ಮೀಸಲಾತಿ(ಸಾಂಕೇತಿಕ ಚಿತ್ರ)
ಬೆಂಗಳೂರು: ‘ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿದೆ.
ಒಕ್ಕೂಟದ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಘಟನಾ ಸಂಚಾಲಕ ಇಂದೂಧರ ಹೊನ್ನಾಪುರ, ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯ ಸಂಯೋಜಕ ವಿ. ನಾಗರಾಜ್ ಅವರು ಈ ಮನವಿ ಸಲ್ಲಿಸಿದ್ದಾರೆ.
‘ನಾಗಮೋಹನದಾಸ್ ಆಯೋಗದ ವರದಿ ಆಧರಿಸಿ, ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳನ್ನಾಗಿ ವರ್ಗೀಕರಿಸಿ ಒಳ ಮೀಸಲಾತಿ ಹಂಚಿಕೆ ಮಾಡಲಾಗಿದ್ದು, ಈ ವರ್ಗೀಕರಣದ ಪ್ರಕಾರ ‘ಸಿ’ ಗುಂಪಿ'ನಲ್ಲಿ ಅಲೆಮಾರಿ ಸಮುದಾಯಗಳನ್ನು ಸೇರಿಸಲಾಗಿದೆ. ಆದರೆ, ಅದೇ ಗುಂಪಿನಲ್ಲಿರುವ ಉಳಿದ ಸಮುದಾಯಗಳ ಜೊತೆ ಅಲೆಮಾರಿ ಸಮುದಾಯ ಪೈಪೋಟಿ ನಡೆಸಿ, ತಮ್ಮ ಮೀಸಲಾತಿ ಪಾಲು ಪಡೆದುಕೊಳ್ಳುವುದು ಅತ್ಯಂತ ಕಠಿಣ. ಹೀಗಾಗಿ, ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಆಗದಂತೆ ಪರ್ಯಾಯ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಬೇಕು’ ಎಂದು ಒಕ್ಕೂಟ ಆಗ್ರಹಿಸಿದೆ.
‘ನಾಗಮೋಹನದಾಸ್ ಆಯೋಗವು ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 15 ರಿಂದ ಶೇ 18ಕ್ಕೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಮಾಡಿದ್ದ ಶಿಫಾರಸನ್ನು ಜಾರಿಗೊಳಿಸಿ, ಆ ಹೆಚ್ಚುವರಿ ಶೇ 1 ಮೀಸಲಾತಿಯನ್ನು ಪರಿಶಿಷ್ಟ ಜಾತಿಯ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ನಿಗದಿಪಡಿಸಿ ಆದ್ಯತೆಯಲ್ಲಿ ಹೊಸದಾಗಿ ಮೊದಲನೆಯ ಗುಂಪು ರಚಿಸಬೇಕು’ ಎಂದೂ ಒತ್ತಾಯಿಸಿದೆ.
‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಶಾಶ್ವತ ಆಯೋಗ ರಚಿಸಬೇಕು. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಯೋಜನೆ ರೂಪಿಸಬೇಕು, ಈ ಸಮುದಾಯಗಳನ್ನು ಸದೃಢಗೊಳಿಸಲು ಅನುಭವಿ ಅಧಿಕಾರಿ ತಂಡ ನಿಯೋಜಿಸಿ, ಅವರ ಕಣ್ಗಾವಲಿನಲ್ಲಿ ಮನೆ ನಿರ್ಮಿಸಿಕೊಡುವುದು, ಸ್ವಯಂ ಉದ್ಯೋಗ ಹಾಗೂ ವ್ಯಾಪಾರಕ್ಕೆ ಆರ್ಥಿಕ ನೆರವು ನೀಡುವುದು, ವ್ಯವಸಾಯಕ್ಕೆ ಭೂಮಿ ನೀಡಬೇಕು. ಅಲೆಮಾರಿ ನಿಗಮದ ಅಡಿಯಲ್ಲಿ ‘ವಿಶೇಷ ಆರ್ಥಿಕ ಪ್ಯಾಕೇಜ್’ ರೂಪಿಸಿ, ವಾರ್ಷಿಕ ₹ 500 ಕೋಟಿ ಮೀಸಲಿಡಬೇಕು’ ಎಂದೂ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.