ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನವದೆಹಲಿಯ ಕರ್ನಾಟಕ ಭವನದ ಗ್ರೂಪ್ ’ಎ’ ವೃಂದದ ‘ಸಹಾಯಕ ನಿವಾಸಿ ಆಯುಕ್ತ’ ಹುದ್ದೆಯ ಮುಂಬಡ್ತಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಬೇಕು ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು ಎಂಬುದನ್ನು ಸೇರಿಸಿ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಅವರು, ‘ಈ ಸಂಬಂಧ ನವದೆಹಲಿ ನಿವಾಸಿ ಆಯುಕ್ತರಿಗೆ ಕಡತ ಕಳುಹಿಸಿದ್ದರೂ, ಅವರು ಯಾವುದೇ ಕ್ರಮ ತೆಗೆದುಕೊಳ್ಳದೇ ನನೆಗುದಿಯಲ್ಲಿಟ್ಟಿ ದ್ದಾರೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ ಸಂಪರ್ಕ ಅಧಿಕಾರಿ (ಎಂಪಿ ಸೆಲ್) ಹುದ್ದೆಗೆ ಸಂಬಂಧಿಸಿದಂತೆ ಕರ್ನಾಟಕ ಸಚಿವಾಲಯ ಸೇವೆಗಳು (ನೇಮಕಾತಿ) 2019ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಕೋರಲಾದ ಕಡತವನ್ನು ಇ–ಆಫೀಸ್ ಮೂಲಕ ನಿವಾಸಿ ಆಯುಕ್ತರಿಗೆ ಹಿಂದಿರುಗಿಸಿದ ಪ್ರಸ್ತಾವನೆ ಮತ್ತು ನಿವಾಸಿ ಆಯುಕ್ತರ ಕಚೇರಿಯಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಮೇಲ್ದರ್ಜೆಗೇರಿಸಿ ಎರಡು ಸಮನ್ವಯ ಅಧಿಕಾರಿ ಹುದ್ದೆಗಳನ್ನು ಸೃಜಿಸಲು ಸಲ್ಲಿಸಿರುವ ಮನವಿಗೆ ನಿವಾಸಿ ಆಯುಕ್ತರು ಶಿಫಾರಸು ಮಾಡಲು ಒಪ್ಪಿದ್ದರೂ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಪ್ರಸ್ತಾವನೆಗಳ ಕಡತಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಲು ನಿವಾಸಿ ಆಯುಕ್ತರಿಗೆ ನಿರ್ದೇಶನ ನೀಡಬೇಕು’ ಎಂದು ಪತ್ರದಲ್ಲಿ ಜಯಚಂದ್ರ ಆಗ್ರಹಿಸಿದ್ದಾರೆ.
ಈ ಮಧ್ಯೆ ‘ಎ’ ವೃಂದದ ಸಮನ್ವಯ ಅಧಿಕಾರಿ ಮುಂಬಡ್ತಿಗೆ ಯಾವುದೇ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸದೇ, ವೃಂದ ಮತ್ತು ನೇಮಕಾತಿ ಪ್ರಕ್ರಿಯೆ ಬದಿಗೊತ್ತಿ ಆದೇಶ ಹೊರಡಿಸಲು ನಿವಾಸಿ ಆಯುಕ್ತರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.