ಬೆಂಗಳೂರು: ಆ್ಯಪ್ ಮೂಲಕ ನೀಡಲಾಗುತ್ತಿರುವ ಆಟೊರಿಕ್ಷಾ ಸೇವೆಯ ದರ ಹೆಚ್ಚಳಕ್ಕೆ ಅನುಮತಿ ಕೋರಿ ಓಲಾ ಮತ್ತು ಉಬರ್ ಕಂಪನಿಗಳು ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಇದೇ 21ರವರೆಗೆ ಕಾಲಾವಕಾಶ ನೀಡಿದೆ.
‘ಆ್ಯಪ್ ಆಧಾರಿತ ಓಲಾ ಮತ್ತು ಉಬರ್ ಆಟೊರಿಕ್ಷಾ ಸೇವೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಇದೇ ವೇಳೆ, ‘ಅರ್ಜಿದಾರ ಕಂಪನಿಗಳು ಆಟೋರಿಕ್ಷಾ ಸೇವೆಗೆ ದರ ನಿಗದಿಪಡಿಸಿ ಸರ್ಕಾರ 2021ರ ನವೆಂಬರ್ 6ರಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿರುವ ದರದ ಜೊತೆಗೆ ಶೇ10ರಷ್ಟು ಹೆಚ್ಚುವರಿ ಹಣ ಮತ್ತು ಸೇವಾ ತೆರಿಗೆಯನ್ನು ಪಡೆಯಬೇಕು. ದರ ನಿಗದಿಪಡಿಸುವವರೆಗೆ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಸರ್ಕಾರ ಬಲವಂತದ ಕ್ರಮ ಜರುಗಿಸಬಾರದು. ಆಟೋರಿಕ್ಷಾ ಸೇವೆ ಒದಗಿಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಬೇಕು’ ಎಂದು ನಿರ್ದೇಶಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೂ ವಿಸ್ತರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.