ADVERTISEMENT

ರಸ್ತೆ ಅಪಘಾತಗಳಲ್ಲಿ ಯುವಕರ ಸಾವು ಹೆಚ್ಚು: ಡಿಸಿಪಿ ನಾರಾಯಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 13:46 IST
Last Updated 18 ಮಾರ್ಚ್ 2021, 13:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ರಸ್ತೆ ಅಪಘಾತಗಳಲ್ಲಿ ಸಾಯುತ್ತಿರುವವರ ಪೈಕಿ 20 ರಿಂದ 30 ವರ್ಷ ವಯಸ್ಸಿನೊಳಗಿನ ಯುವಕರೇ ಹೆಚ್ಚಿದ್ದಾರೆ’ ಎಂದು ಸಂಚಾರ ವಿಭಾಗದ (ಪೂರ್ವ) ಡಿಸಿಪಿ ನಾರಾಯಣ ಗುರುವಾರ ಹೇಳಿದರು.

ಫೋರ್ಟಿಸ್‌ ಆಸ್ಪ‍ತ್ರೆಯು ಗಾಡಿ ಲೈಸೆನ್ಸ್‌ ಡಾಟ್‌ ಕಾಂ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ತಲೆ ಗಾಯ ಅರಿವು ದಿನ (ವರ್ಲ್ಡ್‌ ಹೆಡ್‌ ಇಂಜ್ಯುರಿ ಅವಾರ್ನೆಸ್‌ ಡೇ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುವಕರು ನಮ್ಮ ದೇಶದ ಆಸ್ತಿ. ಸಂಚಾರ ನಿಯಮ ಪಾಲನೆಯ ವಿಚಾರದಲ್ಲಿ ಅವರು ಉದ್ಧಟತನ ತೋರುತ್ತಿದ್ದಾರೆ. ಆ ಮೂಲಕ ಅಮೂಲ್ಯವಾದ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಎಂದು ನಾವು ಹೇಳುತ್ತಲೇ ಇದ್ದೇವೆ. ಈ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವರು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಧರಿಸುತ್ತಾರೆ. ಹೀಗಾಗಿ ಅಪಘಾತದ ವೇಳೆ ಹೆಚ್ಚಿನವರಿಗೆ ತಲೆಗೆ ಬಲವಾದ ಪೆಟ್ಟು ಬೀಳುತ್ತದೆ. ಅಂತಹವರು ತೀವ್ರ ರಕ್ತಸ್ರಾವದಿಂದ ಅಸು ನೀಗುತ್ತಾರೆ’ ಎಂದರು.

ADVERTISEMENT

ಫೋರ್ಟಿಸ್‌ ಆಸ್ಪತ್ರೆಯ ನ್ಯೂರೊ ಸರ್ಜರಿ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ಸತೀಶ್‌ ‘ಅತಿವೇಗದ ಚಾಲನೆಯಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು ಇದರಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಪ್ರತಿ ಆರು ಮಂದಿಯಲ್ಲಿ ಒಬ್ಬರು ತಲೆಗೆ ‍ಗಂಭೀರವಾದ ಪೆಟ್ಟು ಬಿದ್ದು ಸಾಯುತ್ತಿದ್ದಾರೆ. ಗುಣಮಟ್ಟದ ಹೆಲ್ಮೆಟ್‌ ಧರಿಸುವುದರಿಂದ ಇಂತಹ ಮರಣ ಪ್ರಮಾಣವನ್ನು ನಿಯಂತ್ರಿಸಬಹುದು’ ಎಂದು ತಿಳಿಸಿದರು.

ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯ ವಲಯ ನಿರ್ದೇಶಕ ಡಾ.ಮನೀಷ್‌ ಮಟ್ಟೂ ಇದ್ದರು.

ಕಾರ್ಯಕ್ರಮದಲ್ಲಿ 55 ಮಂದಿ ಹೊಸ ಬೈಕ್‌ ಚಾಲಕರಿಗೆ ಚಾಲನಾ ಪ್ರಮಾಣ ಪತ್ರ ಹಾಗೂ ಹೆಲ್ಮೆಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.