ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಮಳೆ: ಗೋಡೆ ಕುಸಿದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 20:52 IST
Last Updated 5 ಜುಲೈ 2021, 20:52 IST
ಕೆಲದಿನಗಳಿಂದ ಮರೆಯಾಗಿದ್ದ ಮುಂಗಾರು ಮಳೆ ಸೋಮವಾರ ಸಂಜೆ ಮತ್ತೆ ಆರಂಭವಾಗಿದ್ದು, ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಯುವತಿಯರು, ಯುವಕರು ಮಳೆಯಲ್ಲಿಯೇ ಸಾಗಿದರು -ಪ್ರಜಾವಾಣಿ ಚಿತ್ರ
ಕೆಲದಿನಗಳಿಂದ ಮರೆಯಾಗಿದ್ದ ಮುಂಗಾರು ಮಳೆ ಸೋಮವಾರ ಸಂಜೆ ಮತ್ತೆ ಆರಂಭವಾಗಿದ್ದು, ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಯುವತಿಯರು, ಯುವಕರು ಮಳೆಯಲ್ಲಿಯೇ ಸಾಗಿದರು -ಪ್ರಜಾವಾಣಿ ಚಿತ್ರ   

ಕಲಬುರ್ಗಿ/ಹುಬ್ಬಳ್ಳಿ: ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ರಾಯಚೂರಿನಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು, ಮಂಡ್ಯ ಜಿಲ್ಲೆಯಲ್ಲಿ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.

ಕಲಬುರ್ಗಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಸೋಮವಾರ ಉತ್ತಮ ಮಳೆ ಸುರಿದಿದ್ದು, ರಾಯಚೂರು ಜಿಲ್ಲೆ ಶಕ್ತಿನಗರದ ಜೇಗರಕಲ್ ಬಳಿ ಜಿಂದಮ್ಮ ಜಮಷಿರಲಿ (40) ಎಂಬ ಮಹಿಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ಸೇಡಂ, ಜೇವರ್ಗಿ, ಚಿಂಚೋಳಿ ಹಾಗೂ ಶಹಾಬಾದ್ ತಾಲ್ಲೂಕಿನ ಹಲವೆಡೆ ಮಳೆ ಸುರಿಯಿತು. ಬೀದರ್‌ ತಾಲ್ಲೂಕು, ಹುಮನಾಬಾದ್, ಚಿಟಗುಪ್ಪ, ಹುಲಸೂರು ತಾಲ್ಲೂಕಿನಲ್ಲಿ ಮಳೆ ಸುರಿದಿದೆ.

ADVERTISEMENT

ಹುಬ್ಬಳ್ಳಿ, ಗದಗ ಸೇರಿದಂತೆ ಹಲವೆಡೆ ಸೋಮವಾರ ಸಂಜೆ ಮಳೆಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಗುಡುಗು ಸಹಿತ ಭಾರಿ ಮಳೆ ಸುರಿಯಿತು.

ಲಕ್ಷ್ಮೇಶ್ವರ, ಗೋವನಾಳ, ಶಿಗ್ಲಿ, ಸೂರಣಗಿ, ಬಾಲೆಹೊಸೂರು, ದೊಡ್ಡೂರು, ಹುಲ್ಲೂರು, ಅಡರಕಟ್ಟಿ, ಪುಟಗಾಂವ್‍ಬಡ್ನಿ ಗ್ರಾಮ ಪಂಚಾಯ್ತಿ ಹಳ್ಳಿಗಳಲ್ಲಿ ಉತ್ತಮ ಮಳೆ ಆಗಿದೆ.

ಗೋಡೆ ಕುಸಿದು ವ್ಯಕ್ತಿ ಸಾವು (ಮಳವಳ್ಳಿ ವರದಿ): ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬಿಜಿಪುರ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಇಟ್ಟಿಗೆ ಫ್ಯಾಕ್ಟರಿಯ ಗೋಡೆ ಕುಸಿದು ಭಾನುವಾರ ರಾತ್ರಿ ವ್ಯಕ್ತಿಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಬಿಜಿಪುರ ಗ್ರಾಮದ ಲಕ್ಷ್ಮಣ (40) ಮೃತ ವ್ಯಕ್ತಿ. ರಾಜೇಂದ್ರ ಪ್ರಸಾದ್, ಸಿದ್ದರಾಜು, ರವಿ ಗಾಯಗೊಂಡವರು.

ಕೂಲಿ ಕೆಲಸದಿಂದ ಮರಳುವಾಗ ಮಳೆ ಬರುತ್ತಿದ್ದುದರಿಂದ, ರಸ್ತೆ ಪಕ್ಕದಲ್ಲಿದ್ದ ಇಟ್ಟಿಗೆ ಫ್ಯಾಕ್ಟರಿ ಬಳಿ ಆಶ್ರಯ ಪಡೆದಿದ್ದಾರೆ. ಶಿಥಿಲವಾಗಿದ್ದ ಗೋಡೆ ಕುಸಿದಿದೆ.

ಗಾಯಾಳುಗಳಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದರಾಜು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.