ADVERTISEMENT

ಕರಾವಳಿಯಲ್ಲಿ ‘ಆರೆಂಜ್ ಅಲರ್ಟ್’, ಧಾರಾಕಾರ ಮಳೆಯಾಗುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 2:19 IST
Last Updated 2 ಜುಲೈ 2020, 2:19 IST
ಸುರಿಯುತ್ತಿರುವ ಮಳೆ (ಸಾಂದರ್ಭಿಕ ಚಿತ್ರ)
ಸುರಿಯುತ್ತಿರುವ ಮಳೆ (ಸಾಂದರ್ಭಿಕ ಚಿತ್ರ)   
""

ಬೆಂಗಳೂರು: ರಾಜ್ಯದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಜುಲೈ 2 ಮತ್ತು 3ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದ್ದು, 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.

ADVERTISEMENT

ಎಲ್ಲೆಲ್ಲೆ ಎಷ್ಟು ಮಳೆ?: ಉತ್ತರ ಕನ್ನಡ ಜಿಲ್ಲೆಯ ಕದ್ರಾದಲ್ಲಿ ಬುಧವಾರ 9 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕುಂದಾಪುರ 5, ಕೊಲ್ಲೂರು, ಕಾರವಾರ 4, ಕೋಟ 3, ಮೂಡುಬಿದ್ರೆ, ಹೊಸನಗರ 2, ಮಂಗಳೂರು, ಬ್ರಹ್ಮಾವರ, ಕಾರ್ಕಳ, ಬೆಳಗಾವಿ, ಆಲಮಟ್ಟಿ, ಭಾಗಮಂಡಲ, ಮೊಳಕಾಲ್ಮೂರು, ಗೌರಿಬಿದನೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಸಾಧಾರಣ ಮಳೆ
ಮಂಗಳೂರು:
ಕರಾವಳಿ ಜಿಲ್ಲೆಗಳಲ್ಲಿ ಬುಧವಾರ ಸಾಧಾರಣ ಮಳೆ ಸುರಿದಿದೆ.

ಮಂಗಳೂರು ತಾಲ್ಲೂಕಿನಲ್ಲಿ ಗರಿಷ್ಠ 13.6 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮಾತ್ರ ಇತ್ತು.

ಸಾಧಾರಣ ಮಳೆ: ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಭಾಗಮಂಡಲ ವ್ಯಾಪ್ತಿಯಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ.

ಧಾರಾಕಾರ ಮಳೆ: ಧಾರವಾಡದಲ್ಲಿ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಬೈಲಹೊಂಗಲದಲ್ಲಿ ಮಳೆಯಾಗಿದ್ದು, ವಿಜಯಪುರದ ನಿಡಗುಂದಿ ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಕಾರವಾರದಲ್ಲಿಯೂ ಕೆಲ ಸಮಯ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.