
ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಐತಿಹಾಸಿಕ, ವಚನ ಸಾಹಿತ್ಯಕ್ಕೆ ಬುನಾದಿ ಆಗಿರುವ 10ನೇ ಶತಮಾನದ ಮುದನೂರು ದಾಸಿಮಯ್ಯ ಅವರ ಕ್ಷೇತ್ರದಲ್ಲೂ ಉತ್ಖನನ ನಡೆಸಿ, ಇಲ್ಲಿನ ಐತಿಹಾಸಿಕ ಪರಂಪರೆಯನ್ನು ತಿಳಿಸುವ ಪ್ರಯತ್ನ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ.
ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ದೂರದಲ್ಲಿರುವ ಮುದನೂರು ಗ್ರಾಮ ಪಂಚಾಯಿತಿ ಕೇಂದ್ರ. ದೇವರದಾಸಿಮಯ್ಯ ನಡೆದಾಡಿದ ಭೂಮಿಯಾಗಿದೆ. ಕಾಯಕದ ಜತೆಗೆ ಬಸವಾದಿ ಶರಣರಿಗಿಂತ ಪೂರ್ವದಲ್ಲೇ ವಚನಸಾಹಿತ್ಯ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ.
‘ಭಕ್ತರು ವಿವಿಧೆಡೆಯಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿನ ಐತಿಹಾಸಿಕ ಸಂಪತ್ತು, ಶಿಲಾ ಶಾಸನಗಳು ಹಾಗೂ ದೇವಸ್ಥಾನಗಳು ಭೂಗರ್ಭದಲ್ಲಿ ಮುಚ್ಚಿ ಹೋಗಿದೆ. ಉತ್ಖನನ ಮಾಡುವ ಮೂಲಕ ಅವುಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ಮಾಡಬೇಕು’ ಎನ್ನುತ್ತಾರೆ ಗ್ರಾಮಸ್ಥರು.
2011ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುದನೂರು ಗ್ರಾಮಕ್ಕೆ ಬಂದು ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಅಂದಾಜು ₹6 ಕೋಟಿ ವೆಚ್ಚದಲ್ಲಿ ಮೂಲಸೌಲಭ್ಯ ಕಲ್ಪಿಸಲು ಒತ್ತು ನೀಡಿದ್ದರು. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ತಂಗಲು ಅಂದಾಜು ₹4 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ, ರಾಮತೀರ್ಥ, ಪಾಂಡುತೀರ್ಥ, ಹಾಲು ತೀರ್ಥ, ಸಕ್ಕರೆ ತೀರ್ಥವನ್ನು ಅಭಿವೃದ್ಧಿ ಪಡಿಸಲಾಗಿದೆ.
‘ಗ್ರಾಮದಲ್ಲಿರುವ ದಾಸಿಮಯ್ಯ, ರಾಮನಾಥ ದೇವರ ದೇವಸ್ಥಾನದ ಮೇಲ್ಭಾಗದ ಸುತ್ತಲೂ 200 ಮನೆಗಳಿವೆ. 161 ಮನೆಗಳ ಸ್ಥಳಾಂತರಕ್ಕೆ ಹಿಂದೆ ಗ್ರಾಮದ ಅಣಿ ಮೇಲಿರುವ ಸರ್ಕಾರಿ ಸ್ಥಳ ಸರ್ವೆ ನಂ 239/2ರಲ್ಲಿ 10 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಆದರೆ, ಅವುಗಳನ್ನು ನಿವೇಶನಗಳಾಗಿ ಪರಿವರ್ತಿಸಿ ಮನೆಗಳ ಕಟ್ಟಡ ಕೆಲಸ ಆರಂಭಿಸಬೇಕಿದೆ’ ಎನ್ನುತ್ತಾರೆ ಗ್ರಾಮದ ದೇವರ ದಾಸಿಮಯ್ಯ ವಿಚಾರ ವೇದಿಕೆ ಅಧ್ಯಕ್ಷ ಶಾಂತರಡ್ಡಿ ಚೌದ್ರಿ.
‘ಈಗ ಉತ್ಖನನ ನಡೆಸಿದರೆ ಶಿಲಾಶಾಸನಗಳು ಹಾಗೂ ಶಿಲ್ಪಗಳು ಮತ್ತು ಅಂದಿನ ಅನೇಕ ಐತಿಹಾಸಿಕ ಮಹತ್ವದ ವಿಷಗಳು ಹೊರಬರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಉತ್ಕನನಕ್ಕೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಗ್ರಾಮದ ಬಸನಗೌಡ ಪಾಟೀಲ, ಕೃಷ್ಣಾರಡ್ಡಿ ಮುದನೂರು, ಚನ್ನಪ್ಪಗೌಡ ಬೇಕಿನಾಳ, ವಿಶ್ವನಾಥರಡ್ಡಿ ಪಡೆಕನೂರ, ಮಲ್ಲನಗೌಡ ನಗನೂರ, ಮೈಹಿಬೂಬ ಹಂದ್ರಾಳ ಒತ್ತಾಯಿಸುತ್ತಾರೆ.
ದೇಗುಲದ ಮುಂದಿರುವ ರಾಮತೀರ್ಥ ಪುಷ್ಕರಣಿ ಅಪಾರ ಜಲಸಂಪತ್ತನ್ನು ಹೊಂದಿದೆ. ಎಂತಹ ಬೇಸಿಗೆಯಲ್ಲೂ ಪುಷ್ಕರಣಿಯ ಜಲ ಬತ್ತಿದ ಉದಾಹರಣೆ ಇಲ್ಲ-ಮಡಿವಾಳಪ್ಪಗೌಡ, ಬಳವಾಟ ಗ್ರಾಮದ ಹಿರಿಯರು
ಮುದನೂರು ಗ್ರಾಮದಲ್ಲಿ ಮನೆಗಳ ಸ್ಥಳಾಂತರಿಸುವ ಬಗ್ಗೆ ಗ್ರಾಮ ಸಭೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಕಳುಹಿಸಿಕೊಡಲಾಗಿದೆ. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು-ಎಂ. ಬಸವರಾಜ, ತಹಶೀಲ್ದಾರ್ ಹುಣಸಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.