ADVERTISEMENT

ರಾಜ್ಯದಲ್ಲಿ ತಗ್ಗಿದ ಮಳೆ, ಪ್ರವಾಹ ಭೀತಿ ಸದ್ಯಕ್ಕೆ ದೂರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 21:43 IST
Last Updated 21 ಜೂನ್ 2021, 21:43 IST
jalashaya matta
jalashaya matta   

ಬೆಳಗಾವಿ/ಶಿವಮೊಗ್ಗ/ಮಂಗಳೂರು: ರಾಜ್ಯದಲ್ಲಿ ಮಳೆ ಸೋಮವಾರ ಬಹುತೇಕ ಕಡಿಮೆಯಾಗಿದ್ದು, ಬೆಳಗಾವಿ ಭಾಗದಲ್ಲಿ ಪ್ರವಾಹ ಭೀತಿಯೂ ಸದ್ಯಕ್ಕೆ ದೂರವಾಗಿದೆ.

ಜಿಲ್ಲೆಯಲ್ಲಿ ಹಾಗೂ ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ನಿಂತಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 85,750 ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿಯಿಂದ 28,828 ಕ್ಯುಸೆಕ್ ಸೇರಿ ಒಟ್ಟು 1,12,578 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ.

ಕಲ್ಲೋಳ–ಯಡೂರ ಹಾಗೂ ಮಲಿಕವಾಡ–ದತ್ತವಾಡ ಸೇತುವೆಗಳು ಬಂದ್ ಸ್ಥಿತಿಯಲ್ಲೇ ಇವೆ. ಘಟಪ್ರಭಾ ಹಾಗೂ ಮಲಪ್ರಭಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ತಗ್ಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಒಳಹರಿವು ಕಡಿಮೆಯಾಗಿದೆ. 12.1 ಟಿಎಂಸಿ ಅಡಿ ನೀರು ಸೋಮವಾರ ಜಲಾಶಯಕ್ಕೆ ಹರಿದು ಬಂದಿದೆ.

ADVERTISEMENT

ತುಂಗಭದ್ರಾ ಅಣೆಕಟ್ಟೆಯ ಒಳಹರಿವು ಸತತ ಹೆಚ್ಚುತ್ತಲೇ ಇದ್ದು, ಕಳೆದ ಎರಡು ದಿನಗಳಲ್ಲಿ 8 ಟಿಎಂಸಿ ಅಡಿ ನೀರು ಹರಿದು ಬಂದಿದೆ.

ಬಿಡುವು ನೀಡಿದ ಮಳೆ
ಶಿವಮೊಗ್ಗ ವರದಿ: ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದೆ. ಆಗುಂಬೆ, ಹುಲಿಕಲ್‌ ಪ್ರದೇಶದಲ್ಲೂ ಮಳೆ ಪ್ರಮಾಣ ಕ್ಷೀಣಿಸಿದೆ. 24 ತಾಸುಗಳ ಹಿಂದೆ ಲಿಂಗನಮಕ್ಕಿಗೆ 40,059 ಕ್ಯುಸೆಕ್‌ ಹರಿದು ಬರುತ್ತಿತ್ತು. ಈಗ ಕಡಿಮೆಯಾಗಿದೆ. ಭದ್ರಾ ಜಲಾಶಯದ ಒಳಹರಿವು 13 ಸಾವಿರ ಕ್ಯುಸೆಕ್‌ ಇದೆ.

ದಾವಣಗೆರೆ ನಗರ ಹಾಗೂ ಜಿಲ್ಲೆಯ ಹರಿಹರ, ಮಲೇಬೆನ್ನೂರು, ಉಚ್ಚಂಗಿದುರ್ಗದಲ್ಲಿ ಮಳೆಯಾಗಿದೆ.

ಮಂಗಳೂರು ವರದಿ:
ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 3.6 ಸೆಂ.ಮೀ. ಮಳೆಯಾಗಿದೆ. ಒಟ್ಟು 3 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಅಡಿಕೆ ಮರಗಳು ನೆಲಕ್ಕೆ ಉರುಳಿವೆ.

ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ ತಾಲ್ಲೂಕಿನ ಪಾರಂಪಳ್ಳಿ, ಕುಂದಾಪುರ ತಾಲ್ಲೂಕಿನ ಕುಂದಾಪುರ, ಕುಂಭಾಶಿ, ಕಂದಾವರ, ಕಾರ್ಕಳ ತಾಲ್ಲೂಕಿನ ಕಾರ್ಕಳ ಕಸಬಾ, ಕಾಪು ತಾಲ್ಲೂಕಿನ ಕುತ್ಯಾರು ಗ್ರಾಮದಲ್ಲಿ ಮಳೆ–ಗಾಳಿಗೆ ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದೆ.

ಕೊಡಗಿನಲ್ಲಿ ಮತ್ತೆ ಮಳೆ:

ಕೊಡಗು ಜಿಲ್ಲೆಯ ಮಡಿಕೇರಿ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಭಾಗದಲ್ಲೂ ಬಿರುಸಿನ ಮಳೆ
ಸುರಿಯಿತು.

ಗರಿಷ್ಠ ಮಳೆ ವಿವರ


ಯಡೂರು (ಶಿವಮೊಗ್ಗ);12.24 ಸೆಂ.ಮೀ

ಅಂಪಾರು (ಉಡುಪಿ);8.6 ಸೆಂ.ಮೀ.

ಕೊಕ್ಕಡ (ದಕ್ಷಿಣ ಕನ್ನಡ);8.2 ಸೆಂ.ಮೀ.

ಮೆಣಸೆ (ಚಿಕ್ಕಮಗಳೂರು);6.2 ಸೆಂ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.