ADVERTISEMENT

ಶಿಕ್ಷಣ ಸಂಸ್ಥೆಗಳಲ್ಲಿ ಕೇಸರಿ ಶಾಲು, ಹಿಜಾಬ್‌ ಧರಿಸಲು ಅವಕಾಶ ಇಲ್ಲ: ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 10:07 IST
Last Updated 3 ಫೆಬ್ರುವರಿ 2022, 10:07 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ    

ಬೆಂಗಳೂರು: ‘ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರ ಹೊರತುಪಡಿಸಿ ಕೇಸರಿ ಶಾಲು, ಹಿಜಾಬ್ ಧರಿಸಲು ಅವಕಾಶ ಇಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ರಾಜ್ಯ ವಿಪತ್ತು ಸ್ಪಂದನಾ ಪಡೆಯ ನೂತನ ವಾಹನಗಳನ್ನು ವಿಧಾನಸೌಧದ ಮುಂಭಾಗದಲ್ಲಿ ಗುರುವಾರ ಲೋಕಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶಿಕ್ಷಣ ಸಂಸ್ಥೆಗಳಲ್ಲಿ ವಿವಾದ ಬೇಡ. ಮತೀಯತೆ ಬಿಟ್ಟು ವಿಶಾಲ ಮನೋಭಾವ ಇರಬೇಕು’ ಎಂದರು.

‘ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವೇ ಕಡ್ಡಾಯ, ಹೊರತು ಬೇರೇನೂ ಅಲ್ಲ. ಶಿಕ್ಷಣ ಸಂಸ್ಥೆಯಲ್ಲಿ ಧರ್ಮ, ಜಾತಿ ಮೀರಿ ಎಲ್ಲರೂ ಒಂದೇ ಎಂಬ ಭಾವನೆ, ಭಾರತ ಮಾತೆಯ ಮಕ್ಕಳು ಎಂಬ ರಾಷ್ಟ್ರಪ್ರೇಮ ಇರಬೇಕು. ಪೂಜೆ, ಧಾರ್ಮಿಕ ಕಾರ್ಯಗಳು ದೇವಾಲಯ, ಮಸೀದಿಗಳಲ್ಲಿ ಇರಲಿ’ ಎಂದರು.

ADVERTISEMENT

‘ಮತೀಯ ಸಂಘಟನೆಗಳ ಬಗ್ಗೆ ಗಮನಹರಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಏಕತೆಗೆ ಅಡ್ಡಗಾಲು ಹಾಕುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ನೇತಾಜಿ ಹೆಸರಿನಲ್ಲಿ ತರಬೇತಿ ಸಂಸ್ಥೆ: ವಿಪತ್ತು ಸ್ಪಂದನಾ ಪಡೆಯ ಆಂಬುಲೆನ್ಸ್, ಜೀಪು, ಸರಕು ಸಾಗಣೆ ವಾಹನ, ಜನರೇಟರ್ ಒಳಗೊಂಡ ಟ್ರಕ್ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ‘ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರಿನಲ್ಲಿ ವಿಪತ್ತು ಸ್ಪಂದನಾ ಪಡೆಯ ತರಬೇತಿ ಸಂಸ್ಥೆ ಸ್ಥಾಪಿಸಲಾಗುವುದು’ ಎಂದರು.

‘ದೊಡ್ಡಬಳ್ಳಾಪುರದಲ್ಲಿರುವ ಅಗ್ನಿಶಾಮಕ ಪಡೆಯ 20 ಎಕರೆ ಜಾಗದಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಕೇಂದ್ರೀಯ ತರಬೇತಿ ಅಕಾಡೆಮಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ನೇತಾಜಿ ಅವರ 125ನೇ ಜಯಂತಿ ಸಂದರ್ಭದಲ್ಲಿ ಮುಂದಿನ ತಲೆಮಾರಿಗೆ ಅವರ ಆದರ್ಶಗಳನ್ನು ನೆನಪಿಸುವಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

‘ಅತಿವೃಷ್ಟಿ, ಅನಾವೃಷ್ಟಿ, ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ಅವಘಡ ನಿರ್ವಹಿಸಲು ವಿಶೇಷ ಕಾರ್ಯಪಡೆಯ ಅಗತ್ಯವಿದೆ. ಸಿಬ್ಬಂದಿ ಕೊರತೆ ನೀಗಿಸಲು ನಿಯೋಜನೆ ಮೇಲೆ ಸಿಬ್ಬಂದಿ ಒದಗಿಸಲು ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದರು.

‘ವಾರದ ಎಲ್ಲ ದಿನ 24 ಗಂಟೆಯೂ ನೆರವಿಗೆ ಧಾವಿಸಲು ಸ್ಪಂದನಾ ಪಡೆಗೆ ₹ 20 ಕೋಟಿ ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ ಇನ್ನೂ ಮೂರು ರಾಜ್ಯ ವಿಪತ್ತು ಸ್ಪಂದನಾ ಪಡೆಯ ತುಕಡಿಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಶೋಧನಾ ಮತ್ತು ರಕ್ಷಣಾ ಉಪಕರಣ ಖರೀದಿಗೆ ₹ 9.65 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

ಅಗ್ನಿಶಾಮಕ ತುರ್ತು ಸೇವೆಗಳ ಪೋಲೀಸ್ ಮಹಾನಿರ್ದೇಶಕ ಅಮರ್‌ಕುಮಾರ್ ಪಾಂಡೆ, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಕೃಷ್ಣಮೂರ್ತಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರತಾಪ್‍ ರೆಡ್ಡಿ, ವಿಧಾನಪರಿಷತ್ ಸದಸ್ಯ ಎಚ್.ಎಂ. ರಮೇಶ್‍ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.