
ಬೆಂಗಳೂರು: ‘ಕಲ್ಯಾಣ ಕರ್ನಾಟಕ ಭಾಗದ 41 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ‘ನೆಹರು ಸ್ಟ್ರೀಮ್ ಲ್ಯಾಬ್’ಗಳನ್ನು ಸ್ಥಾಪಿಸಲಾಗುವುದು’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಸಹಯೋಗದಲ್ಲಿ ಜಾರಿಗೊಳ್ಳುತ್ತಿರುವ ಈ ಯೋಜನೆಯು, ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ವಿಜ್ಞಾನ ಕಲಿಕೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಭವಿಷ್ಯದ ಅತ್ಯಾಧುನಿಕ ವಿಜ್ಞಾನ ಮತ್ತು ಪರಿಸರ ಸುಸ್ಥಿರತೆಯನ್ನು ಒಳಗೊಂಡ ವಿಶಿಷ್ಟ ಪಠ್ಯಕ್ರಮವನ್ನು ಪರಿಚಯಿಸಲಿದೆ. 'ಸ್ಟ್ರೀಮ್' (ಎಸ್‌ಟಿಆರ್‌ಇಎಎಂ) ಎಂದರೆ ವಿಜ್ಞಾನ, ತಂತ್ರಜ್ಞಾನ, ರೊಬೊಟಿಕ್ಸ್, ಪರಿಸರ ವಿಜ್ಞಾನ, ಖಗೋಳಶಾಸ್ತ್ರ ಮತ್ತು ಗಣಿತ’ ಎಂದು ಅವರು ವಿವರಿಸಿದ್ದಾರೆ.
‘ಇದೇ ಮೊದಲ ಬಾರಿಗೆ ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ 'ಕ್ವಾಂಟಮ್ ಫಿಸಿಕ್ಸ್'ನ ಮೂಲಭೂತ ಪರಿಕಲ್ಪನೆಗಳನ್ನು ಪರಿಚಯಿಸಲಾಗುತ್ತಿದೆ. ಇದು ಬ್ರಹ್ಮಾಂಡದ ಮೂಲ ಸ್ವರೂಪದ ಬಗ್ಗೆ ಮಕ್ಕಳಲ್ಲಿ ಕುತೂಹಲ ಮೂಡಿಸಲಿದೆ. ಜೊತೆಗೆ, ಪರಿಸರ ವಿಜ್ಞಾನಕ್ಕೂ ಒತ್ತು ನೀಡುತ್ತಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ ಜಾರಿಯಾಗುತ್ತಿರುವ ವಿನೂತನ ಉಪಕ್ರಮವಿದು’ ಎಂದಿದ್ದಾರೆ.
‘ಈ ಕಾರ್ಯಕ್ರಮದಲ್ಲಿ ಮಕ್ಕಳು ತರಗತಿ ಕೊಠಡಿಯಿಂದ ಹೊರಬಂದು, ತಮ್ಮ ಸುತ್ತಮುತ್ತಲಿನ ಸ್ಥಳೀಯ ಸಸ್ಯ ಮತ್ತು ಪ್ರಾಣಿ ಸಂಕುಲದ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆಯಲಿದ್ದಾರೆ. ಎಳೆಯ ವಯಸ್ಸಿನಲ್ಲೇ ಮಕ್ಕಳ ಮನಸ್ಸಿನಲ್ಲಿ ಸುಸ್ಥಿರತೆ ಮತ್ತು ಪರಿಸರ ಕಾಳಜಿ ಬಿತ್ತುವುದು ನಮ್ಮ ಗುರಿ’ ಎಂದು ಹೇಳಿದ್ದಾರೆ.
ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ‘ಮೊದಲ ಹಂತದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಒಟ್ಟು 41 ಶಾಲೆಗಳಲ್ಲಿ ಈ ಲ್ಯಾಬ್‌ಗಳನ್ನು ಆರಂಭಿಸುತ್ತಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೂ ನಗರದ ವಿದ್ಯಾರ್ಥಿಗಳಿಗೆ ಸಮಾನವಾದ ವೈಜ್ಞಾನಿಕ ಮನೋಭಾವ ಮತ್ತು ಅವಕಾಶಗಳು ದೊರೆಯಬೇಕು ಎಂಬುದು ನಮ್ಮ ಆಶಯ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.