ADVERTISEMENT

ಕೇಂದ್ರದ ನೆರವಿಗೆ ರಾಜ್ಯ ಸರ್ಕಾರದ ಮನವಿ

ಕೊಡಗು ಪ್ರವಾಹ: ₹3,435 ಕೋಟಿ ನಷ್ಟ l ರಾಜನಾಥ ಸಿಂಗ್‌ ಭೇಟಿ ಮಾಡಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
   

ನವದೆಹಲಿ: ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಅಂದಾಜು ₹ 3,435 ಕೋಟಿಗೂ ಅಧಿಕ ಮೌಲ್ಯದ ನಷ್ಟ ಉಂಟಾಗಿದ್ದು, ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿ ಅನುದಾನ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

ಗುರುವಾರ ಸಂಜೆ ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿ ಈ ಕುರಿತ ಮನವಿ ಸಲ್ಲಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಾಥಮಿಕ ವರದಿ ಪ್ರಕಾರ ಇಷ್ಟು ಪ್ರಮಾಣದ ನಷ್ಟ ಉಂಟಾಗಿರುವುದು ತಿಳಿದುಬಂದಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ನಷ್ಟದ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದರು.

ADVERTISEMENT

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ತಲೆದೋರಿದ್ದರಿಂದ ಸರ್ವಸ್ವವನ್ನೂ ಕಳೆದುಕೊಂಡು ಬೀದಿ ಪಾಲಾಗಿರುವ ಜನತೆಗೆ ನೆರವಾಗಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅಗತ್ಯ ಆರ್ಥಿಕ ನೆರವು ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಪರಿಶೀಲನೆಗಾಗಿ ಶೀಘ್ರವೇ ಕೇಂದ್ರದ ಅಧ್ಯಯನ ತಂಡವನ್ನು ಕಳುಹಿಸಿಕೊಡುವುದಾಗಿ ಸಚಿವ ರಾಜನಾಥ ಸಿಂಗ್‌ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಆಂತರಿಕ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ಪೊಲೀಸ್‌ ವ್ಯವಸ್ಥೆಯ ಆಧುನೀಕರಣಕ್ಕೆ, ಕರಾವಳಿ ಭದ್ರತಾ ಯೋಜನೆಗೆ, ಕರಾವಳಿ ಕಾವಲು ಪಡೆಯ ತರಬೇತಿ ಕೇಂದ್ರ ಆರಂಭಿಸುವುದಕ್ಕೆ ಅನುದಾನ ಕೋರಿ ಸಲ್ಲಿಸಲಾದ ಪ್ರಸ್ತಾವನೆಗಳಿಗೆ ಅಂಕಿತ ಹಾಕುವಂತೆಯೂ ಇದೇ ವೇಳೆ ಕೋರಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.

ಮಹದಾಯಿ ಜಲವಿವಾದ ನ್ಯಾಯಮಂಡಳಿಯ ತೀರ್ಪಿನ ಕುರಿತು ಸರ್ಕಾರ ಕೈಗೊಳ್ಳಬೇಕಿರುವ ಮುಂದಿನ ನಡೆಗಳ ಕುರಿತು ಸರ್ವ ಪಕ್ಷ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ನೀರಾವರಿ ತಜ್ಞರ ಅಭಿಪ್ರಾಯ ಸಂಗ್ರಹಿಸಿದ ನಂತರ ಕಾನೂನು ಕ್ರಮಗಳ ಕುರಿತೂ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ರಾಜ್ಯದ 12 ಜಿಲ್ಲೆಗಳಲ್ಲಿ ಬರಗಾಲ ಸ್ಥಿತಿ ಇದ್ದು, ಅಂತರ್ಜಲದ ಲಭ್ಯತೆಯ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ. ಈ ಕುರಿತ ಮಾಹಿತಿಯನ್ನು ಆಧರಿಸಿ ಸೆಪ್ಟೆಂಬರ್‌ 10ರಂದು ಬೆಂಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೃಷಿ ಮಾರುಕಟ್ಟೆ ಸಚಿವ ಬಂಡೆಪ್ಪ ಕಾಶೆಂಪುರ, ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್‌ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.