ADVERTISEMENT

ರಾಜ್ಯದಾದ್ಯಂತ ಧಾರಾಕಾರ ಮಳೆ: ಹಲವೆಡೆ ಶವಸಂಸ್ಕಾರಕ್ಕೂ ತೊಡಕು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 20:25 IST
Last Updated 1 ಸೆಪ್ಟೆಂಬರ್ 2022, 20:25 IST
ಬೆಂಗಳೂರಿನ ‘ರೈನ್‌ ಬೋ ಡ್ರೈವ್’ ಬಡಾವಣೆಯಲ್ಲಿ ಸಂಬಂಧಿಕರು ನೀರಿನಲ್ಲೇ ಶವ ಸಾಗಿಸುತ್ತಿರುವುದು
ಬೆಂಗಳೂರಿನ ‘ರೈನ್‌ ಬೋ ಡ್ರೈವ್’ ಬಡಾವಣೆಯಲ್ಲಿ ಸಂಬಂಧಿಕರು ನೀರಿನಲ್ಲೇ ಶವ ಸಾಗಿಸುತ್ತಿರುವುದು   

ಬೆಂಗಳೂರು: ನಿರಂತರ ಧಾರಾಕಾರ ಮಳೆ, ರಸ್ತೆ ಹಾಗೂ ಬಡಾವಣೆಯು ಜಲಾವೃತವಾಗಿದ್ದ ಕಾರಣ ರಾಜಧಾನಿ ಬೆಂಗಳೂರು ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಚಾಮರಾಜನಗರ ಜಿಲ್ಲೆ ಮಾಂಬಳ್ಳಿಯಲ್ಲಿ ಶವಸಂಸ್ಕಾರಕ್ಕೂ ಸಂಬಂಧಿಕರು ಪರದಾಡಿದರು.

ಬೆಂಗಳೂರಿನಲ್ಲಿ 300 ಮನೆಗಳಿರುವ ‘ರೈನ್‌ ಬೋ ಡ್ರೈವ್’ ಬಡಾವಣೆ ನಡುಗಡ್ಡೆಯಾಗಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೇ ಮೃತಪಟ್ಟಿದ್ದು, ಬಳಿಕ ಹರಿವ ನೀರಿನಲ್ಲೇ ಶವ ಹೊತ್ತೊಯ್ಯಲು ಕುಟುಂಬದವರು ಪರದಾಡಿದರು.

ಶ್ರೀನಿವಾಸ್ ರಾಮರಾವ್ ಎಂಬವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಒಯ್ಯಲು ಕುಟುಂಬ ಸದಸ್ಯರಿಗೆ ಆಗಲಿಲ್ಲ. ನೀರು ಆವರಿಸಿದ್ದರಿಂದ ಆಂಬುಲೆನ್ಸ್‌ ಕೂಡಾ ಬರಲಾಗಲಿಲ್ಲ. ತುರ್ತು ಚಿಕಿತ್ಸೆ ಸಿಗದೆ ಮೃತಪಟ್ಟ ಅವರ ಶವವನ್ನು ಸಂಬಂಧಿಕರು ಹರಿವ ನೀರಿನಲ್ಲೇ ಹೆಗಲ ಮೇಲೆ ಹೊತ್ತೊಯ್ದರು.

ADVERTISEMENT

‘ಹಾಲನಾಯಕನಹಳ್ಳಿ ಕೆರೆ ಪಕ್ಕದಲ್ಲೇ ಇರುವ ಬಡಾವಣೆಗೆ ನೀರು ನುಗ್ಗಿದೆ. ಕೆರೆಯಲ್ಲಿ ಹೂಳು ತುಂಬಿದೆ. ನೀರು ಹರಿದು ಹೋಗುವ ರಾಜಕಾಲುವೆಗಳೂ ಇಲ್ಲ. ಕೆರೆಯ ನೀರೆಲ್ಲವೂ ಬಡಾವಣೆಗೆ ತುಂಬಿಕೊಂಡಿದೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳದಲ್ಲೇ ಶವ ಹೊತ್ತೊಯ್ದರು
ಹರಪನಹಳ್ಳಿ (ವಿಜಯನಗರ) ವರದಿ:
ತಾಲ್ಲೂಕಿನ ಸುಮಾರು 345 ಮನೆಗಳಿರುವ ‘ಶೃಂಗಾರ ತೋಟ’ ಗ್ರಾಮದಲ್ಲಿ ಗುರುವಾರ ಅಂತ್ಯಕ್ರಿಯೆಗೆ ಶವವನ್ನು ತುಂಬಿದ ಹಳ್ಳದಲ್ಲೇ ಗ್ರಾಮಸ್ಥರು ಕಷ್ಟಪಟ್ಟು ಹೊತ್ತುಕೊಂಡು ಹೋದರು.

ಗ್ರಾಮದಲ್ಲಿನ ಒಂದೇ ರುದ್ರಭೂಮಿ ಇದ್ದು, ಸ್ಮಶಾನದ ಹಾದಿಯಲ್ಲಿ ಸೊಂಟದವರೆಗೂ ನೀರು ಆವರಿಸಿತ್ತು. ಗ್ರಾಮದ ಮೂಕವ್ವನವರ ವಿರೂಪಾಕ್ಷಪ್ಪ (56) ಬುಧವಾರ ಮೃತಪಟ್ಟಿದ್ದರು. ಗ್ರಾಮದಿಂದ ಅರ್ಧ ಕಿ.ಮೀ ದೂರದ ಸ್ಮಶಾನಕ್ಕೆ ಸಂಬಂಧಿಕರು ಶವ ಹೊತ್ತೊಯ್ದರು.

ಶವ ಹೊತ್ತು ಸಾಗುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ‘ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ದೂರದಲ್ಲಿದೆ. ರುದ್ರಭೂಮಿಗೆ ಹೋಗಿ ಬರಲು ಉತ್ತಮ ರಸ್ತೆಯಿಲ್ಲ’ ಎಂದು ಗ್ರಾಮಸ್ಥರಾದ ಬಸವರಾಜ, ಅಜೀಜ್ ಸಾಬ್, ನಿಂಗರಾಜ್, ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.

‘ಶೀಘ್ರ ಶೃಂಗಾರ ತೋಟ ಗ್ರಾಮಕ್ಕೆ ತೆರಳಿ, ಸ್ಥಳ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಹಶೀಲ್ದಾರ್‌ ಶಿವಕುಮಾರ ಬಿರಾದಾರ್‌ ತಿಳಿಸಿದರು.

ಕೊಡಗು: ಭಾರಿ ಮಳೆ
ಮಡಿಕೇರಿ:
ನಗರ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಗುರುವಾರ ಸಂಜೆಯ ನಂತರ ಭಾರಿ ಮಳೆ ಸುರಿದಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.

ವಿವಿಧ ಬಡಾವಣೆಗಳು ಜಲಾವೃತಗೊಂಡಿದ್ದವು. ಸೋಮವಾಪೇಟೆಯ ತಾಲ್ಲೂಕು ಹರದೂರು ವ್ಯಾಪ್ತಿಯಲ್ಲಿ 14 ಸೆಂ.ಮೀ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.