ADVERTISEMENT

ಬ್ರ್ಯಾಂಡ್‌ ವಿಸ್ತರಣೆಗಾಗಿ ಪ್ಯಾನ್‌ ಇಂಡಿಯಾ ನಟಿ ಆಯ್ಕೆ: ಸಚಿವ ಶರಣಪ್ರಕಾಶ

​ಪ್ರಜಾವಾಣಿ ವಾರ್ತೆ
Published 23 ಮೇ 2025, 12:58 IST
Last Updated 23 ಮೇ 2025, 12:58 IST
<div class="paragraphs"><p>ಡಾ. ಶರಣಪ್ರಕಾಶ ಪಾಟೀಲ</p></div>

ಡಾ. ಶರಣಪ್ರಕಾಶ ಪಾಟೀಲ

   

ಗದಗ: ‘ಇಡೀ ದೇಶದಲ್ಲಿ ಮೈಸೂರ್‌ ಸ್ಯಾಂಡಲ್‌ ಬ್ರ್ಯಾಂಡ್‌ ಪ್ರಚುರಪಡಿಸುವ ಉದ್ದೇಶದಿಂದ ಪ್ಯಾನ್‌ ಇಂಡಿಯಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

‘ಸ್ಯಾಂಡಲ್‌ವುಡ್‌ನ ನಟ-ನಟಿಯರೇ ಈ ಉತ್ಪನ್ನದ ರಾಯಭಾರಿ ಆಗಬೇಕು ಎಂಬ ಇಚ್ಛೆ ರಾಜ್ಯದ ಜನರಲ್ಲಿದೆ. ಆದರೆ, ರಾಯಭಾರಿಯಾಗಿ ಯಾರನ್ನೇ ಆಯ್ಕೆ ಮಾಡಿದರೂ ಎಲ್ಲರನ್ನೂ ತೃಪ್ತಿಪಡಿಸುವುದು ಕಷ್ಟ ಸಾಧ್ಯ. ಜನಪ್ರಿಯ ಸಿನಿಮಾ ನಟಿಯನ್ನು ರಾಯಭಾರಿಯನ್ನಾಗಿ ಮಾಡಿಕೊಂಡರೆ ಬ್ರ್ಯಾಂಡ್‌ನ ಜನಪ್ರಿಯತೆಯನ್ನೂ ಹೆಚ್ಚಿಸಬಹುದು ಎಂಬ ಅಧಿಕಾರಿಗಳ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರಬಹುದು’ ಎಂದರು.

ADVERTISEMENT

‘ಡಾ. ಜಿ.ಪರಮೇಶ್ವರ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ಇ.ಡಿ. ದಾಳಿಯ ಹಿಂದೆ ಕಾಂಗ್ರೆಸ್‌ನ ಒಂದು ಗುಂಪು ಕೆಲಸ ಮಾಡಿದೆ’ ಎಂಬ ಕೇಂದ್ರ ಸಚಿವ ಪ್ರಹ್ಹಾದ ಜೋಶಿ ಮಾತಿಗೆ ತಿರುಗೇಟು ನೀಡಿದ ಅವರು, ‘ಯಾರಾದರೂ ದೂರು ನೀಡಿದರೆ ಅದು ಜೋಶಿ ಅವರಿಗೆ ಹೋಗಿ ತಲುಪತ್ತದೆಯೇ? ಇ.ಡಿ. ದಾಳಿ ಜೋಶಿ ಮಾರ್ಗದರ್ಶನದಲ್ಲಿ ನಡೆಯುತ್ತದೆಯೇ?’ ಎಂದು ಹರಿಹಾಯ್ದರು.

‘ಜನಔಷಧಿ ಕೇಂದ್ರಗಳನ್ನು ತೆರವು ಮಾಡುವುದರ ಹಿಂದೆ ರಾಜಕೀಯ ದುರುದ್ದೇಶವಿಲ್ಲ. ಸರ್ಕಾರವೇ ಉಚಿತವಾಗಿ ಔಷಧಿಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯೊಳಗೆ ಮಾರಾಟ ಮಳಿಗೆ ಇರಬೇಕಾದ ಅವಶ್ಯಕತೆ ಇಲ್ಲ’ ಎಂದರು.

ಐಟಿಐ ಕಾಲೇಜುಗಳ ಮೇಲ್ದರ್ಜೆಗೇರಿಸಲು ₹1,500 ಕೋಟಿ:

‘ರಾಜ್ಯದಲ್ಲಿರುವ 170 ಸರ್ಕಾರಿ ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಕೌಶಲಾಭಿವೃದ್ಧಿ ಇಲಾಖೆ ಕೇಳಿದ್ದ ₹1.500 ಕೋಟಿ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಇದರಿಂದ ಐಟಿಐ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೇರಿಸಲು ಅನುಕೂಲವಾಗಲಿದೆ. ಈ ಸಂಬಂಧ ಮುಂದಿನ ಸಚಿವ ಸಂಪುಟದಲ್ಲಿ ವಿಷಯ ಚರ್ಚೆಗೆ ಬರಲಿದೆ’ ಎಂದರು.

ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಖಾಲಿ ಹುದ್ದೆ ಭರ್ತಿ ಸಂಬಂಧ ಎದುರಾಗಿದ್ದ ಕಾನೂನು ತೊಡಕು ಬಗೆಹರಿದಿದೆ. ಶೀಘ್ರದಲ್ಲೇ 1500 ಜನರನ್ನು ಕೌನ್ಸಿಂಗ್ ಮೂಲಕ ಸ್ಥಳ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

‘ಜಿಟಿಟಿಸಿ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶೇ 100ರಷ್ಟು ಉದ್ಯೋಗ ಸಿಗುತ್ತಿದೆ. ಹಾಗಾಗಿ, ರಾಜ್ಯದಲ್ಲಿರುವ 33 ಜಿಟಿಟಿಸಿ ಸಂಸ್ಥೆಗಳ ಜತೆಗೆ ಈ ವರ್ಷ ಹೊಸದಾಗಿ ಎಂಟು ಸಂಸ್ಥೆಗಳನ್ನು ತೆರೆಯಲಾಗುವುದು. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು 3 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗುವುದು. ಅಲ್ಲಿನ ಟ್ರೇಡ್‌ಗಳ ಸಂಖ್ಯೆ ಕೂಡ ವೃದ್ಧಿಸಲಾಗುವುದು’ ಎಂದರು.

‘ಯುವನಿಧಿ ಯೋಜನೆ ಅಡಿ ರಾಜ್ಯದಲ್ಲಿ 2.78 ಲಕ್ಷ ಮಂದಿ ನೋಂದಣಿಯಾಗಿದ್ದಾರೆ. ಈ ಪೈಕಿ 1.90 ಲಕ್ಷ ಮಂದಿಗೆ ಹಣ ಕೊಡುತ್ತಿದ್ದೇವೆ. ಯುವನಿಧಿ ಯೋಜನೆ ಅಡಿ ನೋಂದಣಿಯಾದ ಅಭ್ಯರ್ಥಿಗಳಿಗೆ ಹೆಚ್ಚುವರಿ ಕೌಶಲ ತರಬೇತಿ ನೀಡಿ ಅವರಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ನಿರಂತರವಾಗಿ ನಡೆದಿದೆ. ಈ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಉದ್ಯೋಗ ಮೇಳ ಕೂಡ ನಡೆಸಲಾಗಿದೆ’ ಎಂದರು.

‘ಕೈಗಾರಿಕೆ, ಕಂಪನಿಗಳನ್ನು ಸಂಪರ್ಕಿಸಿ ಅವರಿಗೆ ಎಂತಹ ಕೌಶಲ ಇರುವ ಅಭ್ಯರ್ಥಿಗಳು ಬೇಕು ಎಂದು ತಿಳಿದುಕೊಂಡು ಅದರಂತೆ ತರಬೇತಿ ನೀಡಲು ಯೋಜಿಸಲಾಗಿದೆ. ಜತೆಗೆ ಕಲಬುರಗಿ, ಕೊಪ್ಪಳ, ಮೈಸೂರಿನಲ್ಲಿ ಮಲ್ಟಿಸ್ಕಿಲ್‌ ಡೆವಲಪ್‌ಮೆಂಟ್ ಸ್ಕಿಲ್‌ ಸೆಂಟರ್‌ಗಳನ್ನು ತೆರೆಯಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.