ADVERTISEMENT

ಮುಸ್ಲಿಂರ ಓಲೈಕೆಗಾಗಿ ಕಾಂಗ್ರೆಸ್ ಮಾಡಿದ್ದ ಮೀಸಲಾತಿ ರದ್ದು ಮಾಡಿದ್ದೇವೆ: ಜೋಶಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 11:04 IST
Last Updated 27 ಮಾರ್ಚ್ 2023, 11:04 IST
ಸಚಿವ ಪ್ರಲ್ಹಾದ ಜೋಶಿ
ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಮುಸ್ಲಿಮರ ಓಲೈಕೆಗಾಗಿ, ಕಾಂಗ್ರೆಸ್ ಪಕ್ಷ ಅಸಂವಿಧಾನಿಕವಾಗಿ ಧರ್ಮದ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಿತ್ತು. ಬಿಜೆಪಿ ಅದನ್ನು ರದ್ದು ಪಡಿಸಿ ಅಗತ್ಯವಿರುವ ಸಮಾಜಕ್ಕೆ ಹಂಚಿಕೆ ಮಾಡಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ನಿರ್ಣಾಯಕ ಪಕ್ಷವಾಗಿ ಅವೈಜ್ಞಾನಿಕವಾಗಿ ಹಂಚಿಕೆಯಾಗಿದ್ದ ಮೀಸಲಾತಿಯನ್ನು ಸರಿಪಡಿಸಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎನ್ನುವುದು ಸಂವಿಧಾನದ ನಿರ್ಮಾತೃರ ಆಶಯವಾಗಿತ್ತು. ಹಾಗೂ ಸುಪ್ರೀಂ ಕೋರ್ಟ್‌ ಸಹ ಇದನ್ನೇ ಸ್ಪಷ್ಟಪಡಿಸಿತ್ತು’ ಎಂದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು’ ಎನ್ನುವ ಕಾಂಗ್ರೆಸ್ ಮುಖಂಡರ ಹೇಳಿಕೆಗೆ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೆ ಹಂಚಿಕೆ ಮಾಡಿರುವ ಮೀಸಲಾತಿ ರದ್ದುಪಡಿಸುವುದು? ಇಂತಹ ಹೇಳಿಕೆಯಿಂದಂತೂ ಅವರು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಲು ಅವರ ಸಹಮತವಿರಲಿಲ್ಲ ಎನ್ನುವುದು ಹೇಳಿಕೆಯಿಂದ ಸ್ಪಷ್ಟವಾಗಿದೆ. ಪಂಚಮಸಾಲಿ ಅವರ ಹೋರಾಟದಲ್ಲಿ ಕೆಲವು ಶಾಸಕರು ಪಾಲ್ಗೊಳ್ಳುತ್ತಿದ್ದರು. ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಹೀಗೆ ಮಾಡುತ್ತಿದ್ದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮೀಸಲಾತಿ ವಿಷಯ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ವಾಮೀಜಿ ಅವರಿಗೆ ಬೆದರಿಕೆ ಹಾಕಿದ್ದಾರೆ’ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಜೋಶಿ, ‘ಬೆದರಿಕೆ ಹಾಕುವುದು, ಹಲ್ಲೆ ಮಾಡುವುದು ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಸಂಸ್ಕೃತಿ. ಅವರ ಆರೋಪ ಬಾಲಿಶವಾಗಿದ್ದು, ಸ್ವಾಮೀಜಿಗಳಿಗೆ ಮಾಡುತ್ತಿರುವ ಅವಮಾನವಾಗಿದೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವಿನ್ನೂ ಅಂತಿಮವಾಗಿಲ್ಲ. ಮಾಜಿ ಮುಖ್ಯಮಂತ್ರಿ, 11 ಬಜೆಟ್‌ ಮಂಡಿಸಿದ ಅವರಿಗೆ ನಿಖರವಾದ ಕ್ಷೇತ್ರವಿಲ್ಲ ಎನ್ನುವುದು ಪರಿಸ್ಥಿತಿಯ ವ್ಯಂಗ್ಯ. ಅವರು ಕೋಲಾರದಲ್ಲಿ ಸ್ಪರ್ಧಿಸುತ್ತಾರೆ ಎಂದು ಪಕ್ಷವೇ ಘೋಷಣೆ ಮಾಡಿದೆ. ಆದರೆ, ಆ ಕ್ಷೇತ್ರದ ಮುಖಂಡ ಕೆ.ಎಚ್‌. ಮುನಿಯಪ್ಪ ಅವರ ಹೊಡೆತಕ್ಕೆ ಕಂಗಾಲಾಗಿದ್ದಾರೆ. ಯಾಕೆಂದರೆ, ಸಿದ್ದರಾಮಯ್ಯ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ಅವರಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಸೋಲುವ ಭಯದಿಂದ ಕೋಲಾರ, ಬದಾಮಿ, ವರುಣ ಎಂದೆಲ್ಲ ಹೇಳುತ್ತಿದ್ದಾರೆ. ದಲಿತರ ಹೆಸರು ಹೇಳುತ್ತ, ಅವರಿಗೆ ಮೋಸ ಮಾಡುವುದು ಕಾಂಗ್ರೆಸ್‌ ಪರಂಪರೆಯಾಗಿದೆ’ ಎಂದು ಕುಟುಕಿದರು.

‘ಎಲ್ಲ ರಾಜ್ಯಕ್ಕೂ ಅದರದ್ದೇ ಆದ ಮಾದರಿಯಲ್ಲಿ ಚುನಾವಣೆ ನಡೆಯುತ್ತದೆ. ಒಂದು ರಾಜ್ಯದ ಮಾದರಿ ಮತ್ತೊಂದು ರಾಜ್ಯಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಮ್ಮ ರಾಜ್ಯದಲ್ಲಿ ಯಾವ ಮಾದರಿಯಲ್ಲಿ ಚುನಾವಣೆ ಎದುರಿಸಬೇಕು ಎನ್ನುವ ಕುರಿತು ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.