ADVERTISEMENT

ಕೋವಿಡ್‌–19 ಭೀತಿ: ನಿಖಿಲ್ ಮದುವೆ ಸ್ಥಳಾಂತರಕ್ಕೆ ಚಿಂತನೆ?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 10:48 IST
Last Updated 13 ಮಾರ್ಚ್ 2020, 10:48 IST
   

ರಾಮನಗರ: ನಿಖಿಲ್‌ ಕುಮಾರಸ್ವಾಮಿ ಮದುವೆ ಮೇಲೆ ಕೊರೊನಾ ವೈರಸ್ ಕರಿನೆರಳು ಬಿದ್ದಿದೆ. ವೈರಸ್‌ ಹರಡುವಿಕೆ ಹೆಚ್ಚಾದಲ್ಲಿ ಮದುವೆಯನ್ನು ರಾಮನಗರದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಎಚ್‌.ಡಿ. ಕುಮಾರಸ್ವಾಮಿ ಕುಟುಂಬ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಏಪ್ರಿಲ್‌17ರಂದು ರಾಮನಗರದ ಜಾನಪದ ಲೋಕದ ಬಳಿ ನಿಖಿಲ್‌ ಮತ್ತು ರೇವತಿ ವಿವಾಹ ನಿಶ್ಚಯವಾಗಿದೆ. ಸುಮಾರು ಏಳೆಂಟು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮದುವೆಯ ಲಗ್ನಪತ್ರಿಕೆಯೂ ಈಗಾಗಲೇ ಮುದ್ರಣಗೊಂಡಿದೆ. ಆದರೆ ಈಚೆಗೆ ರಾಜ್ಯದಲ್ಲೂ ಕೋವಿಡ್‌–19 ಸೋಂಕಿತರು ಪತ್ತೆಯಾಗಿರುವುದು. ವೈರಸ್‌ ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವ ಕಾರಣ ಕುಮಾರಸ್ವಾಮಿ ಈ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ಲಕ್ಷಾಂತರ ಜನರು ಸೇರುವ ಕಾರಣ ಹೆಚ್ಚು ರಿಸ್ಕ್‌ ತೆಗೆದುಕೊಳ್ಳುವುದಕ್ಕೆ ಎಚ್‌ಡಿಕೆ ಕುಟುಂಬ ಹಿಂದೇಟು ಹಾಕುತ್ತಿದೆ.

ಒಂದು ವೇಳೆ ಸೋಂಕಿತರ ಪ್ರಮಾಣ ಇನ್ನೂ ಹೆಚ್ಚಿ, ಸಾರ್ವಜನಿಕ ಸಮಾರಂಭಗಳ ಮೇಲೆ ನಿಷೇಧ ಹೇರುವಂತಹ ಪರಿಸ್ಥಿತಿ ಬಂದಲ್ಲಿ ಮದುವೆಯನ್ನು ಇಲ್ಲಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆದಿದೆ. ಪರಿಸ್ಥಿತಿ ಕೈ ಮೀರಿದಲ್ಲಿ ಇಲ್ಲಿ ಮದುವೆ ಸಂಭ್ರಮ ಕೈಬಿಟ್ಟು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರಳವಾಗಿ ವಿವಾಹ ನೆರವೇರಿಸುವ ಸಾಧ್ಯತೆಯೂ ಇದೆ. ಯಾವುದಕ್ಕೂ ಇನ್ನೊಂದಿಷ್ಟು ದಿನ ಕಾದು ನೋಡಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ADVERTISEMENT

ಇದೇ ಕಾರಣಕ್ಕೆ ರಾಮನಗರ–ಚನ್ನಪಟ್ಟಣದಲ್ಲಿ ಇನ್ನೂ ಲಗ್ನಪತ್ರಿಕೆಯ ಹಂಚಿಕೆ ಕಾರ್ಯಕ್ಕೆ ಚಾಲನೆ ದೊರೆತಿಲ್ಲ. ಮದುವೆ ಸೆಟ್‌ ನಿರ್ಮಾಣ ಕಾರ್ಯವೂ ಮಂದಗತಿಯಲ್ಲಿ ನಡೆದಿದೆ. ‘ಮದುವೆ ಸ್ಥಳಾಂತರದ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಇನ್ನೊಂದಿಷ್ಟು ದಿನ ಕಾಯುವಂತೆ ಕುಮಾರಸ್ವಾಮಿ ತಿಳಿಸಿದ್ದಾರೆ. ಲಗ್ನಪತ್ರಿಕೆಗಳು ಇನ್ನೂ ಬಂದಿಲ್ಲ’ ಎಂದು ಜೆಡಿಎಸ್‌ನ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.