
ಬೆಂಗಳೂರು: ಬಿಎಂಆರ್‌ಸಿಎಲ್ ಮೇಲೆ ಒತ್ತಡ ಹಾಕಿ, ಮೆಟ್ರೊ ರೈಲು ಪ್ರಯಾಣದರ ಏರಿಕೆ ಮಾಡಿಸಿದ್ದೇ ರಾಜ್ಯ ಸರ್ಕಾರ. ಆದರೆ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಆರ್‌ಸಿಎಲ್‌ಗೆ ₹13,000 ಕೋಟಿಗೆ ಹೆಚ್ಚು ಸಾಲವಿದ್ದು, ಅದರ ಮರುಪಾವತಿ ಮಾಡಬೇಕಿದೆ. ಜತೆಗೆ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ಭರಿಸಬೇಕಿದೆ. ಟಿಕೆಟ್ ಮತ್ತು ಟಿಕೆಟ್‌ಯೇತರ ಮೂಲದಿಂದ ಅಷ್ಟು ಆದಾಯ ಬರುತ್ತಿಲ್ಲ. ಬಿಂಆರ್‌ಸಿಎಲ್‌ಗೆ ಸಹಾಯ ಮಾಡಲು ಹಿಂದಿನ ಸರ್ಕಾರಗಳು ಪ್ರತಿ ವರ್ಷ ಸರಾಸರಿ ₹200 ಕೋಟಿಯನ್ನು ನೀಡಿವೆ. ಆದರೆ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಎಂಆರ್‌ಸಿಎಲ್‌ಗೆ ಹಣ ನೀಡುವುದನ್ನು ನಿಲ್ಲಿಸಿದೆ ಎಂದು ಆರೋಪಿಸಿದರು.
ಪ್ರತಿ ವರ್ಷ ನೀಡುತ್ತಿದ್ದ ₹200 ಕೋಟಿಯನ್ನು ಹೊಂದಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಗ್ಯಾರಂಟಿಗಳಿಗೆ ಹಣ ನೀಡುತ್ತಿರುವುದರಿಂದ ಬೊಕ್ಕಸ ಖಾಲಿಯಾಗಿದೆ. ಈ ಹಣ ತಾನೇ ಭರಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮೇಲೆ ಒತ್ತಡ ಹೇರಿ, ದರ ಹೆಚ್ಚಳ ಮಾಡಿಸಿದೆ. ಅಲ್ಲದೆ, ಪ್ರತಿ ವರ್ಷವೂ ಸ್ವಯಂಚಾಲಿತವಾಗಿ ದರ ಏರಿಕೆ ಆಗುವಂತೆ ಮಾಡಿಸಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.