– ಪ್ರಜಾವಾಣಿ ಚಿತ್ರ
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ದಿನ (ಡಿ. 31) ಮದ್ಯ ಮಾರಾಟದಲ್ಲಿ ಇಳಿಕೆಯಾಗಿದೆ. ಅಬಕಾರಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಭಾರತೀಯ ತಯಾರಿಕಾ ಮದ್ಯ (ಐಎಂಎಲ್) ಮಾರಾಟ ಶೇ 5.16, ಬಿಯರ್ ಮಾರಾಟ ಶೇ 57.59 ಕುಸಿತವಾಗಿದೆ.
ಕ್ರಿಸ್‌ಮಸ್ ರಜಾ ದಿನಗಳ ಆರಂಭದ ನಂತರ ವಹಿವಾಟಿನಲ್ಲಿ ಏರಿಕೆ ಕಂಡಿತ್ತು. ಹಿಂದಿನ ವರ್ಷದ ಕ್ರಿಸ್‌ಮಸ್ ರಜಾ ದಿನಗಳಿಗೆ ಹೋಲಿಸಿದರೆ ಅಬಕಾರಿ ಆದಾಯದಲ್ಲಿ ಶೇ 10.19 ಹೆಚ್ಚಳವಾಗಿದೆ. ಬಿಯರ್ ಮಾರಾಟದಲ್ಲಿ ಶೇ 1.80 ಹೆಚ್ಚಳವಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಡಿ. 31ರ ಮಾರಾಟ ನಿರೀಕ್ಷೆಯಂತೆ ಏರಿಕೆ ಕಂಡಿಲ್ಲ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿವೆ.
ಡಿಸೆಂಬರ್‌ನಲ್ಲಿ ಐಎಂಎಲ್ ಮಾರಾಟ ಶೇ 1.89 ಹೆಚ್ಚಳವಾಗಿದ್ದರೆ, ಬಿಯರ್ ಮಾರಾಟ ಶೇ 1.48 ಇಳಿಕೆಯಾಗಿದೆ. ಡಿಸೆಂಬರ್ ತಿಂಗಳ ಒಟ್ಟು ಮದ್ಯ ಮಾರಾಟದಿಂದ ₹3,559.08 ಕೋಟಿ ಆದಾಯ ಬಂದಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ₹454.58 ಕೋಟಿ ಹೆಚ್ಚಳವಾಗಿದೆ. ಆದರೆ, 2024ಕ್ಕೆ ಹೋಲಿಸಿದರೆ 2025ರ ಐಎಂಎಲ್ ವಾರ್ಷಿಕ ಮಾರಾಟ ಶೇ 186.19 ಹಾಗೂ ಬಿಯರ್ ಮಾರಾಟ ಶೇ 156.89 ಕುಸಿತವಾಗಿದೆ.
2025ರ ಮೇನಲ್ಲಿ ರಾಜ್ಯ ಸರ್ಕಾರ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 195ರಿಂದ ಶೇ 200ಕ್ಕೆ, ಐಎಂಎಲ್ ಬ್ರ್ಯಾಂಡ್‌ಗಳ ಬೆಲೆಯನ್ನು ಕ್ವಾರ್ಟ್‌ರ್‌ಗೆ ₹15ರಿಂದ ₹20ರವರೆಗೆ ಹೆಚ್ಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.