ADVERTISEMENT

ಶ್ರೀಗಳ ಐಕ್ಯಸ್ಥಳದಲ್ಲಿ ನಿಂತು ಮೋದಿ ನನ್ನ ಪ್ರಶ್ನೆಗೆ ಉತ್ತರಿಸುವರೇ: ಎಚ್‌ಡಿಕೆ

ಮೋದಿ ರಾಜ್ಯ ಭೇಟಿ ಹಿನ್ನೆಲೆಯಲ್ಲೇ ಎಚ್‌ಡಿಕೆ ಸರಣಿ ಟ್ವೀಟ್‌ 

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 9:25 IST
Last Updated 2 ಜನವರಿ 2020, 9:25 IST
   
""

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಕೇಂದ್ರದ ಅನುದಾನ ತಾರತಮ್ಯದ ಕುರಿತು ಸರಣಿ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು, ಮೋದಿ ಮತ್ತು ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೆ,ಮೋದಿ ಮತ್ತು ಬಿಎಸ್‌ವೈ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಆಗ್ರಹಿಸಿದ್ದಾರೆ.

ರಾಜ್ಯದ ತೆರಿಗೆ ಸಂಗ್ರಹ ಕುಸಿತವಾಗಿರುವುದು ಮತ್ತು ಕೇಂದ್ರದ ಮಾದರಿಯಲ್ಲಿ ವೆಚ್ಚ ಕಡಿಮೆ ಮಾಡುವ ಕುರಿತು ರಾಜ್ಯ ಸರ್ಕಾರ ಚಿಂತಿಸಿರುವ ಬಗ್ಗೆ ‘ಪ್ರಜಾವಾಣಿ’ ಇಂದು (ಜ.2)‘ರಾಜ್ಯದಲ್ಲೂ ವೆಚ್ಚ ಕಡಿತ?’ ಎಂಬ ಶೀರ್ಷಿಕೆಯೊಂದಿಗೆ ವರದಿ ಪ್ರಕಟಿಸಿತ್ತು. ಇದೇ ವರದಿಯನ್ನು ಉಲ್ಲೇಖಿಸಿ ಯಡಿಯೂರಪ್ಪ ಮತ್ತು ಮೋದಿ ಅವರ ವಿರುದ್ಧ ಎಚ್‌.ಡಿ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.

ಏ‌ನಿದೆ ಎಚ್‌ಡಿಕೆ ಟ್ವೀಟ್‌ನಲ್ಲಿ?

ADVERTISEMENT

ರಾಜ್ಯದ ಖಜಾನೆ ಖಾಲಿಯಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ಕ್ಷೇತ್ರ, ವಾಣಿಜ್ಯ ತೆರಿಗೆ ಬಹುದೊಡ್ಡ ಆದಾಯದ ಮೂಲವಾದರೂ ಅವುಗಳಿಂದ ಸಂಪನ್ಮೂಲ ಬಂದಿಲ್ಲ‌. ಕಾರಣವೇನು? ಕೇಂದ್ರದ ಕೆಟ್ಟ ಆರ್ಥಿಕ‌ ನೀತಿ. ಜಿಡಿಪಿ, ದೇಶದ ಅಭಿವೃದ್ಧಿ ನುಂಗಿದ ಕೇಂದ್ರದ ನೀತಿಗಳು ಈಗ ರಾಜ್ಯದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ತೆರಿಗೆಯಲ್ಲಿ ರಾಜ್ಯಕ್ಕೆ ನೀಡಬೇಕಾದ ಪಾಲನ್ನೂ ಕೇಂದ್ರ ವಂಚಿಸಿದೆ‌. ರಾಜ್ಯಕ್ಕೆ ಬರಬೇಕಿದ್ದ ಪಾಲಿನಲ್ಲಿ 5.44% ರಷ್ಟು ಇನ್ನೂ ಬಂದಿಲ್ಲ. ಇದು ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ. ಲೋಕಸಭೆ ಸ್ಥಾನಗಳ ಮೇಲೆ ಮಾತ್ರ ಕಣ್ಣಿಡುವ ಕೇಂದ್ರ ಇಲ್ಲಿನ ಬೇಕು ಬೇಡಗಳನ್ನು ನಿರ್ಲಕ್ಷಿಸುತ್ತದೆ. ಮೋದಿ ಈ ಬಗ್ಗೆ ಇಂದು ಮಾತಾಡಲಿ ಎಂದು ಸವಾಲು ಹಾಕಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಮರುದಿನ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದಿದ್ದರು ಬಿಎಸ್ವೈ.ಆದರೀಗ ಪರಿಸ್ಥಿತಿ ವಿಷಮವಾಗಿದೆ.ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಬರ ಪರಿಹಾರ,ಅನುದಾನ, ತೆರಿಗೆ ಹಂಚಿಕೆಗಳನ್ನು ದಿಟ್ಟತನದಿಂದ ಕೇಳುವ ಶಕ್ತಿ ಬಿಎಸ್ವೈ ಅವರಿಗಿಲ್ಲ.ನ್ಯಾಯವಾಗಿ ಬರಬೇಕಾದ್ದನ್ನು ಪಡೆಯಲಾಗದ ಬಿಎಸ್ವೈ ಅವರು ದುರ್ಬಲ ಸಿಎಂ ಎಂದು ಮೂದಲಿಸಿದ್ದಾರೆ.

ರಾಜ್ಯದಿಂದ 25 ಸಂಸದರನ್ನು ಪಡೆದಿರುವ ಮೋದಿಯವರು, ಕೇಂದ್ರದ ಚಂದಮಾಮನನ್ನು ತೋರಿಸಿ 'ಅನರ್ಹ ಸರ್ಕಾರ' ರಚಿಸಿಕೊಂಡ ಬಿಎಸ್ವೈ ಅವರು ಶಿವಕುಮಾರ ಸ್ವಾಮೀಜಿಗಳು ಐಕ್ಯರಾಗಿರುವ ತುಮಕೂರಿನ ನೆಲದಲ್ಲಿ ನಿಂತು ಇವೆಲ್ಲಕ್ಕೂ ಉತ್ತರ ಕೊಡುವರೇ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.