ಬೆಂಗಳೂರು: ‘ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ಲಸಿಕೆ ಸಿಗುತ್ತಿಲ್ಲ. ಬಿಬಿಎಂಪಿಗೆ ಲಸಿಕೆ ಕೊಡಿಸಲು ನೆರವಾಗುವ ಬದಲು ಸಂಸದ ತೇಜಸ್ವಿ ಸೂರ್ಯ ₹ 900 ಪಡೆದು ಲಸಿಕೆ ನೀಡುವ ಖಾಸಗಿ ಆಸ್ಪತ್ರೆ ಕಾರ್ಯಕ್ಕೆ ಪ್ರಚಾರ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಎಷ್ಟು ಪರ್ಸೆಂಟ್ ಕಮಿಷನ್ ಸಿಗುತ್ತದೆ’ ಎಂದು ಟ್ವಿಟರ್‌ನಲ್ಲಿ ಕೆಲವು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕೆ ಕೊಡಿಸಿದ್ದಕ್ಕೆ ಸಂಸದರಿಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ.
ಖಾಸಗಿ ನರ್ಸಿಂಗ್ ಹೋಂಗಳಿಗೆ ಹಾಗೂ ಸಣ್ಣ ಮಟ್ಟದ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ ಲಸಿಕೆ ಪಡೆದವರನ್ನು ಮಾತನಾಡಿರುವ ವಿಡಿಯೋವನ್ನು ತೇಜಸ್ವಿ ಸೂರ್ಯ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದನ್ನು ಟ್ಯಾಗ್ ಮಾಡಿರುವ ವೈಟ್‌ಫೀಲ್ಡ್ ಸಂಘಟನೆ, ‘ನೀವು ಖಾಸಗಿಯವರತ್ತ ಗಮನ ಕೇಂದ್ರೀಕರಿಸುತ್ತಿರುವುದು ಏಕೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪೂರೈಸಲು ಕರ್ನಾಟಕವು ಲಸಿಕೆ ಪಡೆಯುವತ್ತ ಹಾಗೂ ವ್ಯಾಪಕವಾಗಿ ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳುವತ್ತ ನಿಮ್ಮ ಗಮನ ಕೇಂದ್ರೀಕೃತ ಆಗಬೇಕಲ್ಲವೇ’ ಎಂದು ಪ್ರಶ್ನಿಸಿದೆ.
‘ಮಹದೇವಪುರ ಆಸುಪಾಸಿನಲ್ಲಿ ಪಿಎಚ್‌ಸಿಗಳು ನಿತ್ಯ 10– 20 ಲಸಿಕೆ ಪಡೆಯುವುದಕ್ಕೂ ಪರದಾಡುತ್ತಿವೆ’ ಎಂದೂ ಸಂಘಟನೆ ಟ್ವೀಟ್‌ನಲ್ಲಿ ತಿಳಿಸಿದೆ.
ತೇಜಸ್ವಿ ಸೂರ್ಯ ಅವರ ಖಾತೆ ಮೂಲಕ ಹಂಚಿಕೊಂಡ ಇನ್ನೊಂದು ವಿಡಿಯೊವನ್ನು ಟ್ಯಾಗ್ ಮಾಡಿರುವ ಅನಂತ ಮಹಾಜನ್, ‘ಮಹಾಶಯರೇ, ತಾವು ಉದ್ಯಮಿಯಾಗುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. 1,200 ಡೋಸ್‌ಗಳಿ ತಲಾ ₹ 900ರಂತೆ ದಿನಕ್ಕೆ ₹ 10.80 ಲಕ್ಷ. ಮುಂದಿನ ವಾರ 15 ಸಾವಿರ ಜನರು. ಅಂದರೆ ₹ 1.35 ಕೋಟಿ. ಒಟ್ಟು ₹ 1.45 ಕೋಟಿ. ಈ ದಲ್ಲಾಳಿ ಕೆಲಸಕ್ಕೆ ನಿಮಗೆ ಸಿಗುವ ಭಕ್ಷೀಸು ಎಷ್ಟು. ದಯವಿಟ್ಟು ಅದನ್ನೂ ಪ್ರಕಟ ಮಾಡುತ್ತೀರಾ’ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ಇದೇ ವಿಡಿಯೊವನ್ನು ಟ್ಯಾಗ್ ಮಾಡಿರುವ ರೋಹನ್ ದಿನೇಶ್, ‘ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಗೆ ₹850 ದರ ವಿಧಿಸುತ್ತಿರುವಾಗ ನೀವು ₹ 900 ದರ ಪಡೆಯುತ್ತಿರುವುದು ಏಕೆ. ಒಬ್ಬ ಜನನಾಯಕರಾಗಿ ನೀವು ಲಸಿಕೆಗೆ ಹಣ ಪಡೆಯಬಾರದಿತ್ತು. ಅಥವಾ ಇನ್ನಷ್ಟು ಕಡಿಮೆದರದಲ್ಲಿ ಒದಗಿಸಬಹುದಿತ್ತು’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಸಾಮಾನ್ಯ ಕನ್ನಡ’ ಎಂಬ ಟ್ವಿಟರ್ ಖಾತೆಯು, ‘ಜಯನಗರದ ಬಿಬಿಎಂಪಿ ಉಚಿತ ಕೇಂದ್ರದ ಹೊರಗೆ ತೇಜಸ್ವಿ ಸೂರ್ಯ ಅವರ ಚಿತ್ರವಿರುವ, ಹಣ ಪಾವತಿಸಿ ಲಸಿಕೆ ಪಡೆಯುವ ಜಾಹೀರಾತುಗಳು ಗೋಚರಿಸುತ್ತವೆ. ಆದರೆ ಜಯನಗರದ ಬಿಬಿಎಂಪಿ ಕೇಂದ್ರದಲ್ಲಿ ಯಾವುದೇ ಉಚಿತ ಲಸಿಕೆಗಳು ಲಭ್ಯವಿಲ್ಲ. ಇದು ವಿಪರ್ಯಾಸ. ಇಂತ ಸಂಸದರು ಬೇಕಾ ನಮಗೆ’ ಎಂದು ಪ್ರಶ್ನೆ ಮಾಡಿದೆ.
‘₹ 150ರ ಲಸಿಕೆಗೆ ₹ 900 ಏಕೆ‘ ಎಂದು ಚಂದ್ರು ಹೆತ್ತೂರು ಅವರು ಪ್ರಶ್ನೆ ಮಾಡಿದ್ದಾರೆ.
ಮನ್‌ಕರಣ ಸಿಂಗ್ ಅವರು, ‘ಒಂದು ಚುಚ್ಚುಮದ್ದನ್ನು ₹ 900ಕ್ಕೆ ಮಾರಾಟ ಮಾಡಿದ್ದಕ್ಕೆ ನಿಮಗೆ ಖಾಸಗಿ ಆಸ್ಪತ್ರೆಗಳಿಂದ ಎಷ್ಟು ಕಮಿಷನ್ ಸಿಗುತ್ತದೆ’ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ಜನವಾದಿ ಮಹಿಳಾ ಸಂಘಟನೆ ಖಂಡನೆ
ಕುಮಾರಸ್ವಾಮಿ ಬಡಾವಣೆಯ ವಾಸವಿ ಆಸ್ಪತ್ರೆಯವರು 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ₹ 900ಕ್ಕೆ ಮಾರಾಟ ಮಾಡುವುದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಕ್ಷೇತ್ರದ ಶಾಸಕ ಎಲ್.ರವಿಸುಬ್ರಹ್ಮಣ್ಯ ಪ್ರಚಾರ ನೀಡುವುದಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡನೆ ವ್ಯಕ್ತಪಡಿಸಿದೆ.
‘18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ನೀಡಲು ‘ಲಸಿಕೆ ಉತ್ಸವ’ ಹಮ್ಮಿಕೊಳ್ಳುತ್ತೇವೆ ಎಂದು ಸರ್ಕಾರದ ಹಣ ವೆಚ್ಚ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗೇ ಸಿಗದ ಪರಿಸ್ಥಿತಿ ಇದೆ. ಹಾಗಿರುವಾಗ ಖಾಸಗಿ ಆಸ್ಪತ್ರೆಗಳು ಮಾರಾಟ ಮಾಡಲು ಲಸಿಕೆ ಎಲ್ಲಿಂದ ಸಿಗುತ್ತಿದೆ’ ಎಂದು ಸಂಘಟನೆ ಪ್ರಶ್ನೆ ಮಾಡಿದೆ.
‘ಲಾಕ್‌ಡೌನ್‌ನಿಂದ ಜನ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಲಸಿಕೆ ಜೀವರಕ್ಷಕ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು ತಮ್ಮ ಭಾವಚಿತ್ರ ಹಾಕಿಕೊಂಡು ವಾಸವಿ ಆಸ್ಪತ್ರೆಯ ಮೂಲಕ ಲಸಿಕೆ ಮಾರಾಟದಲ್ಲಿ ತೊಡಗಿರುವುದು ಜನದ್ರೋಹದ ಕೆಲಸ. ಸರ್ಕಾರ ಖಾಸಗಿ ಆಸ್ಪತ್ರೆಗಳ ಜೊತೆ ಶಾಮೀಲಾಗಿರುವುದಕ್ಕೆ ಇದು ಉದಾಹರಣೆ’ ಎಂದು ಸಂಘಟನೆ ಟೀಕಸಿದೆ.
ಕೋವಿಡ್ ಮೂರನೇ ಅಲೆ ಅಪ್ಪಳಿಸುವ ಮುನ್ನ ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡಿಸಬೇಕು ಎಂದು ಸಂಘಟನೆಯ ಸಂಚಾಲಕರಾದ ಬಸಮ್ಮ ಹಾಗೂ ಸೆಲ್ವಿ ಒತ್ತಾಯಿಸಿದ್ದಾರೆ.
ಗಮನ ಸೆಳೆದ ಟ್ವೀಟ್‌ಗಳಿವು..
ಇಂದು ವಾಸವಿ ಮೂಲಕ ಜಿ.ಎಂ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ಅವಕಾಶ ಸಿಕ್ಕಿದ್ದಕ್ಕೆ ತುಸು ನೆಮ್ಮದಿಯಾಯಿತು. ಚುಚ್ಚುಮದ್ದು ಪಡೆಯಲು ಅಲ್ಲಿಗೆ ತಲುಪಿದಾಗ, ‘ನಿಮಗೆ ಇಂದು ಲಸಿಕೆ ನೀಡಲು ಆಗದು. ಇಂದು ಲಸಿಕೆ ಲಭ್ಯ ಇಲ್ಲದ ಕಾರಣ ಮುಂದಿನವಾರ ಕರೆ ಬರಲಿದೆ’ ಎಂದರು. ನನ್ನ ಬೇಸರ ಮುಂದುವರಿದಿದೆ.
ವೇಣು ರಾವ್.
ಔಷಧ ಕಂಪನಿಗಳು ತಯಾರಿಸುವ ಲಸಿಕೆಗಳನ್ನು ಖಾಸಗಿ ನರ್ಸಿಂಗ್ ಹೋಮ್‌ಗಳು ಮಾರಾಟ ಮಾಡುತ್ತಿವೆ. ಮಧ್ಯಮ ವರ್ಗದ ಜನರು ತಮ್ಮ ಕಿಸೆಯಿಂದ ಹಣ ಖರ್ಚು ಮಾಡುತ್ತಾರೆ. ಆದರೂ ಪ್ರಚಾರಕ್ಕಾಗಿ ಸಂಸದರ ಹೆಸರು ಏಕೆ? ಸಮಸ್ಯೆ ಇರುವುದೇ ಇಲ್ಲಿ. ಖಾಸಗಿ ನರ್ಸಿಂಗ್ ಹೋಂಗಳು ಲಸಿಕೆ ಅಭಿಯಾನ ನಡೆಸುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ...
ಮಧುಸೂದನ್
ಲಸಿಕೆ ಹಾಕಿಸಿಕೊಳ್ಳಲು ಕೋವಿನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬೇಕು. ಹಾಗಿದ್ದರೂ ಸಂಸದರು ಲಸಿಕೆಗಳನ್ನು ಕಾಯ್ದಿರಿಸಲು ಹೇಗೆಸಾಧ್ಯ? ಇಂತಹ ಸರಳ ಪ್ರಶ್ನೆಗೆ ಉತ್ತರಿಸುವಿರಾ. ಅಷ್ಟೇ ಅಲ್ಲ ನಿಮ್ಮದೇ ಕ್ಷೇತ್ರದ ವ್ಯಾಪ್ತಿಯ ವಿಜಯನಗರ, ಬಸವೇಶ್ವರನಗರಗಳಲ್ಲಿ ನೀವು ಕಾಣಸಿಗುವುದೇ ಇಲ್ಲ.
ಸೌರಭ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.