ADVERTISEMENT

ಮೂಡಿಗೆರೆ: ತೆಪ್ಪದಲ್ಲಿ ಶವ ಸಾಗಿಸಿದ ಗ್ರಾಮಸ್ಥರು

ಜೀವವನ್ನು ಪಣಕ್ಕಿಟ್ಟು ನದಿ ದಾಟಿದ ಕುಟುಂಬಸ್ಥರು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2018, 18:18 IST
Last Updated 26 ಆಗಸ್ಟ್ 2018, 18:18 IST
ಮೂಡಿಗೆರೆ ತಾಲ್ಲೂಕಿನ ಆಮ್ತಿ ಗ್ರಾಮದಲ್ಲಿ ಭಾನುವಾರ ಲಕ್ಷ್ಮಮ್ಮ ಎಂಬುವವರ ಮೃತದೇಹವನ್ನು ತೆಪ್ಪದಲ್ಲಿ ಸಾಗಿಸಿದ ಗ್ರಾಮಸ್ಥರು
ಮೂಡಿಗೆರೆ ತಾಲ್ಲೂಕಿನ ಆಮ್ತಿ ಗ್ರಾಮದಲ್ಲಿ ಭಾನುವಾರ ಲಕ್ಷ್ಮಮ್ಮ ಎಂಬುವವರ ಮೃತದೇಹವನ್ನು ತೆಪ್ಪದಲ್ಲಿ ಸಾಗಿಸಿದ ಗ್ರಾಮಸ್ಥರು   

ಮೂಡಿಗೆರೆ: ತಾಲ್ಲೂಕಿನ ಕೂವೆ ಸಮೀಪದ ಆಮ್ತಿ ಗ್ರಾಮದಲ್ಲಿ ಭಾನುವಾರ ಮಹಿಳೆಯೊಬ್ಬರ ಶವವನ್ನು ತೆಪ್ಪದ ಮೂಲಕ ಭದ್ರಾ ನದಿಯನ್ನು ದಾಟಿಸಲಾಯಿತು.

ಗ್ರಾಮದ ಲಕ್ಷ್ಮಮ್ಮ(75) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಆಮ್ತಿ ಗ್ರಾಮಕ್ಕೆ ತೆರಳಲು ಸೇತುವೆಯಿಲ್ಲದ ಕಾರಣ ಶವವನ್ನು ಸಾಗಿಸಲು ಅಡ್ಡಿ ಎದುರಾಗಿತ್ತು.

ಭಾನುವಾರ ಮಧ್ಯಾಹ್ನ ಶವವನ್ನು ನದಿಯವರೆಗೂ ವಾಹನದಲ್ಲಿ ತರಲಾಯಿತು. ಬಳಿಕ ತೆಪ್ಪದಲ್ಲಿ ಇರಿಸಿ ನದಿಯನ್ನು ದಾಟಿಸಲು ಪ್ರಯತ್ನಿಸಲಾಯಿತು. ಮೊದಲ ಬಾರಿಗೆ ತೆಪ್ಪವು ಅಲುಗಾಡಿದ್ದರಿಂದ ಪುನಃ ದಡಕ್ಕೆ ತಂದು ತೆಪ್ಪವನ್ನು ಸರಿಪಡಿಸಿಕೊಂಡು, 2ನೇ ಬಾರಿಗೆ ಶವ ಸಾಗಿಸುವ ಯತ್ನ ನಡೆಸಲಾಯಿತು. ನದಿಯಲ್ಲಿ ನೀರು ಹರಿಯುವ ಮಟ್ಟ ಹೆಚ್ಚಳವಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೊಂದು ತೆಪ್ಪವನ್ನು ಸಿದ್ಧವಾಗಿಟ್ಟುಕೊಳ್ಳಲಾಗಿತ್ತು. ನದಿಯ ಮಧ್ಯ ಭಾಗಕ್ಕೆ ತೆರಳುತ್ತಿದ್ದಂತೆ ತೆಪ್ಪವು ಎಳೆದಾಡತೊಡಗಿದ್ದು, ತೆಪ್ಪದಲ್ಲಿದ್ದ ಸಂಬಂಧಿಕರು ಜೀವ ಬಿಗಿ ಹಿಡಿದು ಕೂಗಿಕೊಂಡರು. ಅಂಬಿಗನ ಧೈರ್ಯದಿಂದ ತೆಪ್ಪವು ದಡ ಸೇರಲು ಸಾಧ್ಯವಾಯಿತು. ಶವ ಸಂಸ್ಕಾರಕ್ಕಾಗಿ ಗ್ರಾಮಕ್ಕೆ ಬಂದಿದ್ದ ನೆಂಟರಿಷ್ಟರಲ್ಲಿ ಕೆಲವರು ಧೈರ್ಯಮಾಡಿ ತೆಪ್ಪದಲ್ಲಿ ಗ್ರಾಮಕ್ಕೆ ತೆರಳಿದರೆ, ಕೆಲವರು ದಡದಲ್ಲಿಯೇ ಶವಕ್ಕೆ ಅಂತಿಮ ನಮನ ಸಲ್ಲಿಸಿ ಹಿಂತಿರುಗಿದರು.

ADVERTISEMENT

ಆಮ್ತಿ ಗ್ರಾಮವು ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಗ್ರಾಮವಾಗಿದ್ದು, ಈ ಗ್ರಾಮದಲ್ಲಿ ನಾಲ್ಕು ಗಿರಿಜನ ಕುಟುಂಬಗಳು ನೆಲೆಸಿವೆ. ಗ್ರಾಮಕ್ಕೊಂದು ಸೇತುವೆ ನಿರ್ಮಿಸಿ ಕೊಡುವಂತೆ ಅನೇಕ ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.