ADVERTISEMENT

ಕಡಲ್ಕೊರೆತ ಕುರಿತು ಒಳನೋಟ: ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 12:37 IST
Last Updated 24 ಜುಲೈ 2022, 12:37 IST
ಬೀರಪ್ಪ ಡಿ. ಡಂಬಳಿ
ಬೀರಪ್ಪ ಡಿ. ಡಂಬಳಿ   

‘ಹಸಿರು ಗೋಡೆಯೇ ನಾಶ’

ಹಿಂದಿನ ದಿನಗಳಲ್ಲಿ ಸಮುದ್ರದ ದಂಡೆಯ ಉದ್ದಕ್ಕೂ ಮರಗಳಿದ್ದವು. ಸುರಗಿ, ತಾರೆ, ಗೇರು, ಹಲಸು... ಹೀಗೆ ಅನೇಕ ಮರಗಳು ಕಡಲ ಕೊರತೆ ತಡೆಯುತ್ತಿದ್ದವು. ಜತೆಗೆ ಸಮುದ್ರದ ದಂಡೆ ಸಹ ಹಸಿರಾಗಿತ್ತು. ತೀರಕ್ಕೆ ಹಸಿರಿನ ಭದ್ರ ಕವಚ ಇತ್ತು. ಆದರೆ, ಇಂದು ಏನಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಸಮುದ್ರದ ದಂಡೆಯಲ್ಲಿದ್ದ ಬಹುತೇಕ ಹಸಿರುಗೋಡೆ ನಾಶವಾಗಿದೆ. ಸಮುದ್ರದ ತಡೆಗೋಡೆ ನಿರ್ಮಾಣಕ್ಕೆ ಪಶ್ಚಿಮಘಟ್ಟಗಳಲ್ಲಿ ಗಣಿಗಾರಿಕೆ ನಡೆಸಿ ಕಲ್ಲು ತಂದು ಸಮುದ್ರದ ದಂಡೆಯಲ್ಲಿ ಸುರಿಯುತ್ತಿದ್ದಾರೆ ತಾಪಮಾನ ಹೆಚ್ಚಳದಿಂದ ಸಮುದ್ರದ ಮಟ್ಟ ಏರಿಕೆಯಾಗುತ್ತಿದೆ. ಸಮುದ್ರದ ದಂಡೆಯ ಮೇಲೆ ಅವೈಜ್ಞಾನಿಕ ಅಭಿವೃದ್ಧಿಯೂ ವೇಗ ಪಡೆದಿದೆ. ತುಂಬಾ ಸರಳವಾಗಿ ಸಮಸ್ಯೆ ಪರಿಹರಿಸಲು ಸಾಧ್ಯವಿರುವಾಗ ಅವೈಜ್ಞಾನಿಕ ಅಭಿವೃದ್ಧಿಗೆ ಸರ್ಕಾರ ಮಣೆ ಹಾಕುತ್ತಿರುವುದು ದುರಂತ. ಮೊದಲಿನಂತೆ ಸ್ಥಳೀಯ ಗಿಡಗಳನ್ನೇ ನೆಟ್ಟು ಸಮುದ್ರ ದಂಡೆಯನ್ನು ಮತ್ತೆ ಹಸಿರೀಕರಣ ಮಾಡಬಹುದು ಅಲ್ಲವೇ? ಕೇವಲ ಗಾಳಿ ಗಿಡ ನಡೆವುದಲ್ಲ; ಅದರ ಜೊತೆ ಇನ್ನೂ ಅನೇಕ ಸ್ಥಳೀಯ ಗಿಡಗಳನ್ನು ನೆಟ್ಟು ಪೋಷಿಸುವುದು ಅತಿಮುಖ್ಯ.

ADVERTISEMENT

- ನಿಶ್ಚಿತಾ, ಅಂಕೋಲಾ, ಉತ್ತರ ಕನ್ನಡ ಜಿಲ್ಲೆ

****

’ಮ್ಯಾಂಗ್ರೋವ್’ ಕಾಡುಗಳಿಂದ ಪರಿಹಾರ

ರಾಜ್ಯವು ಮೂರು ಜಿಲ್ಲೆ ವ್ಯಾಪ್ತಿಯಲ್ಲಿ 320 ಕಿ.ಮೀ ಕರಾವಳಿ ತೀರ ಒಳಗೊಂಡಿದೆ. ಈ ತೀರವು ಪ್ರಸ್ತುತ ಅವೈಜ್ಞಾನಿಕ ನೈಸರ್ಗಿಕ ವಿಕೋಪಗಳಿಂದ ಕಡಲ್ಕೊರೆತ ಸಮಸ್ಯೆಗಳಿಂದ ತೀರದಲ್ಲಿ ಹಲವಾರು ಮಾರಕ ವಿದ್ಯಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಂತಹ ಕಡಲ್ಕೊರೆತ ತಡೆಯಲು ಸರ್ಕಾರವು ₹ 864 ಕೋಟಿ ಹಣಕಾಸಿನಲ್ಲಿ ಕೃತಕ ತಡೆಗೊಡೆ ನಿರ್ಮಿಸಿದ್ದರೂ ಲಾಭವಾಗಿಲ್ಲ. ಜತೆಗೆ, ಸರ್ಕಾರದ ಹಣವು ಕೂಡ ಪೋಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕೃತಕ ಕಾರ್ಯಗಳಿಗೆ ಮಾರುಹೋಗದೆ ತೀರದುದ್ದಕ್ಕೂ ಮ್ಯಾಂಗ್ರೋವ್ ಕಾಡು ಅಭಿವೃದ್ಧಿ ಪಡಿಸುವುದರ ಮೂಲಕ ಈ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಈ ಕ್ರಮವು ಪರಿಸರ ಸ್ನೇಹಿ ಪೂರಕವಾದ ಅಂಶ.

– ಬೀರಪ್ಪ ಡಿ. ಡಂಬಳಿ, ಬೆಳಗಾವಿ

***

‘ಪ್ರಕೃತಿ ಜತೆಗೆ ಹೆಜ್ಜೆ ಹಾಕೋಣ...’

ಕಡಲ್ಕೊರತೆ ತಪ್ಪಿಸಲು ಸರ್ಕಾರ ಪ್ರಕೃತಿಯ ಜೊತೆಗೆ ಹೆಜ್ಜೆ ಹಾಕಬೇಕಿದೆ. ನೈಸರ್ಗಿಕವಾಗಿ ಹಸಿರು ಕವಚ ಯೋಜನೆ ಅತಿ ಹೆಚ್ಚು ಒತ್ತು ನೀಡಬೇಕು. ಎಲ್ಲಿಂದಲೋ ತಂದು ಬರೀ ಬಂಡೆಕಲ್ಲು ಹಾಕುವುದರಿಂದ ಪರಿಹಾರ ಸಿಗುವುದಿಲ್ಲ. ಮಳೆಗಾಲದಲ್ಲಿ ಚಿಂತಿಸುವುದನ್ನು ಬಿಟ್ಟು ಮಳೆಗಾಲದ ಪೂರ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ತರಬೇಕು. ಜೊತೆಗೆ, ತಜ್ಞರ ಸಲಹೆ ಪಡೆಯಬೇಕು.

– ಜಿ.ಕಿಶೋರ್ ಕುಮಾರ್‌, ಶಿವಮೊಗ್ಗ

***

ಶಾಶ್ವತ ಪರಿಹಾರ ಅಗತ್ಯ

ರಾಜ್ಯದ ಕರಾವಳಿ ತೀರದ ಉದ್ದಕ್ಕೂ ಕಡಲ್ಕೊರೆತ ಸಮಸ್ಯೆಯನ್ನು ನೀಗಿಸಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸಮುದ್ರ ಅಲೆಯ ತಡೆಗೆ ತಡೆಗೋಡೆ ನಿರ್ಮಾಣ ಮತ್ತು ಕಲ್ಲುಗಳ ಜೋಡಣೆಯಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ.
ಸಮುದ್ರ ತೀರವನ್ನು ಸವೆತದಿಂದ ರಕ್ಷಿಸಲು ಮ್ಯಾಂಗ್ರೋವ್ ಮರಗಳನ್ನು ಬೆಳೆಸುವುದು ಉತ್ತಮ ಪರಿಹಾರ. ಇವು ಹಸಿರು ಕವಚದಂತೆ ಇರುತ್ತವೆ. ಮ್ಯಾಂಗ್ರೋವ್‌ ಮರಗಳು ದಟ್ಟವಾದ ಬೇರುಗಳು ಆಳವಾಗಿ ಹರಡಿಕೊಂಡಿರುವುದರಿಂದ ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಮರಗಳು ನಿಸರ್ಗದ ತಡೆಗೋಡೆಯಂತೆ ಕಾರ್ಯ ನಿರ್ವಹಿಸುತ್ತವೆ. ಬೇರುಗಳು ನೀರಿನ ಹರಿವನ್ನು ನಿಧಾನಗೊಳಿಸುತ್ತದೆ. ಕೆಸರು ಶೇಖರಣೆ ಉತ್ತೇಜಿಸುತ್ತದೆ. ಸವೆತ ಕಡಿಮೆ ಮಾಡುತ್ತದೆ. ಸರ್ಕಾರ ಈ ರೀತಿಯ ಕ್ರಮ ಕೈಗೊಂಡರೆ ಕಡಿಮೆ ಖರ್ಚಿನಲ್ಲಿ ಕರಾವಳಿಯ ಕಡಲ್ಕೊರೆತ ಶಾಶ್ವತವಾಗಿ ಪರಿಹರಿಸಬಹುದು.

– ಬಸವರಾಜ ನರಗಟ್ಟಿ, ಬೆಳಗಾವಿ

***

‘ಅವೈಜ್ಞಾನಿಕ ಕಾಮಗಾರಿ ಬೇಡ’

ಅವೈಜ್ಞಾನಿಕ ಕಾಮಗಾರಿಯಿಂದ ಕರಾವಳಿ ಭಾಗದಲ್ಲಿ ಕಡಲ್ಕೊರೆತ ನಿರಂತರವಾಗಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ ನೆರವಿನಿಂದ ಸರ್ಕಾರವು ₹ 864 ಕೋಟಿ ಖರ್ಚು ಮಾಡಿ ಏನು ಸಾಧಿಸಿದಂತಾಯಿತು. ಮಳೆಗಾಲದಲ್ಲಿ‌ ಮತ್ತೆ ಅದೇ ಸಮಸ್ಯೆ. ಕಡಲ್ಕೊರೆತದಿಂದ ಪುನಃ ಮನೆಗಳಿಗೆ ಹಾನಿ, ರಸ್ತೆ ಕೊಚ್ಚಿ ಹೋಗುವಿಕೆ, ಜನಜೀವನ ಅಸ್ತವ್ಯಸ್ತ, ಮನುಷ್ಯ, ಪ್ರಾಣಿಗಳ ಜೀವ ಹಾನಿ ಮುಂತಾದವನ್ನು ನೋಡಲಾಗುವುದಿಲ್ಲ. ಕಾಮಗಾರಿಗೆ ಕೋಟಿಗಟ್ಟಲೆ ಅನುದಾನ ಖರ್ಚು ಮಾಡಲಾಗುತ್ತಿದೆ. ಅದರ ಪೂರ್ಣಲಾಭವು ಜನರಿಗೆ ಸಿಗಬೇಕು. ಕಾಮಗಾರಿಗಳಲ್ಲಿ ವೈಜ್ಞಾನಿಕತೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಇರಬೇಕು.

– ಡಾ.ಎಸ್.ಡಿ.ನಾಯ್ಕ, ಕೆಎಚ್‌ಬಿ ಕಾರವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.