
ಪತ್ರಿಕಾಗೋಷ್ಠಿಯಲ್ಲಿ ಮುಖಂಡರು ಮಾತನಾಡಿದರು
ಬೆಂಗಳೂರು: ‘ಸ್ವಸ್ಥ ಮತ್ತು ಸ್ವಚ್ಛ ಸಮಾಜ ನಿರ್ಮಿಸುವ ಉದ್ದೇಶದಿಂದ ‘ಮಾದರಿ ನೆರೆಹೊರೆ, ಮಾದರಿ ಸಮಾಜ’ ಎಂಬ ಅಭಿಯಾನವನ್ನು ನಡೆಸಲಾಗುತ್ತದೆ’ ಎಂದು ಜಮಾಅತ್ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಅಧ್ಯಕ್ಷ ಮುಹಮ್ಮದ್ ಸಾದ್ ಬೆಳ್ಗಾಮಿ ಅವರು ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೆಂಬರ್ 21ರಿಂದ 30ರವರೆಗೆ ಅಭಿಯಾನ ನಡೆಯಲಿದೆ. ಒಂದೆಡೆಯೇ ಬದುಕುತ್ತಿರುವ ಕುಟುಂಬಗಳ ನಡುವಣ ಅಂತರವನ್ನು ಹೋಗಲಾಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ’ ಎಂದರು.
‘ಒಂದೆಡೆಯೇ ಬದುಕುವವರು ಪರಸ್ಪರರ ಬಗ್ಗೆ ಕಾಳಜಿ, ಸಹಕಾರ ಮತ್ತು ಸಾಮಾಜಿಕ ಹೊಣೆಗಾರಿಕೆ ಹೊಂದುವುದು ಇಂದಿನ ಅಗತ್ಯವಾಗಿದೆ. ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಭಿಯಾನದ ಭಾಗವಾಗಿ ಶಾಂತಿ ಸಭೆ, ಮನೆ–ಮನೆ ಭೇಟಿ, ಸಂವಾದಗಳನ್ನು ನಡೆಸಲಾಗುತ್ತದೆ’ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಮೌಲಾನಾ ಅಬ್ದುಲ್ ಗಫ್ಫಾರ್ ಹಾಮಿದ್ ಉಮ್, ಮೌಲಾನಾ ವಹೀದುದ್ದೀನ್ ಖಾನ್ ಉಮ್ರಿ ಮದನಿ, ಜನಾಬ್ ಮಹಮ್ಮದ್ ಬಿಲಾಲ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.