ADVERTISEMENT

ಎಂಎಸ್‌ಪಿ ಅಕ್ಕಿ ಸಾಗಣೆಯಲ್ಲಿ ಅಕ್ರಮ?

ತನಿಖೆ ಆರಂಭಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

ವಿ.ಎಸ್.ಸುಬ್ರಹ್ಮಣ್ಯ
Published 11 ಜುಲೈ 2021, 20:30 IST
Last Updated 11 ಜುಲೈ 2021, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಲ್ಲಿ (ಎಂಎಸ್‌ಪಿ) ಖರೀದಿಸಿದ್ದ ಭತ್ತದಿಂದ ಪಡೆದ 14,344 ಟನ್‌ಗಳಷ್ಟು ಅಕ್ಕಿಯನ್ನು ಗುಣಮಟ್ಟ ಪರಿಶೀಲನೆ, ಕಂಪ್ಯೂಟರೀಕೃತ ತೂಕದ ದಾಖಲೆ ಮತ್ತು ಕಣ್ಗಾವಲು ಇಲ್ಲದೆ ಮಂಡ್ಯ ಜಿಲ್ಲೆಯ ಗಿರಣಿಗಳಿಂದ ಸಗಟು ಪಡಿತರ ವಿತರಣಾ ಗೋದಾಮುಗಳಿಗೆ ಸಾಗಿಸಲಾಗಿದೆ.

ಬೃಹತ್‌ ಪ್ರಮಾಣದ ಅಕ್ಕಿ ಕಾಳಸಂತೆ ಪಾಲಾಗಿರುವ ಶಂಕೆಯ ಮೇಲೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಈಗ ತನಿಖೆ ಆರಂಭಿಸಿದೆ.

ಎಂಎಸ್‌ಪಿ ಅಡಿ ಖರೀದಿಸಿದ್ದ ಬೃಹತ್‌ ಪ್ರಮಾಣದ ಭತ್ತವನ್ನು ಮಂಡ್ಯ ಜಿಲ್ಲೆಯ ಅಕ್ಕಿ ಗಿರಣಿಗಳಲ್ಲಿ ‘ಹಲ್ಲಿಂಗ್‌’ ಮಾಡಲಾಗಿದೆ. ಅಲ್ಲಿ ದಾಸ್ತಾನು ಇದ್ದ 14,344.21 ಟನ್‌ ಅಕ್ಕಿಯನ್ನು ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜೂನ್‌ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಿಸುವುದಕ್ಕಾಗಿ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಬಿಬಿಎಂಪಿ ಸೇರಿದಂತೆ ಬೆಂಗಳೂರು ನಗರವೊಂದಕ್ಕೆ 7,233 ಟನ್‌ ಹಂಚಿಕೆಯಾಗಿತ್ತು.

ADVERTISEMENT

ನಾಲ್ಕು ಜಿಲ್ಲೆಗಳಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ 22 ಸಗಟು ಗೋದಾಮುಗಳು, 16 ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಗೋದಾಮುಗಳು, ಕೃಷಿ ಪತ್ತಿನ ಸಹಕಾರ ಸಂಘಗಳ ಎರಡು ಮತ್ತು ಆಹಾರ ಇಲಾಖೆಯ ಎರಡು ಗೋದಾಮುಗಳಿಗೆ ಮಂಡ್ಯದ ಅಕ್ಕಿ ಗಿರಣಿಗಳಿಂದ ಸಾಗಿಸಲಾಗಿದೆ. ಅಲ್ಲಿಂದ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆಯಾಗಿದೆ. ಮಂಡ್ಯದ ಅಕ್ಕಿ ಗಿರಣಿಗಳಿಂದ ಸುಮಾರು 1,500 ಟ್ರಕ್‌ಗಳಷ್ಟು ಅಕ್ಕಿಯನ್ನು ಸಾಗಿಸಲಾಗಿದೆ.

ಸಾಗಿಸುವ ಮುನ್ನ, ಭಾರತೀಯ ಆಹಾರ ನಿಗಮದ ಗುಣಮಟ್ಟ ತಪಾಸಣಾ ತಂಡದ ಅಧಿಕಾರಿಗಳ ಮೂಲಕ ಅಕ್ಕಿಯ ಗುಣಮಟ್ಟ ಪರೀಕ್ಷಿಸಿ, ಪ್ರಮಾಣ ಪತ್ರ ಪಡೆಯಬೇಕು. ಅಕ್ಕಿಯನ್ನು ಗಿರಣಿಗಳಲ್ಲಿ ಟ್ರಕ್‌ಗಳಿಗೆ ಲೋಡ್‌ ಮಾಡಿದ ತಕ್ಷಣ ಮತ್ತು ಸಗಟು ಗೋದಾಮುಗಳಲ್ಲಿ ಇಳಿಸುವ ಮುನ್ನ ಕಂಪ್ಯೂಟರೀಕೃತ ತೂಕದ (ಕಂಪ್ಯೂಟರೈಸ್ಡ್‌ ವೆಹಿಮೆಂಟ್‌ ಬಿಲ್‌) ಪಡೆಯುಬೇಕು ಎಂಬ ನಿರ್ದೇಶನಗಳನ್ನು ಆಹಾರ ಇಲಾಖೆಯಿಂದ ನೀಡಲಾಗಿತ್ತು. ಆದರೆ, ಬಹುತೇಕ ಸಗಟು ಗೋದಾಮುಗಳಿಗೆ ಅಕ್ಕಿ ಸಾಗಿಸುವಾಗ ಈ ಯಾವುದೇ ನಿರ್ದೇಶನಗಳನ್ನೂ ಪಾಲಿಸಿಲ್ಲ ಎಂಬ ಮಾಹಿತಿ ಆಧರಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ಆಯುಕ್ತ ಡಾ.ಕೆ. ರಾಮೇಶ್ವರಪ್ಪ ನೇತೃತ್ವದ ರಾಜ್ಯ ಮಟ್ಟದ ತನಿಖಾ ದಳ ತನಿಖೆ ಆರಂಭಿಸಿದೆ.

ಮಂಡ್ಯದ ಅಕ್ಕಿ ಗಿರಣಿಗಳಿಂದ ಸಗಟು ಗೋದಾಮುಗಳಿಗೆ ಅಕ್ಕಿಯನ್ನು ಸಾಗಿಸಿರುವುದಕ್ಕೆ ಸಂಬಂಧಿಸಿದ ಸಾಗಣೆ ಆದೇಶ, ಟ್ರಕ್‌ ಶೀಟ್‌, ಗುಣಮಟ್ಟ ತಪಾಸಣಾ ವರದಿ ಮತ್ತು ಟ್ರಕ್‌ಗಳಿಗೆ ತುಂಬಿಸಿದ ತಕ್ಷಣ ಹಾಗೂ ಇಳಿಸುವ ಮುನ್ನ ಪಡೆದಿರುವ ಕಂಪ್ಯೂಟರೀಕೃತ ತೂಕದ ರಸೀದಿಗಳನ್ನು ಸಲ್ಲಿಸುವಂತೆ ತನಿಖಾ ದಳವು ಎಲ್ಲ ಸಗಟು ಗೋದಾಮುಗಳ ವ್ಯವಸ್ಥಾಪಕರಿಗೆ ಜುಲೈ 7ರಂದು ಸೂಚನೆ ನೀಡಿದೆ.

ತನಿಖೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಮೇಶ್ವರಪ್ಪ, ‘ಭತ್ತದ ಖರೀದಿ, ಹಲ್ಲಿಂಗ್‌ಗೆ ಸಾಗಿಸಿರುವುದು ಮತ್ತು ಅಕ್ಕಿ ಸಾಗಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯುಳ್ಳ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ದಾಖಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಿ, ಪರಿಶೀಲಿಸಿದ ಬಳಿಕ ಅಕ್ಕಿ ಸಾಗಣೆಯಲ್ಲಿ ಅಕ್ರಮ ನಡೆದಿದೆಯೇ ಎಂಬುದು ಖಚಿತವಾಗಲಿದೆ’ ಎಂದರು.

ಮಂಡ್ಯದಿಂದ ಅಕ್ಕಿ ಸಾಗಿಸುವ ಮೊದಲು ಗುಣಮಟ್ಟ ಪರೀಕ್ಷೆ ನಡೆಸಿರಲಿಲ್ಲ ಹಾಗೂ ಕಂಪ್ಯೂಟರೀಕೃತ ತೂಕದ ರಸೀದಿಗಳನ್ನು ಪಡೆದಿಲ್ಲ ಎಂಬುದನ್ನು ಆಹಾರ ನಿಗಮದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಗೋದಾಮುಗಳ ವ್ಯವಸ್ಥಾಪಕರು ಒಪ್ಪಿಕೊಳ್ಳುತ್ತಾರೆ. ‘ಗೋದಾಮುಗಳಿಗೆ ತಂದ ಬಳಿಕವೇ ಗುಣಮಟ್ಟ ಪರೀಕ್ಷಿಸಲಾಗಿದೆ. ಕಂಪ್ಯೂಟರೀಕೃತ ವೇ ಬ್ರಿಡ್ಜ್‌ಗಳು ಅಕ್ಕಿ ಗಿರಣಿಗಳು ಮತ್ತು ಗೋದಾಮುಗಳ ಸಮೀಪದಲ್ಲಿ ಇಲ್ಲ. ಹೀಗಾಗಿ ಟ್ರಕ್‌ ಶೀಟ್‌ ಆಧಾರದಲ್ಲೇ ಅಕ್ಕಿಯನ್ನು ಗೋದಾಮುಗಳಿಗೆ ತುಂಬಿಸಲಾಗಿತ್ತು’ ಎಂದು ಹಲವು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ.

ಕಾಳಸಂತೆ ಪಾಲು: ‘ಕೆಲವು ಗೋದಾಮುಗಳ ಅಧಿಕಾರಿಗಳು ತಮಗೆ ಹಂಚಿಕೆಯಾಗಿದ್ದ ಪೂರ್ಣ ಪ್ರಮಾಣದ ಅಕ್ಕಿಯನ್ನು ಗಿರಣಿಗಳಿಂದ ಎತ್ತುವಳಿ ಮಾಡಿಲ್ಲ ಎಂಬ ಆರೋಪವಿದೆ. ಇನ್ನು ಕೆಲವು ಗೋದಾಮುಗಳಿಗೆ ಸಾಗಿಸಬೇಕಿದ್ದ ಅಕ್ಕಿಯನ್ನು ಕಾಳಸಂತೆಗೆ ಕೊಂಡೊಯ್ದಿರುವ ಅನುಮಾನವೂ ಇದೆ. ಈ ಎಲ್ಲದರ ಕುರಿತೂ ತನಿಖೆಗೆ ಸಿದ್ಧತೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

‘ಕಟ್ಟಿಂಗ್‌’ ದಂಧೆಯ ನಂಟು?

ಮೇ ಮತ್ತು ಜೂನ್‌ ತಿಂಗಳಲ್ಲಿ ಲಾಕ್‌ಡೌನ್‌ ಕಾರಣದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿಯಲ್ಲೂ ಆಹಾರ ಧಾನ್ಯ ಹಂಚಿಕೆ ಮಾಡಿತ್ತು. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲೂ ಪಡಿತರ ವಿತರಣೆ ಇತ್ತು.

ಕಾಳಸಂತೆಗೆ ಪಡಿತರ ಅಕ್ಕಿ ಸಾಗಿಸುವ ವ್ಯಕ್ತಿಗಳು, ಸಗಟು ಗೋದಾಮುಗಳ ವ್ಯವಸ್ಥಾಪಕರು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸೇರಿ ‘ಕಟ್ಟಿಂಗ್‌’ ದಂಧೆ ಹೆಸರಿನಲ್ಲಿ ಪಡಿತರ ಚೀಟಿದಾರರಿಗೆ ತಲುಪಬೇಕಿದ್ದ ಅಕ್ಕಿಯನ್ನೇ ಗೋದಾಮುಗಳಲ್ಲಿ ಉಳಿಸಿಕೊಂಡು, ಮಂಡ್ಯದಿಂದ ಪೂರೈಕೆಯಾಗಬೇಕಿದ್ದ ಅಕ್ಕಿಯ ಹೆಸರಿನಲ್ಲಿ ಜಮಾ ತೋರಿಸಿರುವ ಶಂಕೆ ಇದೆ. ಕೋಲಾರ ಮತ್ತು
ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಕ್ಕಿ ಗಿರಣಿಗಳಲ್ಲಿ ಪಡಿತರ ಅಕ್ಕಿ ಪತ್ತೆಯಾದ ಪ್ರಕರಣಗಳ ಜಾಡು ಹಿಡಿದಿರುವ ರಾಜ್ಯಮಟ್ಟದ ತನಿಖಾ ದಳ, ಈ ಬಗ್ಗೆಯೂ ತನಿಖೆಯನ್ನು ವಿಸ್ತರಿಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.