
ಹೊಸಪೇಟೆ (ವಿಜಯನಗರ): ಬಡತನ, ಸಂಕಷ್ಟದಲ್ಲಿ ಸಿಲುಕಿರುವ ಮಹಿಳೆಯರಿಗೆ ಮನೆ ಕಟ್ಟಿಸಿಕೊಡುವ ಸಮಾಜ ಮುಖಿ ಸೇವೆಯಲ್ಲಿ ಬೆಂಗಳೂರಿನ ಬ್ಯಾಂಕ್ ಸಲಹೆಗಾರ ನಿತ್ಯಾನಂದ (ನಿತಿ) ತೊಡಗಿದ್ದಾರೆ. ನ್ಯೂಯಾರ್ಕ್ ನಲ್ಲಿ ನೆಲಸಿರುವ ಅವರು, ಹೊಸಪೇಟೆ ತಾಲ್ಲೂಕಿನಲ್ಲಿ 20 ಮನೆ ಕಟ್ಟಿಸಿಕೊಟ್ಟಿದ್ದಾರೆ.
ಪುನರ್ವಸತಿ ಕಲ್ಪಿತ ದೇವದಾಸಿ ಯರ ಪ್ರಗತಿ ಮತ್ತು ಇತರೆ ಸಮಾಜ ಮುಖಿ ಕಾರ್ಯದಲ್ಲಿ ನಿರತವಾಗಿರುವ ‘ಸಖಿ’ ಟ್ರಸ್ಟ್‌ನ ಕಾರ್ಯಗಳಿಂದ ಪ್ರೇರಿತರಾಗಿರುವ ನಿತ್ಯಾನಂದ, ಸದ್ಯ ತುಮಕೂರು ಜಿಲ್ಲೆ ಪಾವಗಡದ ಹಳ್ಳಿಗಳಲ್ಲಿ ಪೌರ ಕಾರ್ಮಿಕರಿಗೆ 20 ಮನೆಗಳನ್ನು ಸಖಿ ಟ್ರಸ್ಟ್ ಉಸ್ತುವಾರಿ ಯಲ್ಲೇ ಕಟ್ಟಿಸಿಕೊಡಲು ನಿರ್ಧರಿಸಿದ್ದಾರೆ.
ಹೊಸಪೇಟೆ ತಾಲ್ಲೂಕಿನ ಪಿ.ಕೆ.ಹಳ್ಳಿಯಲ್ಲಿ 9, ವಡ್ಡರಹಳ್ಳಿಯಲ್ಲಿ 1ಮನೆ, ಬಸವನದುರ್ಗ, 82 ಡಣಾಪುರ ಗ್ರಾಮದಲ್ಲಿ ತಲಾ 4, ಬೆನಕಾಪುರದಲ್ಲಿ 2 ಮನೆಗಳನ್ನು ಈಗ ನಿರ್ಮಿಸಲಾಗಿದ್ದು, ಅವುಗಳ ಉದ್ಘಾಟನೆಗೆ ಅಮೆರಿಕದಿಂದ ನಿತ್ಯಾನಂದ ಬಂದಿದ್ದಾರೆ.
‘ರಾಜ್ಯದಲ್ಲಿ ಅರ್ಹ, ಬಡ ಮಹಿಳೆಯರಿಗೆ 100 ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡಿದೆ. ಈಗ 56 ಮನೆ ನಿರ್ಮಾಣ ಆಗಿದೆ. ಸಖಿ ಟ್ರಸ್ಟ್ ಜೊತೆಗೆ ಮುಂದಿನ ಯೋಜನೆಗಳ ಜಾರಿಗೊಳಿಸುವ ಉದ್ದೇಶವಿದೆ. ಪಾವಗಡದಲ್ಲಿ ಪೌರಕಾರ್ಮಿಕರಿಗೆ 20 ಮನೆಗಳನ್ನು ನೀಡಲು ಅರ್ಹರ ಆಯ್ಕೆ ನಡೆದಿದೆ’ ಎಂದು ನಿತ್ಯಾನಂದ ಹೇಳಿದರು.
‘ಮನೆನಿರ್ಮಾಣದ ಇಡೀ ವೆಚ್ಚವನ್ನು ನಾನೇ ಭರಿಸುತ್ತೇನೆ. ದೇವರು ನನಗೆ ಅದೃಷ್ಟ, ಸಂಪತ್ತು ಕೊಟ್ಟಿದ್ದಾನೆ. ಸಾಯುವಾಗ ಸಂಪತ್ತನ್ನು ಕೊಂಡೊಯ್ಯು ವುದಿಲ್ಲ. ಹೀಗಾಗಿ ನನ್ನಿಂದ ನೆರವು ಪಡೆದವರು ಮುಂದೊಂದು ದಿನ ಇತರರಿಗೂ ನೆರವಾಗುತ್ತಾರೆ ಎಂಬ ಭಾವನೆ ಯೊಂದಿಗೆ ಈ ಸೇವೆಯಲ್ಲಿ ತೊಡಗಿ ದ್ದೇನೆ’ ಎಂದು ಅವರು ಹೇಳಿದರು.
ಎಲ್ಲೆಲ್ಲಿ ಮನೆ ?: ನಿತ್ಯಾನಂದ ಅವರು ಹೊಸಪೇಟೆ ತಾಲ್ಲೂಕಿನಲ್ಲಿ ಮೊದಲ ವರ್ಷ ತಲಾ ₹2.80 ಲಕ್ಷ ವೆಚ್ಚದಂತೆ ಐದು ಮನೆಗಳನ್ನು, ಎರಡನೇ ವರ್ಷ ತಲಾ ₹2.90 ಲಕ್ಷ ವೆಚ್ಚದಂತೆ 10 ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಈ ಬಾರಿ 20 ಮನೆಗಳನ್ನು ತಲಾ ₹3.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿ
ಕೊಟ್ಟಿದ್ದಾರೆ.
ಹೀಗಾಗಿ ಹೊಸಪೇಟೆ ತಾಲ್ಲೂಕಿ ನಲ್ಲಿಯೇ 35 ಮನೆಗಳನ್ನು ಕಟ್ಟಿಸಿಕೊಟ್ಟಂತಾಗಿದೆ. ಕೋಲಾರದಲ್ಲಿ 11, ಬೆಳಗಾವಿಯಲ್ಲಿ ನಾಲ್ಕು ಮತ್ತು ಚಾಮರಾಜನಗರದಲ್ಲಿ ಆರು ಮನೆಗಳನ್ನು ಅವರು ಕಟ್ಟಿಸಿಕೊಟ್ಟಿದ್ದಾರೆ.
ದಾನಿಗಳ ವಿಶ್ವಾಸ ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸಖಿ ಟ್ರಸ್ಟ್ ಅದಕ್ಕೆ ಪಾತ್ರವಾಗಿರುವುದರಿಂದ ಸಂತೋಷವಾಗಿದೆ. ನಮ್ಮ ಹೊಣೆಗಾರಿಕೆ ಇನ್ನಷ್ಟು ಹೆಚ್ಚಿದೆ.ಎಂ.ಭಾಗ್ಯಲಕ್ಷ್ಮಿ, ಅಧ್ಯಕ್ಷೆ, ಸಖಿ ಟ್ರಸ್ಟ್
ಬಡವರು, ನಿರ್ಗತಿಕರ ಹೆಸರಲ್ಲಿ ವಂಚಿಸುವುದು ದೊಡ್ಡ ತಪ್ಪು. ಮನೆ ದಾನ ಮಾಡುವಾಗಲೂ ಅಷ್ಟೇ, ನಿಜವಾದ ಫಲಾನುಭವಿಗಳನ್ನು ನಾನೇ ಆಯ್ಕೆ ಮಾಡುತ್ತೇನೆ, ಸಖಿ ಟ್ರಸ್ಟ್ ನನ್ನ ನಂಬಿಕೆ ಉಳಿಸಿಕೊಂಡಿದೆನಿತ್ಯಾನಂದ, ಬ್ಯಾಂಕ್ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.