ADVERTISEMENT

ಬಿಜೆಪಿಯಿಂದ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಅವಮಾನ: ಬಿ.ಆರ್‌.ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 10:35 IST
Last Updated 28 ಆಗಸ್ಟ್ 2025, 10:35 IST
   

ಕಲಬುರಗಿ: ‘ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರಾ ಉತ್ಸವ ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿರೂಪ. ಇಂತಹ ಸಂದರ್ಭಗಳಲ್ಲಿ ಜಾತಿ-ಧರ್ಮದ ಭೇದಭಾವದ ಬೀಜ ಬಿತ್ತುವ ಬಿಜೆಪಿ ನಿಲುವು ಖಂಡನೀಯ’ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಟೀಕಿಸಿದ್ದಾರೆ.

‘ದಸರಾ ಉತ್ಸವದ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಸರ್ಕಾರ ಆಹ್ವಾನಿಸಿರುವುದು ಹಾಗೂ ಅವರು ಅದನ್ನು ಒಪ್ಪಿಕೊಂಡಿರುವುದು ಅತ್ಯಂತ ಸ್ವಾಗತಾರ್ಹ. ಬಾನು ಮುಷ್ತಾಕ್‌ ಅವರು ಜಾಗತಿಕಮಟ್ಟದಲ್ಲಿ ಬುಕರ್ ಪ್ರಶಸ್ತಿ ಪಡೆದು ಕರ್ನಾಟಕದ ಗೌರವವನ್ನು ಜಗತ್ತಿನ ವೇದಿಕೆಯಲ್ಲಿ ಎತ್ತಿಹಿಡಿದಿದ್ದಾರೆ. ಆದರೆ, ಯಾವತ್ತೂ ಶಾಂತಿ-ಸೌಹಾರ್ದ ಬಯಸದ ಬಿಜೆಪಿ, ಅನಾವಶ್ಯಕ ಧಾರ್ಮಿಕ ವಿಷಯಗಳನ್ನು ಎಳೆದು ತಂದು ಒಂದು ಸಮುದಾಯಕ್ಕೆ ಅವಮಾನ ಮಾಡುತ್ತಿರುವುದು ತೀವ್ರ ಖಂಡನೀಯ. ಪ್ರತಿಯೊಬ್ಬರಿಗೂ ತಮ್ಮ ನಂಬಿಕೆ-ಆಚಾರಗಳನ್ನು ಪಾಲಿಸುವ ಹಕ್ಕು ಸಂವಿಧಾನದಲ್ಲೇ ಇದೆ. ಈ ಹಿಂದೆ ನಾಡಿನ ಖ್ಯಾತ ಕವಿ ಕೆ.ಎಸ್‌.ನಿಸಾರ್‌ಅಹ್ಮದ್ ಅವರು ದಸರಾ ಉತ್ಸವ ಉದ್ಘಾಟಿಸಿದ್ದು ಇವರಿಗೆ ನೆನಪಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

‘ಬಿಜೆಪಿಯ ಇಂಥ ಹೇಳಿಕೆಗಳಿಂದ ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಅವಮಾನವಾಗುತ್ತದೆ. ನಾಡಿನಲ್ಲಿ ಮಳೆಯಿಂದ ಸಂಕಷ್ಟ ಅನುಭವಿಸುತ್ತಿರುವ ರೈತರು ಹಾಗೂ ಬಡ ಮಕ್ಕಳ ಶಿಕ್ಷಣ, ದಲಿತರ, ಕಾರ್ಮಿಕರು ಹಾಗೂ ಹಿಂದುಳಿದವರ ಸಮಸ್ಯೆಗಳ ಬಗ್ಗೆ ಮೌನವಾಗಿರುವ ಬಿಜೆಪಿ, ಜಾತಿ-ಧರ್ಮದ ರಾಜಕೀಯದ ಸುತ್ತ ಮಾತ್ರ ತಿರುಗಾಡುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಸಾರ್ವಜನಿಕರು ಇದನ್ನು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.