ಬೆಂಗಳೂರು: ಕಾಮಗಾರಿಗಳ ಗುತ್ತಿಗೆಯಲ್ಲಿ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ತಕರಾರು ಎತ್ತಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ತಿದ್ದುಪಡಿ ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿದ್ದಾರೆ.
‘ಸಾಂವಿಧಾನಿಕ ತೊಡಕು ಮತ್ತು ನಿರ್ಬಂಧಗಳಿರುವುದರಿಂದ ಪ್ರಸ್ತಾಪಿತ ಮಸೂದೆಗೆ ಅಂಕಿತ ಹಾಕುವ ಬದಲು, ರಾಷ್ಟ್ರಪತಿಯ ಪರಿಶೀಲನೆಗೆ ಬಿಡುವುದು ಸೂಕ್ತವೆಂದು ಭಾವಿಸಿದ್ದೇನೆ’ ಎಂದೂ ರಾಜ್ಯಪಾಲರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ 1 ಮತ್ತು 2ಎಗೆ ಸೇರಿದ ಗುತ್ತಿಗೆದಾರರಿಗೆ ₹1 ಕೋಟಿ ವೆಚ್ಚದವರೆಗಿನ ಕಾಮಗಾರಿಗಳಿಗೆ ಮಾತ್ರ ಮೀಸಲಾತಿ ಕಲ್ಪಿಸಲು ಹಿಂದೆ ಅವಕಾಶ ಇತ್ತು. ಈ ಮಿತಿಯನ್ನು ₹2 ಕೋಟಿಗೆ ಹೆಚ್ಚಿಸುವ ಜೊತೆಗೆ ಮುಸ್ಲಿಂ ಸಮುದಾಯದ ಗುತ್ತಿಗೆದಾರರಿಗೆ ಶೇ 4ರಷ್ಟು ಮೀಸಲಾತಿ ಅನ್ವಯವಾಗುವಂತೆ ಮಾಡಲು ಕೆಟಿಟಿಪಿ ಕಾಯ್ದೆಯ ಸೆಕ್ಷನ್ 6ಕ್ಕೆ ತಿದ್ದುಪಡಿ ತರುವ ಮಸೂದೆಗೆ ವಿಧಾನಮಂಡಲ ಅಂಗೀಕಾರ ನೀಡಿತ್ತು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ₹1 ಕೋಟಿವರೆಗಿನ ಸರಕು ಮತ್ತು ಸೇವೆಗಳ ಸಂಗ್ರಹಣೆಯ ಗುತ್ತಿಗೆಯಲ್ಲೂ ಮೇಲಿನ ಪ್ರಮಾಣದಲ್ಲೇ ವಿವಿಧ ಪ್ರವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವ ಇದೇ ತಿದ್ದುಪಡಿ ಮಸೂದೆಯಲ್ಲಿದೆ.
ವಿಧಾನ ಮಂಡಲದ ಎರಡೂ ಸದನಗಳು ಅಂಗೀಕರಿಸಿದ್ದ ಈ ಮಸೂದೆಯನ್ನು ಏಪ್ರಿಲ್ 1ರಂದು ರಾಜ್ಯಪಾಲರ ಅಂಕಿತಕ್ಕೆ ಸರ್ಕಾರ ಕಳುಹಿಸಿತ್ತು. ಆರು ಪುಟಗಳ ಪತ್ರದೊಂದಿಗೆ ಪೂರ್ಣ ಕಡತವನ್ನು ಮಂಗಳವಾರ (ಏಪ್ರಿಲ್ 15) ಹಿಂದಿರುಗಿಸಿರುವ ಅವರು, ‘ಧರ್ಮಾಧಾರಿತ ಮೀಸಲಾತಿಗೆ ದೇಶದ ಸಂವಿಧಾನದಲ್ಲಿ ಅವಕಾಶ ಇಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಪತ್ರದಲ್ಲಿ ಏನಿದೆ?: ‘ರಾಜ್ಯ ಸರ್ಕಾರವು 1994 ಸೆ. 17ರ ಅಧಿಸೂಚನೆಯ ಪ್ರಕಾರ ಮುಸ್ಲಿಂ ಸಮುದಾಯವನ್ನು 2ಬಿ ಪ್ರವರ್ಗದಡಿ ಹಿಂದುಳಿದ ವರ್ಗವೆಂದು ಗುರುತಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆ. ಪ್ರವರ್ಗ 1ರಲ್ಲಿ 95 ಜಾತಿಗಳು, 2ಎಯಲ್ಲಿ 102, 2ಬಿಯಲ್ಲಿ 1, 3ಎಯಲ್ಲಿ 3 ಮತ್ತು 3ಬಿಯಲ್ಲಿ 6 ಜಾತಿಗಳಿವೆ. ಈ ಹಿಂದಿನ ರಾಜ್ಯ ಸರ್ಕಾರವು 2023ರ ಮಾರ್ಚ್ 27ರ ಆದೇಶದಲ್ಲಿ ಪ್ರವರ್ಗ 2ಬಿಗೆ ನೀಡಿದ್ದ ಶೇ 4 ಮೀಸಲಾತಿ ವಾಪಸ್ ಪಡೆದಿದೆ. ಹಾಗಿದ್ದರೂ, ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಲು ಈ ಮಸೂದೆ ತರಲಾಗಿದೆ’ ಎಂದು ಪತ್ರದಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.
‘ರಾಜ್ಯ ಸರ್ಕಾರದ ಆದೇಶದ ವಿರುದ್ಧ 2023ರ ಏಪ್ರಿಲ್ 24ರಂದು ಸಲ್ಲಿಕೆಯಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಆ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಪ್ರಕರಣವು ವಿಚಾರಣಾ ಹಂತದಲ್ಲಿದೆ. ಸೌರಭ್ ಚೌದರಿ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ಧರ್ಮ ಆಧಾರಿತ ಮೀಸಲಾತಿಯನ್ನು ನಿಷೇಧಿಸಿದೆ. ಪಶ್ಚಿಮ ಬಂಗಾಳ ಸರ್ಕಾರ ಇಸ್ಲಾಂ ಧರ್ಮಕ್ಕೆ ಸೇರಿದವರೇ ಹೆಚ್ಚಿದ್ದ 77 ಸಮುದಾಯಗಳನ್ನು ಇತರ ಹಿಂದುಳಿದ ವರ್ಗ (ಒಬಿಸಿ) ಎಂದು ವರ್ಗೀಕರಿಸಿದ್ದನ್ನು ಕಲ್ಕತ್ತ ಹೈಕೋರ್ಟ್ ರದ್ದುಪಡಿಸಿದೆ. ಈ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯಲ್ಲಿ ‘ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಾಧ್ಯ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ’ ಎಂದೂ ಪತ್ರದಲ್ಲಿ ಅವರು ವಿವರಿಸಿದ್ದಾರೆ.
- ರಾಜ್ಯಪಾಲರ ವಾದವೇನು?
* ಮುಸ್ಲಿಮರು ಮಾತ್ರ ಇರುವ ಪ್ರವರ್ಗ 2ಬಿಗೆ ಶೇ 4ರಷ್ಟು ಮೀಸಲಾತಿ ನೀಡಿರುವುದನ್ನು ‘ಧರ್ಮ ಆಧರಿಸಿ ಸಮುದಾಯಕ್ಕೆ ನೀಡಿದ ಮೀಸಲಾತಿ’ ಎಂದು ಅರ್ಥೈಸಬಹುದಾಗಿದೆ.
* ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನವು ಅವಕಾಶ ನೀಡುವುದಿಲ್ಲ. ಅಲ್ಲದೆ ಇದು ಸಂವಿಧಾನದ ವಿಧಿ 14 (ಸಮಾನತೆ) 15 (ತಾರತಮ್ಯರಹಿತ) ಮತ್ತು 16 (ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಅವಕಾಶ) ಎಂಬ ತತ್ವಗಳ ಉಲ್ಲಂಘನೆಯಾಗುತ್ತದೆ.
* ಪ್ರವರ್ಗ 2ಬಿಗೆ ನೀಡಿರುವ ಶೇ 4ರಷ್ಟು ಮೀಸಲಾತಿ ವಿಚಾರವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿ ಇರುವುದರಿಂದ ಪ್ರಸ್ತಾಪಿತ ಕೆಟಿಟಿಪಿ ಕಾಯ್ದೆ ತಿದ್ದುಪಡಿ ಮೂಲಕ ಮೀಸಲಾತಿ ನೀಡಲು ಹೊರಟಿರುವುದು ಕಾನೂನು ತೊಡಕುಗಳಿಗೆ ಕಾರಣ ಆಗಬಹುದು.
- ಕೆಪಿಎಸ್‌ಸಿ ಕಾಯ್ದೆ ತಿದ್ದುಪಡಿ ಮಸೂದೆ: ಸ್ಪಷ್ಟೀಕರಣ ಕೇಳಿ ವಾಪಸ್
‘ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ–1959ಕ್ಕೂ (1959ರ ಕರ್ನಾಟಕ ಕಾಯ್ದೆ 20) ತಿದ್ದುಪಡಿ ತರಲು ಉದ್ದೇಶಿಸಿದ್ದ ಮಸೂದೆಯನ್ನು ಸ್ಪಷ್ಟೀಕರಣ ಕೇಳಿ ರಾಜ್ಯಪಾಲರು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ‘ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ ಸರ್ಕಾರವು ಆಯೋಗದ ಜೊತೆ ಸಮಾಲೋಚನೆ ನಡೆಸಬೇಕು’ ಎಂಬ ಕಾಯ್ದೆಯಲ್ಲಿನ ಸೆಕ್ಷನ್ 18 ಅನ್ನು ಕೈಬಿಟ್ಟು ‘ನಿಯಮಗಳನ್ನು ರೂಪಿಸುವಾಗ ಆಯೋಗದೊಂದಿಗೆ ಸಮಾಲೋಚನೆ ನಡೆಸುವ ಅಗತ್ಯ ಇಲ್ಲ’ ಎಂದು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿತ್ತು.
‘ಸಂವಿಧಾನದ ವಿಧಿ 315ರಡಿ ಆಯೋಗವು ರಚನೆಯಾಗಿದೆ. ಸಂವಿಧಾನದ 320ನೇ ವಿಧಿಯ ಅನ್ವಯ ನಾಗರಿಕ ಹುದ್ದೆಗಳಿಗೆ ನೇಮಕ ವಿಧಾನವೂ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರದ ಜೊತೆ ಆಯೋಗ ಸಮಾಲೋಚನೆ ನಡೆಸಬೇಕಿದೆ. ಸೆಕ್ಷನ್ 18 ಅನ್ನು ಕೈಬಿಟ್ಟರೆ ಆಯೋಗದ ಜೊತೆ ಸಮಾಲೋಚನೆ ನಡೆಸದೆ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಅಧಿಕಾರ ಸಿಗಲಿದೆ. ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ 320ನೇ ವಿಧಿಗೆ ವ್ಯತಿರಿಕ್ತವಾಗಿದ್ದು ಆಯೋಗದ ಸ್ವಾಯತ್ತೆಯನ್ನು ಮೊಟಕುಗೊಳಿಸಲಿದೆ ಎನ್ನುವುದು ನನ್ನ ಆತಂಕ. ಹೀಗಾಗಿ ಈ ಬಗ್ಗೆ ಸ್ಪಷ್ಟೀಕರಣ ಮತ್ತು ಕಾನೂನು ಅಭಿಪ್ರಾಯದ ಜೊತೆಗೆ ಕಡತವನ್ನು ಮತ್ತೆ ಸಲ್ಲಿಸಿ’ ಎಂದು ರಾಜ್ಯಪಾಲರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.