ADVERTISEMENT

ಅಯ್ಯಪ್ಪ ದೊರೆ ಕೊಲೆಗೆ ನೀಡಲಾಗಿತ್ತು ₹1 ಕೋಟಿ ಸುಪಾರಿ!

20 ಲಕ್ಷ ಹಣ ಮುಂಗಡವಾಗಿ ನೀಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 9:06 IST
Last Updated 17 ಅಕ್ಟೋಬರ್ 2019, 9:06 IST
   

ಬೆಂಗಳೂರು: ನಗರದಲ್ಲಿ ನಡೆದಿದ್ದ ಅಯ್ಯಪ್ಪ ದೊರೆ ಹತ್ಯೆ ಸಂಬಂಧ ಬನ್ನೇರುಘಟ್ಟ ಸಮೀಪದಅಲಯನ್ಸ್ ಯುನಿವರ್ಸಿಟಿಯ ಸುಧೀರ್ ಅಂಗೂರ ಹಾಗೂ ಸೂರಜ್ ಸಿಂಗ್‌ ಎಂಬುವವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

'ಅಲಯನ್ಸ್ ಯುನಿವರ್ಸಿಟಿ ವಿವಾದವೇ ಕೊಲೆಗೆ ಕಾರಣ. ಅಯ್ಯಪ್ಪ ದೊರೆ ಕೊಲೆ ಮಾಡಲು ಆರೋಪಿಗಳು 1 ಕೋಟಿಗೆ ಸುಪಾರಿ ನೀಡಿದ್ದರು. 20 ಲಕ್ಷ ಮುಂಗಡ ಹಣನೀಡಿದ್ದರು' ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದರು.

'ಅಯ್ಯಪ್ಪ ದೊರೆ ಅವರು ಅಲಯನ್ಸ್ ವಿಶ್ವವಿದ್ಯಾಲಯ ಮಾಜಿ ಕುಲಪತಿ. ಅವರನ್ನು ಮಂಗಳವಾರ ರಾತ್ರಿ ಅವರ ಮನೆಯಿಂದ ಕೂಗಳತೆ ದೂರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕೆಲವು ವ್ಯಾಜ್ಯಗಳಿದ್ದವು. ಇದೇ ಕಾರಣಕ್ಕೆ ಕೊಲೆ ನಡೆದಿರಬಹುದು,’ ಎಂಬ ಶಂಕೆಯನ್ನು ಪೊಲೀಸರು ಕೊಲೆ ನಡೆದ ದಿನವೇ ವ್ಯಕ್ತಪಡಿಸಿದ್ದರು.

ADVERTISEMENT

'ಬೆಳಿಗ್ಗೆ ಆರು ಗಂಟೆಗೆ ಮಾಹಿತಿ ಬಂತು, ಮಂಗಳವಾರ ರಾತ್ರಿ ಊಟ ಮುಗಿಸಿ ಅಯ್ಯಪ್ಪ ದೊರೆ ವಾಕಿಂಗ್ ಹೋಗಿದ್ದಾರೆ. ಈ ವೇಳೆ ಯಾರೋ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅವರ ಪತ್ನಿ ಭಾವನಾ ಅವರಿಂದ ಸಾಕಷ್ಟು ಮಾಹಿತಿಯನ್ನು ಪಡೆದಿದ್ದೇವೆ' ಎಂದುಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹೇಳಿದರು.

ಅಯ್ಯಪ್ಪ ದೊರೆ ವಿಜಯಪುರ ಮೂಲದವರು. 17 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸವಿದ್ದರು. 7-8 ವರ್ಷ ಅಲಯನ್ಸ್ ಯೂನಿವರ್ಸಿಟಿ ಕುಲಪತಿ ಆಗಿದ್ದರು. ಕೋರ್ಟ್‌ನಲ್ಲಿ ಅಲಯನ್ಸ್ ವಿಶ್ವವಿದ್ಯಾಲಯ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ನಡೆಯುತ್ತಲೇ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.