ADVERTISEMENT

ಮಹಾರಾಷ್ಟ್ರ ಪ್ರವಾಹಕ್ಕೆ ಆಲಮಟ್ಟಿ ಕಾರಣವಲ್ಲ: ನಂದಕುಮಾರ ಸಮಿತಿ ವರದಿ ಸಲ್ಲಿಕೆ

ಬಸವರಾಜ ಸಂಪಳ್ಳಿ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದ ನೀರಾವರಿ ತಜ್ಞ ನಂದಕುಮಾರ ವಡನೆರೆ ನೇತೃತ್ವದ ಸಮಿತಿ ಭೇಟಿ ನೀಡಿ ಪರಿಶೀಲಿಸಿದ್ದ ದೃಶ್ಯ (ಸಂಗ್ರಹ ಚಿತ್ರ)
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದ ನೀರಾವರಿ ತಜ್ಞ ನಂದಕುಮಾರ ವಡನೆರೆ ನೇತೃತ್ವದ ಸಮಿತಿ ಭೇಟಿ ನೀಡಿ ಪರಿಶೀಲಿಸಿದ್ದ ದೃಶ್ಯ (ಸಂಗ್ರಹ ಚಿತ್ರ)   

ವಿಜಯಪುರ: ‘ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆಯಲ್ಲಿನ ಪ್ರವಾಹಕ್ಕೆ ರಾಜ್ಯದ ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯದಲ್ಲಿನ ನೀರಿನ ಸಂಗ್ರಹ ಕಾರಣವಲ್ಲ’ ಎಂದು ನೀರಾವರಿ ತಜ್ಞರ ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೇ,  ರೈತರು ಮತ್ತು ಜನಪ್ರತಿನಿಧಿಗಳು ಸಹ ಮಹಾರಾಷ್ಟ್ರದ ಆರೋಪವನ್ನು ಅಲ್ಲಗಳೆದಿದ್ದಾರೆ. 

‘ಕೃಷ್ಣಾ ನದಿಗೆ ಮಹಾಪೂರ ಬಂದಾಗಲೆಲ್ಲ, ಸಾಂಗ್ಲಿ, ಮಿರಜ್‌ ಮತ್ತು ಕೊಲ್ಹಾಪುರ ಭಾಗದಲ್ಲಿ ನೀರು ನುಗ್ಗಿ ಹಾನಿ ಸಂಭವಿಸಲು ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯಗಳೇ ಕಾರಣವೆಂದು ಪ್ರತಿ ವರ್ಷ ಮಹಾರಾಷ್ಟ್ರ ಸರ್ಕಾರವು ಆರೋಪಿಸುವುದರಲ್ಲಿ ಹುರುಳಿಲ್ಲ’ ಎಂದು ಮುಖಂಡರು ಹೇಳಿದ್ದಾರೆ.

ಪ್ರವಾಹ ಅಧ್ಯಯನಕ್ಕಾಗಿ ಮಹಾರಾಷ್ಟ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ನಂದಕುಮಾರ ವಡನೆರೆ ನೇತೃತ್ವದಲ್ಲಿ 2020ರಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ ನೀರಾವರಿ ತಜ್ಞರಾದ ಸಂಜಯ ಘನೇಕರ, ಆರ್.ಆರ್. ಪವಾರ, ಪ್ರದೀಪ ಪುರಂದರೆ, ಅತುಲ್‌ ಕಪೋಲೆ, ಆರ್.ಡಿ. ಮೊಹತೆ, ಎಸ್‌.ಎಲ್‌.ದಾಯಫುಲೆ, ಎನ್‌.ಎಸ್. ಖರೆ, ಧೈರ್ಯಶೀಲ ಪವಾರ ಇದ್ದರು.

ADVERTISEMENT

ಮಹಾರಾಷ್ಟ್ರದ ತಜ್ಞರ ಸಮಿತಿಯು ಆಲಮಟ್ಟಿ ಮತ್ತು ಹಿಪ್ಪರಗಿ ಜಲಾಶಯ ಸೇರಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿ ಪಾತ್ರದಲ್ಲಿ ಆರು ತಿಂಗಳು ಅಧ್ಯಯನ ನಡೆಸಿದರು. ತಾಂತ್ರಿಕ ವರದಿ ತಯಾರಿಸಿ, ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ವರದಿ ಸಲ್ಲಿಸಿದರು.

ಪ್ರವಾಹ ಮಾಹಿತಿ ಸಂಗ್ರಹಣೆಗೆ ಆಲಮಟ್ಟಿಗೆ ಮಹಾರಾಷ್ಟ್ರ ತಜ್ಞರ ಸಮಿತಿ ಭೇಟಿ ನೀಡಿದಾಗ, ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳಿಗೆ ಆಲಮಟ್ಟಿ ಜಲಾಶಯದಲ್ಲಿ ಪ್ರತಿ ವರ್ಷ ನೀರು ಸಂಗ್ರಹಿಸುವ ವಿಧಾನ, ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದ್ದರು. ತಾಂತ್ರಿಕ ಅಂಶಗಳ ಆಧಾರದ ಮೇಲೆ ಪ್ರವಾಹದ ಆರೋಪವನ್ನು ಅಲ್ಲಗಳೆದಿದ್ದರು.

‘ಮಹಾ ಪ್ರವಾಹ ಉಂಟಾಗಲು ಕರ್ನಾಟಕದ ಜಲಾಶಯಗಳು ಕಾರಣವಲ್ಲ. ನದಿಪಾತ್ರದಲ್ಲಿನ ಅತಿಕ್ರಮಣ, ಕಾನೂನು ಬಾಹಿರ ಕಟ್ಟಡಗಳ ನಿರ್ಮಾಣಗಳೇ ಮುಖ್ಯ ಕಾರಣ. ಜತೆಗೆ ಮಳೆಗಾಲದಲ್ಲಿ ಅತಿ ಮಳೆಯಾದ ತಕ್ಷಣವೇ ಹಳ್ಳ, ಕೊಳ್ಳ, ನದಿಗಳು ಏಕಾಏಕಿ ಉಕ್ಕಿ ಹರಿಯುವುದರಿಂದ ಪ್ರವಾಹ ಉಂಟಾಗುತ್ತದೆ’ ಎಂದು ನೀರಾವರಿ ತಜ್ಞ ನಂದಕುಮಾರ ವಡನೆರೆ ಸಮಿತಿಯು 2020ರಲ್ಲೇ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಆಲಮಟ್ಟಿ ಜಲಾಶಯವನ್ನು ಈಗಿನ 519ರಿಂದ 524 ಮೀಟರ್‌ ಎತ್ತರಿಸುವುದು ಈಗಾಗಲೇ ನಿರ್ಧಾರವಾಗಿದೆ. ಈ ಕುರಿತು ಮಹಾರಾಷ್ಟ್ರ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ 
-ಎಂ.ಬಿ.ಪಾಟೀಲ, ಸಚಿವ
ಆಲಮಟ್ಟಿ ಜಲಾಶಯ ನಿರ್ಮಾಣಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಮಳೆಗಾಲದ ವೇಳೆ ಪ್ರವಾಹ ಉಂಟಾಗಿತ್ತು ಎಂಬುದಕ್ಕೆ ದಾಖಲೆಗಳಿವೆ. ಮಹಾರಾಷ್ಟ್ರ ಸರ್ಕಾರದ ಆರೋಪದಲ್ಲಿ ಹುರುಳಿಲ್ಲ
-ಗೋವಿಂದ ಕಾರಜೋಳ, ಸಂಸದ  
ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್‌ಗೆ ಎತ್ತರಿಸುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರ ತಪ್ಪು ತಿಳಿವಳಿಕೆ ಮೂಡಿಸಲು ಯತ್ನಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.
-ಅರವಿಂದ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಅಖಂಡ ಕರ್ನಾಟಕ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.