ನಿಮ್ಹಾನ್ಸ್
ನವದೆಹಲಿ: ನಿಮ್ಹಾನ್ಸ್‌ನ ಬೆಂಗಳೂರು ಉತ್ತರ ಕ್ಯಾಂಪಸ್‌ನಲ್ಲಿ (ಕ್ಯಾಲಸನಹಳ್ಳಿ) ಸ್ಥಾಪಿಸಲು ಉದ್ದೇಶಿಸಿರುವ 300 ಹಾಸಿಗೆಗಳ ಸಾಮರ್ಥ್ಯದ ಪಾಲಿಟ್ರಾಮಾ ಕೇಂದ್ರ ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಸ್ತಾವಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ.
ಈ ಯೋಜನೆಯ ಒಟ್ಟು ವೆಚ್ಚ ₹498 ಕೋಟಿ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅನುಮೋದನೆ ಇನ್ನಷ್ಟೇ ಸಿಗಬೇಕಿದೆ. 30 ತಿಂಗಳಲ್ಲಿ ಈ ಕ್ಯಾಂಪಸ್ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕೇಂದ್ರ ಸ್ಥಾಪನೆಗೆ ಬೇಕಿರುವ ಜಮೀನು ಮಂಜೂರು ಮಾಡಿದ್ದರು.
ಈ ಕೇಂದ್ರಕ್ಕೆ ಶೀಘ್ರ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಹಣಕಾಸು ಸಚಿವಾಲಯಕ್ಕೆ ಒಂದು ವರ್ಷದಿಂದ ಒತ್ತಡ ಹೇರಿದ್ದರು. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಈ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದರು. ಕೇಂದ್ರಕ್ಕೆ ಅನುಮೋದನೆ ಸಿಗುವಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ಅವರ ಪಾತ್ರ ಮಹತ್ವದ್ದು. ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಸೇಠ್ ಅವರು ಈ ತಿಂಗಳಾಂತ್ಯದಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
‘ನಿಮ್ಹಾನ್ಸ್ ಆರಂಭವಾದಾಗ ಪ್ರತಿದಿನ ಅಲ್ಲಿಗೆ ಬರುವ ರೋಗಿಗಳ ಸಂಖ್ಯೆ 250ರಷ್ಟು ಇತ್ತು. ಆದರೆ, ಈಗ ಆ ಸಂಖ್ಯೆ 2,500ಕ್ಕಿಂತಲೂ ಹೆಚ್ಚು. ದೇಶದಲ್ಲಿ ಸಂಭವಿಸುವ ಸಾವುಗಳಿಗೆ ರಸ್ತೆ ಅಪಘಾತವು ಐದನೇ ಅತಿದೊಡ್ಡ ಕಾರಣವಾಗಿದೆ. ಲಕ್ಷಾಂತರ ಜನರು ರಸ್ತೆ ಅಪಘಾತಗಳಲ್ಲಿ ಸಾಯುತ್ತಿದ್ದಾರೆ. ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ನೀಡಿದರಷ್ಟೇ ಅವರನ್ನು ಉಳಿಸಿಕೊಳ್ಳಲು ಸಾಧ್ಯ. ಆದರೆ, ಜಾಗದ ಕೊರತೆ ಮತ್ತು ಪಾಲಿಟ್ರಾಮಾ ಕೇಂದ್ರ ಇಲ್ಲದೇ ಇರುವುದರಿಂದ ಹಲವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇದೀಗ, ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸಿಕ್ಕಿದೆ. ಬೆಂಗಳೂರು ಸುತ್ತಮುತ್ತಲಿನ ಅಪಘಾತಕ್ಕೀಡಾದವರಿಗೆ ಜೀವ ಉಳಿಸುವ ಮತ್ತು ತುರ್ತು ಆರೈಕೆ ಒದಗಿಸುವಲ್ಲಿ ಇದು ಮಹತ್ವದ ಹೆಜ್ಜೆ’ ಎಂದು ಮಂಜುನಾಥ್ ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.