ADVERTISEMENT

ನಾಯಕತ್ವ ಬದಲಾವಣೆ ಸಂದೇಶ ಬಂದಿಲ್ಲ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 17:34 IST
Last Updated 18 ಜುಲೈ 2021, 17:34 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಸೇರಿದಂತೆ ಯಾವುದೇ ಸಂದೇಶಗಳೂ ಬಂದಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಯಾವುದೇ ಪ್ರಮುಖ ವಿಷಯಗಳಿದ್ದರೂ ಬಿಜೆಪಿಯ ಕೇಂದ್ರ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ರಾಜ್ಯದಲ್ಲಿ ಸರ್ಕಾರದ ನಾಯಕತ್ವ ಬದಲಾವಣೆ ಮಾಡುವಂತಹ ಯಾವುದೇ ಸಂದೇಶ ಈವರೆಗೂ ಬಂದಿಲ್ಲ’ ಎಂದರು.

ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇದ್ದು, ಪಕ್ಷದ ಕೇಂದ್ರ ನಾಯಕತ್ವವೂ ಬಲಿಷ್ಠವಾಗಿದೆ. ಪಕ್ಷದೊಳಗೆ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ನಾಯಕತ್ವ ಬದಲಾವಣೆ ವಿಚಾರ ಪಕ್ಷದ ಮುಂದಿಲ್ಲ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ತಯಾರಿ ನಡೆಯುತ್ತಿದೆ. ಉಳಿದ ವಿಚಾರಗಳು ಏನೇ ಇದ್ದರೂ ಕೇಂದ್ರದ ನಾಯಕರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದೆಹಲಿಗೆ ಹೋಗಿ, ಬಂದಿರುವುದರಲ್ಲಿ ವಿಶೇಷಗಳೇನೂ ಇಲ್ಲ. ಕೊರೊನಾ ಹೆಚ್ಚಾಗಿದ್ದ ಕಾರಣದಿಂದ ಹಲವು ತಿಂಗಳಿಂದ ವರಿಷ್ಠರ ಬೇಟಿಗೆ ಹೋಗಿರಲಿಲ್ಲ. ಇನ್ನು ಪ್ರತಿ ತಿಂಗಳೂ ದೆಹಲಿಗೆ ಭೇಟಿ ನೀಡುವುದಾಗಿ ಅವರೇ ಹೇಳಿದ್ದಾರಲ್ಲವೆ ಎಂದು ಪ್ರಶ್ನೆಯೊಂದಕ್ಕೆ ಅಶೋಕ ಉತ್ತರಿಸಿದರು.

ಔತಣಕೂಟ ಮಾತ್ರ: ‘ಶಾಸಕಾಂಗ ಪಕ್ಷದ ಸಭೆ ಕುರಿತು ನನಗೆ ಯಾವುದೇ ನೋಟಿಸ್‌ ಬಂದಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದೆ. ಈ ಕಾರಣಕ್ಕಾಗಿ ಔತಣಕೂಟಕ್ಕೆ ಆಹ್ವಾನಿಸಿದ್ದಾರಷ್ಟೆ’ ಎಂದರು.

ಸಚಿವ ಬಿ.ಸಿ. ಪಾಟೀಲ ದೆಹಲಿ ಪ್ರವಾಸಕ್ಕೆ ಹೊರಟಿರುವ ಕುರಿತು ಕೇಳಿದಾಗ, ‘ಕೆಲವರು ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗುತ್ತಿರುತ್ತಾರೆ. ನಾನೂ ಹೋಗಬೇಕು ಅಂದುಕೊಂಡಿದ್ದೇನೆ. ಸಚಿವ ಸೋಮಶೇಖರ್‌ ದೆಹಲಿಗೆ ಹೋಗುವುದಿಲ್ಲ ಎಂದು ನನಗೆ ತಿಳಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.