ADVERTISEMENT

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 40 ಕಮಿಷನ್‌ | ಭಾಗಶಃ ಸಾಬೀತು: ವರದಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 23:30 IST
Last Updated 13 ಮಾರ್ಚ್ 2025, 23:30 IST
   

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಧಾರವಾಡ, ಚಿತ್ರದುರ್ಗ ಸೇರಿದಂತೆ ಕೆಲವೆಡೆ ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್‌ ಪಡೆದಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ನ್ಯಾ.ಎಚ್‌.ಎನ್‌. ನಾಗಮೋಹನ್‌ದಾಸ್‌ ವಿಚಾರಣಾ ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ಮಾಡಿದ್ದ ಶೇ 40ರಷ್ಟು ಕಮಿಷನ್‌ ಆರೋಪಗಳ ಕುರಿತು ತನಿಖೆ ನಡೆಸಲು ನೇಮಿಸಿದ್ದ ವಿಚಾರಣಾ ಆಯೋಗ ತನ್ನ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಕಮಿಷನ್‌ ಸೇರಿದಂತೆ ಟೆಂಡರ್‌ ಕಾಮಗಾರಿ ಪ್ರಕ್ರಿಯೆಗಳಲ್ಲಿನ ಹಲವು ಲೋಪ, ನಿಯಮಗಳ ದುರ್ಬಳಕೆ, ಸ್ವ ಹಿತಾಸಕ್ತಿ ಪ್ರಕರಣಗಳ ಮೇಲೆ ವರದಿ ಬೆಳಕು ಚೆಲ್ಲಿದೆ. 

ಚಿತ್ರದುರ್ಗದಲ್ಲಿ ಕೈಗೊಂಡಿದ್ದ ಹಲವು ಕಾಮಗಾರಿಗಳಲ್ಲಿ ಅಲ್ಲಿನ ಶಾಸಕರು ಹಸ್ತಕ್ಷೇಪ ಮಾಡಿದ್ದಾರೆ. ಕಮಿಷನ್‌ ವ್ಯವಹಾರ ನಡೆಸಿದ್ದಾರೆ. ಗುತ್ತಿಗೆದಾರರು, ಮಾಡಿದ ಆರೋಪಗಳಿಗೆ ಸೂಕ್ತ ಸಾಕ್ಷ್ಯ, ದಾಖಲೆ ಒದಗಿಸಿದ್ದಾರೆ. ಹಾಗೆಯೇ, ಧಾರವಾಡದಲ್ಲಿ ಕೈಗೊಂಡ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಲ್ಲಿ ಅಲ್ಲಿನ ಮುಖ್ಯ ಎಂಜಿನಿಯರ್‌ ಲೋಪ, ಅಕ್ರಮ ಎಸಗಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ADVERTISEMENT

ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾದ ಉಪ ಕಾಲುವೆಗಳ ಆಧುನೀಕರಣ ಕಾಮಗಾರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಲೋಪ ಎಸಗಿದ್ದಾರೆ. ಅಂದಾಜು ಪಟ್ಟಿಯನ್ನು ಬದಲಿಸುವ ಮೂಲಕ ‘ವ್ಯವಹಾರ’ ನಡೆಸಿರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಟೆಂಡರ್‌ ಕಾಮಗಾರಿ, ಎಸ್‌.ಆರ್ ದರಪಟ್ಟಿ ನಿಗದಿ, ಸ್ಟಾರ್‌ ರೇಟ್‌ ಪದ್ಧತಿ ಜಾರಿ, ಪಾರದರ್ಶಕತೆ, ಜ್ಯೇಷ್ಠತೆ ಉಲ್ಲಂಘಿಸಿ ಬಿಲ್‌ ಪಾವತಿ, ಕೆಆರ್‌ಐಡಿಎಲ್‌ನಿಂದ ಗುತ್ತಿಗೆದಾರರಿಗೆ ನೇರ ಕಾಮಗಾರಿ ನೀಡಿಕೆ ಸೇರಿದಂತೆ ಜುಲೈ 2019ರಿಂದ ಮಾರ್ಚ್‌ 2023ರವರೆಗೆ ನಡೆದಿದ್ದ ವಿವಿಧ ಕಾಮಗಾರಿಗಳ ತನಿಖೆ ನಡೆಸಲು ಆಯೋಗ ರಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.