ADVERTISEMENT

1ರಿಂದ 7ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಡೆಸುವಂತಿಲ್ಲ: ಸಂಪುಟ ಸಭೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 11:18 IST
Last Updated 11 ಜೂನ್ 2020, 11:18 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: 1 ರಿಂದ 7ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ನಡೆಸುವಂತಿಲ್ಲ ಎಂದು ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬುಧವಾರ1ರಿಂದ 5 ರವರೆಗೆ ಆನ್‌ಲೈನ್‌ ಶಿಕ್ಷಣ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದರು. ಅದನ್ನು ಏಳನೇ ತರಗತಿವರೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಈ ಹಿಂದೆ ನಿರ್ಧಾರ ಮಾಡಿದ ದಿನಾಂಕದಂದೇ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ಬೆಂಗಳೂರು ವಿ.ವಿ ಹೆಸರು ಬದಲಾವಣೆ’
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಹೆಸರಿಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯ ಎಂಬ ಹೆಸರನಲ್ಲಿ ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯ ಇದೆ. ಆದ್ದರಿಂದ ಹೆಸರು ಬದಲಿಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಲ್ಲದೆ, ಸೆಂಟ್ರಲ್‌ ಕಾಲೇಜ್‌ ಆವರದಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜನ್ನು ಪ್ರತ್ಯೇಕಿಸಿ ಸೃಪತುಂಗಾ ವಿಶ್ಶವಿದ್ಯಾಲಯ ಎಂದು ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತಂದು ಒಂದೇ ಮುಕ್ತ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಉಳಿದ ಮುಕ್ತ ವಿಶ್ಶವಿದ್ಯಾಲಯಗಳನ್ನು ಅದರಲ್ಲಿ ವಿಲೀನಗೊಳಿಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ADVERTISEMENT

‘ಕೃಷಿಕರಲ್ಲದವರಿಗೂ ಭೂಮಿ ಖರೀದಿಸಲು ಅವಕಾಶ’
ಬೆಂಗಳೂರು: ಕರ್ನಾಟಕ ಭೂಕಂದಾಯ ಕಾಯ್ದೆ 1961 ಕಲಂ 79 ಎ,ಬಿ,ಸಿ ಮತ್ತು 80 ಅನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡಲು ಮತ್ತು ಕಲಂ 63 ರಡಿ ನಿಗದಿ ಮಾಡಿರುವ ಸೀಲಿಂಗ್‌ ಮಿತಿಯನ್ನು ದ್ವಿಗುಣಗೊಳಿಸುವ ಸಂಬಂಧ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ. ಇದರಿಂದ, ಇನ್ನು ಮುಂದೆ ರಾಜ್ಯದಲ್ಲಿ ಕೃಷಿಕರಲ್ಲದವರೂ ಕೃಷಿ ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದೆ. ಸಮಗ್ರವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಈಗಿನ ಸ್ಥಿತಿಗೆ ಅನುಗುಣವಾಗಿ ಕಾಯ್ದೆ ಸರಳೀಕರಿಸಬೇಕಾಗಿದೆ. ಈ ಸಂಬಂಧ ಹೈಕೋರ್ಟ್‌ ಸೂಚನೆಯನ್ನೂ ನೀಡಿದೆ. ಭೂಸುಧಾರಣೆ ಕಾಯ್ದೆ 1961, ಕಲಂ 79 ಎ,ಬಿ,ಸಿ ಮತ್ತು 80 ಅನ್ನು ತೆಗೆದುಹಾಕಿದರೆ ಜನಸಾಮಾನ್ಯರಿಗೆ ಕಿರುಕುಳ ತಪ್ಪುತ್ತದೆ. ಕಲಂ 63 ರಡಿ ಇರುವ ಭೂಮಿಯ ಗರಿಷ್ಠಮಿತಿಯನ್ನು ಹೆಚ್ಚಿಸುವ ಅಗತ್ಯವಿದ್ದು, ಕುಟುಂಬವಿಲ್ಲದ ವ್ಯಕ್ತಿಗೆ ಅಥವಾ ಒಂದು ಕುಟುಂಬಕ್ಕೆ ಗರಿಷ್ಠ ಮಿತಿಯನ್ನು 10 ಯುನಿಟ್‌ನಿಂದ 20 ಯುನಿಟ್‌ಗೆ ಹೆಚ್ಚಿಸಬಹುದಾಗಿದೆ. ಅಲ್ಲದೆ, 5 ಕ್ಕಿಂತ ಹೆಚ್ಚಿನ ಜನರನ್ನು ಒಳಗೊಂಡ ಕುಟುಂಬದಲ್ಲಿ ಭೂಮಿಯ ಗರಿಷ್ಠ ಮಿತಿಯನ್ನು 20 ಯುನಿಟ್‌ನಿಂದ 40 ಯುನಿಟ್‌ಗೆ ಹೆಚ್ಚಿಸಬಹುದಾಗಿದೆ ಎಂದು ಅಶೋಕ ಹೇಳಿದರು.

‘ಪಂಚಾಯ್ತಿ ಮೇಲ್ದರ್ಜೆಗೆ’
ಉಡುಪಿ ಜಿಲ್ಲೆಯ ಬೈಂದೂರು ಗ್ರಾಮಪಂಚಾಯ್ತಿ, ಯಡತಾರೆ, ಪಡುವಾರಿ ಗ್ರಾಮಪಂಚಾಯ್ತಿಯನ್ನು ಸೇರಿ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.