದು ತಿಳಿಸಿದರು.

ADVERTISEMENT

ಎಂ.ಬಿ.ಪಾಟೀಲ ಅವರು, ‘ಕೇಂದ್ರ ಸರ್ಕಾರವು ಇದೇ ಏಪ್ರಿಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ತಯಾರಿಕಾ ನೀತಿಯನ್ನು ಘೋಷಿಸಿದೆ. ಅದಕ್ಕೆ ಸಮಾನಾಂತರವಾಗಿ ಕರ್ನಾಟಕ ಸರ್ಕಾರವೂ ಒಂದು ನೀತಿ ರೂಪಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗುತ್ತಿದೆ. ಐಸಿಇಎ ನೀಡುವ ಸಲಹೆಗಳನ್ನು ಆ ನೀತಿಯಲ್ಲಿ ಸೇರಿಸುವ ಬಗ್ಗೆ ಪರಿಶೀಲಿಸಲಾಗುತ್ತದೆ’ ಎಂದು ನಿಯೋಗಕ್ಕೆ ತಿಳಿಸಿದರು. 

ನಂತರ ಇಲಾಖೆಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಅವರು, ಮುನ್ನೋಟ ದಾಖಲೆ ಸಿದ್ಧಪಡಿಸಿ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.