ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಸಂದರ್ಭ
-ಪಿಟಿಐ ಚಿತ್ರ
ಬೆಂಗಳೂರು: ಕನ್ನಡದ ಹೆಸರಾಂತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಅವರ, ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್' ಈ ಪ್ರಶಸ್ತಿ ಗೆದ್ದಿದ್ದು, ಕರ್ನಾಟಕದಾದ್ಯಂತದ ಬರಹಗಾರರು ಮತ್ತು ಸಾಹಿತ್ಯ ಪ್ರೇಮಿಗಳು ಈ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ.
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ.
'ಹಾರ್ಟ್ ಲ್ಯಾಂಪ್' ಸಂಕಲನವು ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಕೃತಿಯಾಗಿದೆ. ಹಿಂದೆ ಈ ಪ್ರಶಸ್ತಿಯನ್ನು ಭಾರತೀಯ ಬರಹಗಾರರು ವಿ.ಎಸ್. ನೈಪಾಲ್, ಸಲ್ಮಾನ್ ರಶ್ದಿ, ಅರುಂಧತಿ ರಾಯ್, ಅರವಿಂದ್ ಅಡಿಗ ಮತ್ತು ಗೀತಾಂಜಲಿ ಶ್ರೀ ಅವರು ಗೆದ್ದುಕೊಂಡಿದ್ದರು.
ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ. 'ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು' ಎಂದು ಹೇಳಿದ್ದಾರೆ.
ಬಾನು ಕಿರುಪರಿಚಯ: 1948ರಲ್ಲಿ ಜನಿಸಿದ ಬಾನು, ಕರ್ನಾಟಕದ ಹಾಸನ ಜಿಲ್ಲೆಯವರು. ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳೆಯರ ಅನುಭವಗಳನ್ನು ಕಟ್ಟಿಕೊಡುವ ಕಥೆಗಾರರಾಗಿ ಖ್ಯಾತಿಯನ್ನು ಗಳಿಸಿದ್ದಾರೆ. ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಜಾತಿ ಧರ್ಮದ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆಯ ವಿರುದ್ಧ ಧ್ವನಿಗೂಡಿಸುವ ಕಾರ್ಯಕರ್ತೆಯಾಗಿ ಹಾಗೂ ಪತ್ರಕರ್ತೆಯಾಗಿಯೂ ಹೆಸರುವಾಸಿಯಾಗಿದ್ದಾರೆ. ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಬಾನು, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವಂತೆ ಒತ್ತಾಯಿಸಿ ಗೋಕಾಕ್ ಚಳುವಳಿ ಮತ್ತು 80ರ ದಶಕದ ರೈತರ ಆಂದೋಲನದಲ್ಲಿಯೂ ಮುಂಚೂಣಿಯಲ್ಲಿದ್ದರು.
‘ಜ್ಞಾನಪೀಠ ಪ್ರಶಸ್ತಿ ಪಡೆದ ಇಸ್ಮತ್ ಚುಗ್ತಾಯಿ ಅವರಂತಹ ಮುಸ್ಲಿಂ ಸಮುದಾಯದಿಂದ ಬಂದ ಅನೇಕ ಶ್ರೇಷ್ಠ ಬರಹಗಾರರಿದ್ದಾರೆ. ಈ ಪ್ರಶಸ್ತಿಯೊಂದಿಗೆ ಕರ್ನಾಟಕದ ಮುಸ್ಲಿಂ ಮಹಿಳಾ ಬರಹಗಾರರು ಭಾರತದ ಮಟ್ಟದಲ್ಲಿ ಮನ್ನಣೆ ಪಡೆಯಲಿದ್ದಾರೆ' ಎಂದು ಪ್ರಸಿದ್ಧ ಬರಹಗಾರ ರಹಮತ್ ತರೀಕೆರೆ ತಿಳಿಸಿದ್ದಾರೆ.
'ಬಾನು ಅವರು ಕರ್ನಾಟಕವನ್ನು ಮಾತ್ರವಲ್ಲದೆ ಇಡೀ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ನಮ್ಮಲ್ಲಿ ಅನೇಕ ಮುಸ್ಲಿಂ ಲೇಖಕರು ವ್ಯಾಪಕವಾಗಿ ಬರೆಯುತ್ತಿದ್ದರೂ, ಅವರು ತಮ್ಮದೇ ಆದ ಧರ್ಮವನ್ನು ಟೀಕಿಸುವಲ್ಲಿ ಧೈರ್ಯಶಾಲಿಗಳಾಗಿಲ್ಲ. ಆದರೆ, ಬಾನು ಅವರು ಯಾವಾಗಲೂ ಪ್ರಗತಿಪರ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಬರಹಗಾರ ವಸುಧೇಂದ್ರ ಹೇಳುತ್ತಾರೆ.
'ಮುಸ್ಲಿಂ ಮಹಿಳಾ ಬರಹಗಾರರು ಹೆಚ್ಚಾಗಿ ಇರುವ ಉರ್ದು ಭಾಷೆಯಲ್ಲಿ ಬರೆದಿದ್ದಾರೆ. ಆದರೆ, ಕನ್ನಡ ಸಾಹಿತ್ಯವು ಕರ್ನಾಟಕಕ್ಕೆ ಸೀಮಿತವಾಗಿದೆ. ಆದರೆ, ಬಾನು ಅವರು ರಾಜ್ಯ ಮಾತ್ರವಲ್ಲದೇ ದೇಶ ಮತ್ತು ಜಗತ್ತಿಗೆ ಮುಸ್ಲಿಂ ಮಹಿಳೆಯರ ಜೀವನವನ್ನು ಪರಿಚಯಿಸಿದ್ದಾರೆ' ಎಂದು ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ.
ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಬರಹಗಾರ್ತಿ ಡಾ. ಎಚ್.ಎಸ್. ಅನುಪಮಾ ಅವರು ಪ್ರತಿಕ್ರಿಯಿಸಿದ್ದು, ಬಾನು ಅವರು ಸಮಕಾಲೀನ ಕನ್ನಡ ಬರಹಗಾರರಲ್ಲಿ ಒಬ್ಬರು. ಅವರು ಮಹಿಳೆಯರು, ಅಲ್ಪಸಂಖ್ಯಾತ ಮಹಿಳೆಯರು ಮತ್ತು ಕರ್ನಾಟಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ. ಈ ಪ್ರಶಸ್ತಿಯೊಂದಿಗೆ, ಕರ್ನಾಟಕವು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಇದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಬಾನು ಅವರು ಪ್ರಗತಿಪರ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ. ತಮ್ಮ ಕಥೆಗಳ ಮೂಲಕ ಅವರು ಓದುಗರಿಗೆ ಹೊಸದೊಂದು ಲೋಕವನ್ನು ಪ್ರಸ್ತುತಪಡಿಸಿದ್ದಾರೆ. ಅವರ ಬರಹಗಳು ಮುಸ್ಲಿಂ ಮಹಿಳೆಯರ ಕಠೋರ ವಾಸ್ತವಗಳಿಗೆ ಹಿಡಿದ ಕನ್ನಡಿಯಾಗಿದೆ ಎಂದು ಲೇಖಕಿ ದು. ಸರಸ್ಪತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.