ADVERTISEMENT

ರಾಜರಾಜೇಶ್ವರಿನಗರ ಉಪಚುನಾವಣೆ: ಮುನಿರತ್ನ ವರ್ಸಸ್‌ ಡಿಕೆಶಿ – ‘ಸಂತೋಷ’ ಯಾರಿಗೆ?

ತ್ರಿಕೋನ ಸ್ಪರ್ಧೆ l ಶಿಷ್ಯನಿಗೆ ಈಗ ‘ಗುರು’ಗಳ ಮುನಿಸಿನ ಬಿಸಿ l ವಿರೋಧಿಗಳಾದ ದೋಸ್ತಿಗಳು

ಮಂಜುನಾಥ್ ಹೆಬ್ಬಾರ್‌
Published 30 ಅಕ್ಟೋಬರ್ 2020, 1:42 IST
Last Updated 30 ಅಕ್ಟೋಬರ್ 2020, 1:42 IST
ಮುನಿರತ್ನ
ಮುನಿರತ್ನ   
""

ಬೆಂಗಳೂರು: ತಮ್ಮ ಗರಡಿಯಲ್ಲಿ ಚುನಾವಣಾ ಪಟ್ಟುಗಳನ್ನು ಕಲಿತಿರುವ ಶಿಷ್ಯನನ್ನು ಗೆಲ್ಲಿಸಲು ಕಳೆದ ಸಲ ಹಗಲಿರುಳು ಬೆವರು ಹರಿಸಿದ್ದ ‘ಗುರು’ಗಳಿಬ್ಬರು ಈ ಸಲ ಅದೇ ಶಿಷ್ಯನಿಗೆ ಸೋಲಿನ ರುಚಿ ತೋರಿಸಬೇಕು ಎಂದು ಪಣ ತೊಟ್ಟಿದ್ದಾರೆ. ಹ್ಯಾಟ್ರಿಕ್‌ ಗೆಲುವು ಸುಲಭ ಎಂದೇ ಭಾವಿಸಿದ್ದ ಶಿಷ್ಯನಿಗೆ ಈಗ ‘ಗುರು’ಗಳ ಮುನಿಸಿನ ಬಿಸಿ ತಟ್ಟಲಾರಂಭಿಸಿದೆ.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸತತ ಎರಡು ಸಲ ಕಾಂಗ್ರೆಸ್‌ನಿಂದ ಜಯಭೇರಿ ಬಾರಿಸಿರುವ ಮುನಿರತ್ನ ಈಗ ಬಿಜೆಪಿ ಅಭ್ಯರ್ಥಿ. ಸಹಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕುಸುಮಾ ಎಚ್. ಅವರನ್ನು ಕಾಂಗ್ರೆಸ್‌ ನಾಯಕರುಅಚ್ಚರಿಯ ನಡೆಯಲ್ಲಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದ್ದಾರೆ. ಅವರು ಹನುಮಂತರಾಯಪ್ಪ ಅವರ ಪುತ್ರಿ. 2008ರಲ್ಲಿ ಹನುಮಂತರಾಯಪ್ಪ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದರು. ಒಕ್ಕಲಿಗರ ಮತಗಣಿತವನ್ನು ನಂಬಿಕೊಂಡು ಜೆಡಿಎಸ್‌, ವಿ.ಕೃಷ್ಣಮೂರ್ತಿ ಅವರನ್ನು ಕಣಕ್ಕೆ ಇಳಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರತಿಷ್ಠೆ ಪಣಕ್ಕೆ ಇಟ್ಟಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ ಮುನಿರತ್ನ ಅವರನ್ಜು ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯ ಯಡಿಯೂರಪ್ಪ ಅವರಿಗೆ ಇದೆ. ಆದರೆ, ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪ್ರಚಾರದ ಕಣಕ್ಕೆ ಇಳಿಸಿರುವ ಯಡಿಯೂರಪ್ಪ ಅವರು, ಪ್ರಚಾರದ ಕೊನೆಯ ದಿನ ಸಮೀಪಿಸುತ್ತಾ ಬಂದರೂ ಅಖಾಡಕ್ಕೆ ಇಳಿದಿಲ್ಲ!

ADVERTISEMENT

ದಶಕಗಳಿಂದ ತಮ್ಮೊಂದಿಗೆ ಇದ್ದು ಚುನಾವಣಾ ರಾಜಕಾರಣ ಕಲಿತಿರುವ ಮುನಿರತ್ನ ಅವರಿಗೆ ಸೋಲಿನ ರುಚಿ ತೋರಿಸಲೇಬೇಕು ಎಂದು ಡಿ.ಕೆ.ಶಿವಕುಮಾರ್‌ ಹಾಗೂ ಸಹೋದರ ಡಿ.ಕೆ.ಸುರೇಶ್‌ ಹಟಕ್ಕೆ ಬಿದ್ದಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಭರಪೂರ ಅನುದಾನ ಪಡೆದೂ ’ಕೈ‘ ಕೊಟ್ಟು ಹೋಗಿರುವ ಶಿಷ್ಯನಿಗೆ ಪಾಠ ಕಲಿಸಬೇಕು ಎಂಬುದು ಸಿದ್ದರಾಮಯ್ಯ ಹಂಬಲ.

ಇನ್ನೊಂದೆಡೆ, ದಶಕದಿಂದ ಮುನಿರತ್ನ ’ದೌರ್ಜನ್ಯ‘ದ ವಿರುದ್ಧ ನಿರಂತರ ಧ್ವನಿ ಎತ್ತಿದ್ದ ಕಮಲ ‍ಪಾಳಯದ ಕಾರ್ಯಕರ್ತರಿಗೆ ಈಗ ಅಡಕತ್ತರಿಯಲ್ಲಿ ಸಿಲುಕಿದ ಅನುಭವ. ಈ ಹಿಂದೆ ಯಾರ ವಿರುದ್ಧ ಹೋರಾಟ ಮಾಡಿ ಕೇಸುಗಳನ್ನು ಹಾಕಿಸಿಕೊಂಡಿದ್ದೇವೆಯೋ ಈಗ ಅವರ ಪರವಾಗಿಯೇ ಮತ ಯಾಚಿಸಬೇಕಲ್ಲ ಎಂಬ ನೋವು ಅವರದ್ದು. ಹಿರಿಯ ನಾಯಕರ ಮಧ್ಯಪ್ರವೇಶದಿಂದ ಅಸಮಾಧಾನ ಮೇಲ್ನೋಟಕ್ಕೆ ತಣ್ಣಗಾದಂತೆ ಕಂಡರೂ ಅಸಹನೆ ಬೂದಿ ಮುಚ್ಚಿದ ಕೆಂಡದಂತೆ ಇದೆ.

ಹಳೆಯ ಮುನಿಸುಗಳನ್ನೆಲ್ಲ ಮರೆತು ಕಮಲ ಪಾಳಯದ ಕಾರ್ಯಕರ್ತರ ಪಡೆ ಪೂರ್ಣ ಮನಸ್ಸಿನಿಂದ ಕೆಲಸ ಮಾಡಿದರೆ ಬಿಜೆಪಿ ಅಭ್ಯರ್ಥಿ ಗೆಲುವಿನ ದಡ ಮುಟ್ಟಬಹುದು ಎಂಬ ಲೆಕ್ಕಾಚಾರವೂ ಬಿಜೆಪಿಯಲ್ಲಿ ನಡೆದಿದೆ. ಮುನಿರತ್ನ ಅವರ ಜತೆಗೆ ಕಾಂಗ್ರೆಸ್‌ನಿಂದ ವಲಸೆ ಬಂದಿರುವ ಮುಖಂಡರ ಹಾಗೂ ಕಾರ್ಯಕರ್ತರ ದೊಡ್ಡ ಪಡೆ ಸಹ ಪಕ್ಷಕ್ಕೆ ಪ್ಲಸ್‌ ಪಾಯಿಂಟ್‌ ಎಂಬುದು ನಾಯಕರ ಅಂಬೋಣ.

ಕ್ಷೇತ್ರದಲ್ಲಿ ಮುನಿರತ್ನ ದೌರ್ಜನ್ಯ ವಿಪರೀತವಾಗಿದೆ ಎಂದು ಪಾಲಿಕೆ ಸಭೆಗಳಲ್ಲಿ ರಂಪ ಮಾಡಿದ್ದ ಮಂಜುಳಾ ನಾರಾಯಣ ಸ್ವಾಮಿ, ಮಮತಾ ವಾಸುದೇವ ಹಾಗೂ ಆಶಾ ಸುರೇಶ್ ಅವರೀಗ ಬಿಜೆಪಿ ಅಭ್ಯರ್ಥಿ ಜತೆಗೆ ದೋಸ್ತಿ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ ತುಳಸಿ ಮುನಿರಾಜು ಗೌಡ ಅವರು, ಮುನಿರತ್ನ ಅವರ ಆಯ್ಕೆ ಪ್ರಶ್ನಿಸಿ ಕೋರ್ಟ್‌ನಲ್ಲಿ ಸುದೀರ್ಘ ಹೋರಾಟ ನಡೆಸಿದ್ದರು. ಅವರೀಗ ನಾಯಕರ ನಿರ್ದೇಶನದ ಮೇರೆಗೆ ಪಕ್ಷದ ಪರವಾಗಿ ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಅಭ್ಯರ್ಥಿ ಮುನಿರತ್ನ ಪರವಾಗಿ ಅವರು ಮತ ಕೇಳುತ್ತಿಲ್ಲ.

ಕಾಂಗ್ರೆಸ್, ಬಿಜೆಪಿಯಲ್ಲಿ ದೊಡ್ಡ ಮಟ್ಟದ ಪಕ್ಷಾಂತರವೇ ನಡೆದಿದೆ. ಈ ಪಕ್ಷಾಂತರದ ಮೇಲಾಟದಲ್ಲಿ ಹೆಚ್ಚು ಸೊರಗಿರುವುದು ಜೆಡಿಎಸ್‌.

ಪಕ್ಷದ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ನಾಮಬಲವನ್ನೇ ನೆಚ್ಚಿಕೊಂಡಿದ್ದಾರೆ. ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಒಕ್ಕಲಿಗ ಮತದಾರರು ಮೋಸ ಮಾಡಲಾರರು ಎಂಬುದು ಅವರ ಅಮಿತ ವಿಶ್ವಾಸ.

ಬಿಜೆಪಿ ಅಭ್ಯರ್ಥಿ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ₹900 ಕೋಟಿ ಅನುದಾನ ತಂದಿದ್ದೇನೆ ಎಂಬುದು ಅವರ ನುಡಿ. ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ನಿತ್ಯ ನಡೆಸಿದ ದಾಸೋಹ ಸಹ ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂಬುದು ಅವರ ನಂಬಿಕೆ.

‘ಕ್ಷೇತ್ರಕ್ಕೆ ಬಂದ ಅನುದಾನದಲ್ಲಿ ಕಳ್ಳ ಬಿಲ್‌ ಸೃಷ್ಟಿಸಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ‘ಮಹಿಳೆಯರಿಗೆ ಗೌರವ ಕೊಡದ ಹಾಗೂ ’ಹೆತ್ತ ತಾಯಿ‘ಗೆ ದ್ರೋಹ ಎಸಗಿದ ವ್ಯಕ್ತಿಗೆ ಮತ ಹಾಕುತ್ತೀರಾ?’ ಎಂದು ಭಾವನಾತ್ಮಕ ಮಾತುಗಳನ್ನು ಆಡುತ್ತಿದ್ದಾರೆ.

ಮುನಿರತ್ನ ಕೋಟೆ ಕೆಡವಲು ತಂತ್ರ ರೂಪಿಸಿರುವ ಕಾಂಗ್ರೆಸ್‌, ಪಿರಮಿಡ್‌ ಮಾದರಿಯಲ್ಲಿ ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ. ರಾಜ್ಯದ ವಿವಿಧ ಕಡೆಯ ಮುಖಂಡರು ಕೆಲವು ದಿನಗಳಿಂದ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಪ್ರಚಾರದಲ್ಲಿ ತೊಡಗಿದ್ದಾರೆ. ಇವರೆಲ್ಲ ಕೆಲಸ ಮಾಡಿಸುವವರು. ಜತೆಗೆ, ಪಕ್ಷಕ್ಕೆ ಕ್ಷೇತ್ರದಲ್ಲೀಗ ಭದ್ರ ನೆಲೆಗಟ್ಟು ಇಲ್ಲ. ಕೆಲಸ ಮಾಡುವ ಕಾರ್ಯಕರ್ತರ ಕೊರತೆ ಇದೆ ಎಂಬುದನ್ನು ಪಕ್ಷದ ನಾಯಕರೇ ಒಪ್ಪುತ್ತಾರೆ. ಚುನಾವಣಾ ರಾಜಕಾರಣದಲ್ಲಿ ಪರಿಣಿತರಾಗಿರುವ ಡಿ.ಕೆ.ಸಹೋದರರ ’ಮ್ಯಾಜಿಕ್‌‘ ಈ ಸಲವೂ ಕೆಲಸ ಮಾಡಲಿದೆ ಎಂಬುದು ಅವರ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.