ADVERTISEMENT

ಬಿಜೆಪಿ ಜತೆ ವಿಲೀನವೋ ಮಿಲನವೋ: ‘ಎನ್‌ಡಿಎ’ದತ್ತ ಜೆಡಿಎಸ್‌?

ಎಚ್‌ಡಿಕೆಗೆ ವಿಪಕ್ಷ ನಾಯಕನ ಆಮಿಷ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 23:50 IST
Last Updated 15 ಜುಲೈ 2023, 23:50 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಲು ಸೋತಿದ್ದರೂ ಕೆಲವು ಕ್ಷೇತ್ರಗಳಲ್ಲಿ ತನ್ನದೇ ನೆಲೆ ಹೊಂದಿರುವ ಜೆಡಿಎಸ್‌, ಎನ್‌ಡಿಎ ಮಿತ್ರಕೂಟದ ಭಾಗವಾಗುವ ಆಲೋಚನೆಯಲ್ಲಿದೆ.

ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ, ಲೋಕಸಭೆ ಚುನಾವಣೆ ಹೊತ್ತಿಗಾದರೂ ಚೇತರಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಜೆಡಿಎಸ್‌ ಮೊರೆ ಹೋಗಿದೆ. ಕಾಂಗ್ರೆಸ್‌ ಜತೆ ಸಂಬಂಧ ಹಳಸಿರುವುದರಿಂದಾಗಿ, ಮತ್ತೆ ತಲೆ ಎತ್ತಬೇಕಾದರೆ ಬಿಜೆಪಿ ಆಸರೆಯೇ ಸೂಕ್ತ ಎಂಬ ತರ್ಕಕ್ಕೆ ದಳಪತಿಗಳೂ ಬಂದಿದ್ದಾರೆ. ಇದೇ 18ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಜೆಡಿಎಸ್‌ ಭಾಗಿಯಾಗುವುದೇ ಇಲ್ಲವೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಬಿರುಸುಗೊಂಡಿದೆ.

ಎನ್‌ಡಿಎ ಮೈತ್ರಿಕೂಟದ ಭಾಗವಾಗಿ, ಈಗ ಚದುರಿಹೋಗಿರುವ ವಿವಿಧ ಪಕ್ಷಗಳ ನಾಯಕರಿಗೆ ಪತ್ರ ಬರೆದಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಮತ್ತೆ ಕೂಟವನ್ನು ಒಗ್ಗೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ADVERTISEMENT

‘ಇಲ್ಲಿಯವರೆಗೆ ಬಿಜೆಪಿಯಿಂದ ಆಹ್ವಾನ ಬಂದಿಲ್ಲ. ಬಂದ ಬಳಿಕವಷ್ಟೇ, ಸಭೆಯಲ್ಲಿ ಪಾಲ್ಗೊಳ್ಳಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ಕುಮಾರಸ್ವಾಮಿಯವರ ಆಪ್ತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

‘ನಾವೇ ಏಕಾಂಗಿಯಾಗಿ ಸ್ಪರ್ಧಿಸಿದರೆ 2–4 ಸ್ಥಾನದಲ್ಲಾದರೂ ಗೆಲ್ಲಬಹುದು. ಬಿಜೆಪಿ ಜತೆಗೆ ಹೋದರೆ, 2019ರಲ್ಲಿ ಕಾಂಗ್ರೆಸ್‌ ಜತೆಗೆ ಹೋದಂತೆ ಆಗಿ, ಇರುವ ಸ್ಥಾನವನ್ನೂ ಕಳೆದುಕೊಳ್ಳಬೇಕಾಗಬಹುದೆಂಬ ಆತಂಕ ಇದೆ. ಈ ಗೊಂದಲ ಇರುವುದರಿಂದ ಯಾವುದೇ ತೀರ್ಮಾನವೂ ಆಗಿಲ್ಲ’ ಎಂದು ಮೂಲಗಳು ವಿವರಿಸಿವೆ.

ಲೆಕ್ಕಾಚಾರವೇನು?

ಭಾರಿ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರ ಹಿಡಿದಿರುವುದರಿಂದ ಏಕಾಂಗಿಯಾಗಿ ಲೋಕಸಭೆ ಚುನಾವಣೆ ಎದುರಿಸಿದರೆ 25 ಸ್ಥಾನಗಳನ್ನು ಮರಳಿ ಗಳಿಸುವುದು ಕಷ್ಟ. ಜೆಡಿಎಸ್ ಪ್ರಭಾವವಿರುವ ಕ್ಷೇತ್ರಗಳಲ್ಲಿ ಒಂದಾಗಿ ಚುನಾವಣೆಗೆ ಹೋದರೆ ಮರ್ಯಾದೆ ಉಳಿಸಿಕೊಳ್ಳುವಷ್ಟಾದರೂ ಸ್ಥಾನಗಳನ್ನು ದಕ್ಕಿಸಿಕೊಳ್ಳಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. 

‘ಈ ವಿಷಯದಲ್ಲಿ ಕುಮಾರಸ್ವಾಮಿ ಜತೆಗೆ ಬಿಜೆಪಿ ವರಿಷ್ಠರು ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಒಂದು ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸುವುದು. ಆಗ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುತ್ತೇವೆ. ನಿಮ್ಮ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ವರಿಷ್ಠರು ಭರವಸೆ ನೀಡಿದ್ದಾರೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

‘ಈ ಪ್ರಸ್ತಾವಕ್ಕೆ ಕುಮಾರಸ್ವಾಮಿ ಒಪ್ಪಿಲ್ಲ. ಕರ್ನಾಟಕದಲ್ಲಿ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಜತೆ ಸೆಣಸಬೇಕಾಗಿರುವುದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಮೈತ್ರಿಕೂಟವನ್ನು ಸೇರಲು ಸಾಧ್ಯವೇ ಇಲ್ಲ. ಹೀಗಾಗಿ, ನಮ್ಮ ಅಸ್ತಿತ್ವ ಉಳಿಸಿಕೊಂಡು, ಎನ್‌ಡಿಎ ಮೈತ್ರಿಕೂಟ ಸೇರಲು ಸಿದ್ಧ. ವಿರೋಧ ಪಕ್ಷ ನಾಯಕ ಸ್ಥಾನದ ಬದಲು ಕೇಂದ್ರ ಸಚಿವ ಸ್ಥಾನ ಕೊಟ್ಟರೆ, ಕರ್ನಾಟಕದಲ್ಲೂ ನಿಮ್ಮ ಪಕ್ಷಕ್ಕೆ ಬಲ ತಂದುಕೊಡುತ್ತೇನೆ ಎಂದು ಕುಮಾರಸ್ವಾಮಿ ಪ್ರತಿಪಾದಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ಈ ಕಾರಣಕ್ಕಾಗಿ ಪ್ರತಿಪಕ್ಷ ನಾಯಕ ಸ್ಥಾನದ ಆಯ್ಕೆ ನಡೆದಿಲ್ಲ. ಕುಮಾರಸ್ವಾಮಿ ವಿಲೀನಕ್ಕೆ ಒಪ್ಪಿದರೆ ಅವರೇ ಆ ಸ್ಥಾನಕ್ಕೆ ಬರುವ ಸಾಧ್ಯತೆ ಹೆಚ್ಚು. ಕರ್ನಾಟಕದ ನಾಯಕರ ಜತೆಗೆ  ಚರ್ಚೆ ನಡೆದಿಲ್ಲ. ದೆಹಲಿ ವರಿಷ್ಠರ ಹಂತದಲ್ಲೇ ಈ ಸಮಾಲೋಚನೆ ನಡೆದಿದೆ. ತೀರ್ಮಾನವನ್ನು ಅವರೇ ತೆಗೆದುಕೊಳ್ಳಬೇಕಿದೆ. ಎನ್‌ಡಿಎ ಮೈತ್ರಿಕೂಟದ ಸಭೆ ಮುಗಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.